ADVERTISEMENT

ಬಾಡಿಗೆ ಬೈಕ್‌ಗಳ ಹಾವಳಿ ವಿರುದ್ಧ ಹಂಪಿ ಆಟೊ ಚಾಲಕರಿಂದ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 12:52 IST
Last Updated 27 ಅಕ್ಟೋಬರ್ 2025, 12:52 IST
<div class="paragraphs"><p>ಬಾಡಿಗೆ ಬೈಕ್‌ಗಳ ಹಾವಳಿ ವಿರುದ್ಧ ಹಂಪಿ ಆಟೊ ಚಾಲಕರಿಂದ ಬೃಹತ್ ಪ್ರತಿಭಟನೆ</p></div>

ಬಾಡಿಗೆ ಬೈಕ್‌ಗಳ ಹಾವಳಿ ವಿರುದ್ಧ ಹಂಪಿ ಆಟೊ ಚಾಲಕರಿಂದ ಬೃಹತ್ ಪ್ರತಿಭಟನೆ

   

ಹೊಸಪೇಟೆ (ವಿಜಯನಗರ): ಹಂಪಿಯಲ್ಲಿ ಬಾಡಿಗೆ ಬೈಕ್‌ ಸೇವೆ ನೀಡುವುದಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಹಂಪಿ, ಕಮಲಾಪುರ, ಕಡ್ಡಿರಾಂಪುರ ಹಾಗೂ ಹೊಸಪೇಟೆಯ ನೂರಾರು ಆಟೋರಿಕ್ಷಾಗಳು ಸೋಮವಾರ ಬೃಹತ್ ಜಾಥಾ ನಡೆಸಿ ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಬಳಿ ಪ್ರತಿಭಟನೆ ನಡೆಸಿದವು.

ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ರಥಬೀದಿಯಿಂದ ಆರಂಭವಾದ ರಿಕ್ಷಾಗಳ ಬೃಹತ್ ಜಾಥಾ ಕಮಲಾಪುರ, ಕಡ್ಡಿರಾಂಪುರ, ಗಾಳೆಮ್ಮನಗುಡಿ, ಮಲಪನಗುಡಿ, ಕೊಂಡನಾಯಕನಹಳ್ಳಿ, ಅನಂತಶಯನಗುಡಿ, ನಗರದ ಕನಕದಾಸ ವೃತ್ತ, ಪುನೀತ್‌ ರಾಜ್‌ಕುಮಾರ್ ವೃತ್ತ, ವಾಲ್ಮೀಕಿ ವೃತ್ತ ಮೂಲಕ ಆರ್‌ಟಿಒ ಕಚೇರಿಗೆ ಬಂದು ತಲುಪಿತು. ಬಳಿಕ ಅಲ್ಲಿ ಪ್ರತಿಭಟನೆ ನಡೆಸಲಾಯಿತು.

ADVERTISEMENT

ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ಸ್ (ಎಫ್‌ಕೆಎಆರ್‌ಡಿಯು–ಸಿಐಟಿಯು, ಆಐಆರ್‌ಟಿಡಬ್ಲ್ಯುಎಫ್‌), ವಿಜಯನಗರ ಜಿಲ್ಲಾ ಆಟೊ ಚಾಲಕರ ಸಂಘಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಗೆ  ಹೊಸಪೇಟೆಯ ಹಲವು ರಿಕ್ಷಾಗಳೂ ಸಾಥ್ ನೀಡಿದ್ದವು. ಹೀಗಾಗಿ 450ರಷ್ಟು ರಿಕ್ಷಾಗಳಿಂದ ಈ ಬೃಹತ್ ಪ್ರತಿಭಟನೆ ನಡೆಯಿತು.

ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ತಾಲ್ಲೂಕು ಅಧ್ಯಕ್ಷ  ಸಂತೋಷ್ ಕುಮಾರ್ ಕೆ.ಎಂ.ಮಾತನಾಡಿ, ಹಂಪಿ, ಕಮಲಾಪುರ, ಕಡ್ಡಿರಾಂಪುರ ಭಾಗದಲ್ಲಿ ಅನಧಿಕೃತವಾಗಿ ದ್ವಿಚಕ್ರ ವಾಹನಗಳನ್ನು ಬಾಡಿಗೆ ನೀಡುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಇತ್ತೀಚೆಗೆ ಬೆಂಗಳೂರು ಮೂಲದ ಸಂಸ್ಥೆ ಬೆಂಗಳೂರು ವಿಳಾಸದಿಂದ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡಲು ನೋಂದಣಿ ಮಾಡಿಕೊಂಡಿದೆ. ಕಚೇರಿಯ ಕೇಂದ್ರ ಸ್ಥಾನವನ್ನು ಬದಲಾಯಿಸಲು ಅವಕಾಶವಿಲ್ಲದಿದ್ದರೂ ಸ್ಥಳೀಯವಾಗಿ ಫ್ರಾಂಚೈಸಿ ನೀಡಿದೆ. ಇದು ಅಕ್ರಮವಾಗಿದ್ದು, ಇದರ ಬಗ್ಗೆ ಆರ್‌ಟಿಒಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಪ್ರತಿಭಟನೆ ನಡೆಸಲಾಗಿದೆ ಎಂದರು.

‘ರೆಂಟ್ ಎ ಮೋಟಾರ್ ಸೈಕಲ್ ಸ್ಕೀಮ್ 1997ರ ಅನ್ವಯ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡಲು ಇಲಾಖೆಯಿಂದ ಅನುಮತಿ ಪಡೆದಿರುವ ಸ್ಥಳದಿಂದ ಮಾತ್ರ ವಾಹನಗಳನ್ನು ಬಾಡಿಗೆಗೆ ನೀಡಲು ಅವಕಾಶವಿದ್ದು.

ಕಾಯ್ದೆ ಅಡಿ ಕೇಂದ್ರ ಸ್ಥಾನ ಬದಲಾಯಿಸಲು ಅವಕಾಶವಿಲ್ಲ ಮತ್ತು ಪರವಾನಗಿ ಪಡೆದಿರುವ ವ್ಯಕ್ತಿ ಅಥವಾ ಕಂಪನಿ ಪರವಾನಗಿ ಹೊಂದಿರುವ ವಾಹನ ಅಥವಾ ಪರವಾನಗಿಯನ್ನು ಲೀಸ್, ರೆಂಟ್ ಅಥವಾ ಫ್ರಾಂಚೈಸಿ ಒಪ್ಪಂದದ ಆಧಾರದ ಮೇಲೆ ಅನ್ಯ ವ್ಯಕ್ತಿಗಳಿಗೆ ನೀಡಲು ಅವಕಾಶ ಇರುವುದಿಲ್ಲ’ ಎಂದು ಅವರು ವಿವರಿಸಿದರು.

‘ನಿಯಮ ಉಲ್ಲಂಘಿಸಿ ಸ್ಥಳೀಯವಾಗಿ ದ್ವಿಚಕ್ರವಾಹನಗಳನ್ನು ಬಾಡಿಗೆಗೆ ನೀಡುವ ಸಂದರ್ಭದಲ್ಲಿ ರೆಂಟ್ ಎ ಮೋಟಾರ್ ಸೈಕಲ್ ಸ್ಕೀಮ್ 1997ರ ಪ್ರಕಾರ ಷರತ್ತುಗಳು ಉಲ್ಲಂಘನೆ ಆಗಿರುವುದು ಕಂಡುಬಂದಿರುತ್ತದೆ. ಹೀಗಾಗಿ ಬೆಂಗಳೂರಿನ ಕಂಪನಿಯ ವಾಹನಗಳಿಗೆ ನೀಡಿರುವ ಪರವಾನಗಿಯನ್ನು ತಕ್ಷಣದಿಂದಲೇ ರದ್ದು ಮಾಡಬೇಕು ಮತ್ತು ಕಂಪನಿಗೆ ನೀಡಿರುವ ಟ್ರೇಡ್ ಲೈಸೆನ್ಸ್ ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

‘ಈ ಹಿಂದೆ ಹಂಪಿ - ಕಮಲಾಪುರ ಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡಲು ರೆಂಟ್ ಎ ಮೋಟಾರ್ ಸೈಕಲ್ ಸ್ಕೀಮ್ 1997 ರ ಅಡಿಯಲ್ಲಿ ಎಲ್ಲಪ್ಪ ಅವರಿಗೆ ದ್ವಿಚಕ್ರ ವಾಹನ ಬಾಡಿಗೆಗೆ ನೀಡಲು ಎಸ್‌ಟಿಎ ಟ್ರೇಡ್ ಲೈಸೆನ್ಸ್ ನೀಡಲಾಗಿತ್ತು. ಹಂಪಿ ಸುತ್ತಮತ್ತ ವಾಹನಗಳನ್ನು ರಿಪೇರಿ ಮಾಡುವ ಗ್ಯಾರೇಜ್ ನಡೆಸಲು ಅವಕಾಶ ಇರುವುದಿಲ್ಲ. ಆದರೂ ನಿಯಮಗಳನ್ನು ಉಲ್ಲಂಘಿಸಿ ಹಂಪಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅದರಲ್ಲೂ ವಿರುಪಾಕ್ಷೇಶ್ವರ ದೇವಸ್ಥಾನದ ಎಡಭಾಗದಲ್ಲಿರುವ ಜನತಾ ಪ್ಲಾಟ್‌ನಲ್ಲಿ ಗ್ಯಾರೇಜ್ ಇದೆ ಎಂದು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರ ಮತ್ತು ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದರು. ಈಗ ಪರವಾನಗಿ ಪಡೆದ ಕೇಂದ್ರ ಸ್ಥಾನದಿಂದ ಬೇರೆ ಸ್ಥಳಕ್ಕೆ ಸ್ಥಳಾಂತರವಾಗಿದ್ದು ಈ ರೀತಿಯ ಕೇಂದ್ರಸ್ಥಾನ ಸ್ಥಳಾಂತರಿಸಲು ಇಲಾಖೆಯಿಂದ ಅನುಮತಿ ಪಡೆದಿರುವುದಿಲ್ಲ. ಬದಲಾದ ಕೇಂದ್ರ ಸ್ಥಾನದಲ್ಲಿ ಈ ವ್ಯಕ್ತಿ ರೆಂಟ್ ಎ ಮೋಟಾರ್ ಸೈಕಲ್ ಸ್ಕೀಮ್ 1997ರ ನಿಯಮದ ಪ್ರಕಾರ ಗ್ಯಾರೇಜ್, ವಿಶ್ರಾಂತಿ ಕೊಠಡಿಯಂತಹ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿಲ್ಲ. ವಿದೇಶಿ ಪ್ರವಾಸಿಗರ ಜೊತೆ ಹಣಕಾಸು ವ್ಯವಹಾರ ನಡೆಸಲು ಸಂಬಂಧಪಟ್ಟ ಇಲಾಖೆಯಿಂದ ಸದರಿ ವ್ಯಕ್ತಿ ಅನುಮತಿ ಪಡೆದಿರುವುದಿಲ್ಲ. ಒಂದು ವೇಳೆ ಗ್ಯಾರೇಜ್ ಸ್ಥಾಪಿಸಿದರೂ ಸಹ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಅಥವಾ ಟ್ರೇಡ್ ಲೈಸೆನ್ಸ್ ಪಡೆದಿರುವುದಿಲ್ಲ. ಹೀಗಾಗಿ ಈ  ವ್ಯಕ್ತಿಗೆ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡಲು ನೀಡಿರುವ ಪರವಾನಗಿಯನ್ನು ತಕ್ಷಣದಿಂದಲೇ ರದ್ದುಮಾಡಬೇಕು ಮತ್ತು ಈ ವ್ಯಕ್ತಿಗೆ ನೀಡಿರುವ ಎರಡು ಟ್ರೇಡ್ ಲೈಸೆನ್ಸ್‌ಗಳನ್ನು ರದ್ದು ಮಾಡಬೇಕು’ ಎಂದು ಸಂತೋಷ್ ಕುಮಾರ್ ಒತ್ತಾಯಿಸಿದರು.

ಕೊಪ್ಪಳ ಜಿಲ್ಲೆಯ ಆನೆಗುಂದಿಯಲ್ಲಿ ಹೋಟೆಲ್, ರೆಸಾರ್ಟ್‌ಗಳು,  ಹೋಂ ಸ್ಟೇ ಗಳ ಮಾಲೀಕರು, ಇನ್ನೂ ಕೆಲವರು ಅನಧಿಕೃತವಾಗಿ ಸ್ವಂತಕ್ಕೆ ಬಳಸುವ ದ್ವಿಚಕ್ರವಾಹನಗಳನ್ನು ಮತ್ತು ಬೆಂಗಳೂರು ಮೂಲದ ಕಂಪನಿಗಳ ದ್ವಿಚಕ್ರ ವಾಹನಗಳನ್ನು ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗಳಿಗೆ ಬಾಡಿಗೆಗೆ ನೀಡುತ್ತಿರುವುದು ಕಂಡುಬಂದಿದೆ. ಈ ಕೂಡಲೇ ಕೊಪ್ಪಳದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಅಧಿಕಾರಿಗಳು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಆನೆಗುಂದಿ ಅಥವಾ ಹೊಸಪೇಟೆ, ಹಂಪಿ , ಕಮಲಾಪುರ , ಕಡ್ಡಿರಾಂಪುರ ಪ್ರದೇಶದಲ್ಲಿ ಅನಧಿಕೃತವಾಗಿ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರಿಗೆ ಆಯುಕ್ತರು ಹಾಗೂ ಇತರ ಹಲವರಿಗೆ ಕಳುಹಿಸಿಕೊಟ್ಟಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.

ಒಕ್ಕೂಟದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೈ.ರಾಮಚಂದ್ರ ಬಾಬು, ಪದಾಧಿಕಾರಿಗಳಾದ ಎಸ್.ಅನಂತಶಯನ, ರಾಘವೇಂದ್ರ, ಪ್ರಕಾಶ್ ಬಾಬು, ವಿರೂಪಾಕ್ಷಗೌಡ, ಗೋವಿಂದ, ಬಿ.ಎಸ್.ರುದ್ರಪ್ಪ, ಅಶೋಕ್‌, ಎಂ.ಸುಭಾಷ್‌, ಎಸ್.ತಿಪ್ಪೇಸ್ವಾಮಿ, ಹಕ್ಕಬುಕ್ಕ ಆಟೊ ಚಾಲಕರ ಸಂಘದ ಅಧ್ಯಕ್ಷ ಶಿವು, ಬಿ.ಆರ್.ಅಂಬೇಡ್ಕರ್ ಆಟೊ ಚಾಲಕರ ಸಂಘದ ಅಧ್ಯಕ್ಷ ವಿರೂಪಾಕ್ಷಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.