ADVERTISEMENT

ಹಂಪಿ ಕನ್ನಡ ವಿ.ವಿ: ₹25.50 ಕೋಟಿ ಮಂಜೂರು ಮಾಡಲು ಇನ್ನೊಂದೇ ಹೆಜ್ಜೆ ಬಾಕಿ

ರಾಜ್ಯಪಾಲರ ವಿವೇಚನಾ ಕೋಟಾದಲ್ಲಿ ಕೆಕೆಆರ್‌ಡಿಬಿಯಿಂದ ಕೊನೆಗೂ ಬಂತು ಪತ್ರ

ಎಂ.ಜಿ.ಬಾಲಕೃಷ್ಣ
Published 4 ಜನವರಿ 2025, 7:40 IST
Last Updated 4 ಜನವರಿ 2025, 7:40 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ₹25.50 ಕೋಟಿ ಮಂಜೂರು ಮಾಡಲು ಸಮ್ಮತಿ ಸೂಚಿಸಿದ್ದು, ಸಂಬಂಧಪಟ್ಟ ಇಲಾಖೆಗಳ ಸಹಮತಿಯೊಂದಿಗೆ ಮತ್ತೊಮ್ಮೆ ಕ್ರಿಯಾಯೋಜನೆ ಸಲ್ಲಿಸಿದ ಬಳಿಕ ಹಣ ಬಿಡುಗಡೆಯಾಗಲಿದೆ.

ಮಂಡಳಿಯ ಹೆಚ್ಚುವರಿ ನಿರ್ದೇಶಕರು ಈ ಸಂಬಂಧ ಡಿ.16ರಂದು ಕುಲಪತಿ ಅವರಿಗೆ ಪತ್ರ ರವಾನಿಸಿದ್ದು, ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ರಾಜ್ಯ ಸರ್ಕಾರ 2024–25ನೇ ಸಾಲಿನ ಬಜೆಟ್‌ನಲ್ಲಿ ಕೆಕೆಆರ್‌ಡಿಬಿಗೆ ₹5 ಸಾವಿರ ಕೋಟಿ ನಿಗದಿಪಡಿಸಿತ್ತು. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ₹250 ಕೋಟಿ ಮೀಸಲಿಡಬೇಕೆಂಬ ರಾಜ್ಯಪಾಲರ ಸೂಚನೆಯಂತೆ ಒಟ್ಟು 34 ಕಾಮಗಾರಿಗಳ ಕ್ರಿಯಾಯೋಜನೆಗೆ ಸರ್ಕಾರ ಅನುಮತಿ ನೀಡಿದೆ. ಈ ಪೈಕಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಐದು ಕಾಮಗಾರಿಗಳೂ ಸೇರಿವೆ.

ADVERTISEMENT

ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆ 7(ಸಿ) ಪ್ರಕಾರ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಗೆ ಹಂಚಿಕೆ ಮಾಡಿ ಮತ್ತು ಸಾಮಾನ್ಯ ಯೋಜನೆಗಳಡಿ ಅನುದಾನವನ್ನು ಮರುಹಂಚಿಕೆ ಮಾಡಿ ಕಾಮಗಾರಿ ಅನುಷ್ಠಾನ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ/ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳಿಂದ ದೃಢೀಕರಣ ಪಡೆದು ಮಂಡಳಿಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇನ್ನೊಮ್ಮೆ ಕ್ರಿಯಾಯೋಜನೆ ಆಗಬೇಕು: ‘ರಾಜ್ಯಪಾಲರು ಸೂಚಿಸಿ ನಾಲ್ಕೈದು ತಿಂಗಳ ಬಳಿಕ ಕೆಕೆಆರ್‌ಡಿಬಿಯಿಂದ ಈ ಪತ್ರ ಬಂದಿದೆ. ಹಣ ಮಂಜೂರಾಗಲು ಅದೆಷ್ಟು ಸಮಯ ಬೇಕೋ ಗೊತ್ತಿಲ್ಲ’ ಎಂದು ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ತಿಳಿಸಿದರು.

ವಿಳಂಬ: ಆಗಸ್ಟ್ ಮೂರನೇ ವಾರ ರಾಜ್ಯ ಸರ್ಕಾರವು, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರ ವಿವೇಚನೆಯಂತೆ ₹25 ಕೋಟಿ ವೆಚ್ಚ ಮಾಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿತ್ತು. ಬಳಿಕ ರಾಜ್ಯಪಾಲರು ಮತ್ತು ಸರ್ಕಾರ ನಡುವೆ ತಿಕ್ಕಾಟ ಹೆಚ್ಚಿದ ಕಾರಣ ಕೆಕೆಆರ್‌ಡಿಬಿ ನಿರ್ಧಾರ ಕೈಗೊಳ್ಳುವುದು ವಿಳಂಬವಾಯಿತು ಎಂದು ಹೇಳಲಾಗುತ್ತಿದೆ.

ಕಾಮಗಾರಿ ಆಯ್ಕೆ: ಅನುಮಾನ
ವಿ.ವಿ ಕ್ಯಾಂಪಸ್‌ನಲ್ಲಿ ಕನ್ನಡ ಸಾಹಿತ್ಯ ಮಹಿಳಾ ಅಧ್ಯಯನ ಪತ್ರಿಕೋದ್ಯಮ ಯೋಗ ದೃಶ್ಯಕಲೆ ಮತ್ತು ಸಂಗೀತ ಸ್ನಾತಕೋತ್ತರ ಕೋರ್ಸ್‌ಗಳಿವೆ. ‘ನುಡಿ’ ಕಟ್ಟಡದಲ್ಲಿ ಅಗತ್ಯದ ಸ್ಮಾರ್ಟ್‌ಕ್ಲಾಸ್‌ಗಳಿವೆ. ಹೀಗಿದ್ದರೂ ಸ್ಮಾರ್ಟ್‌ ಕ್ಲಾಸ್‌ ಹಾಗೂ ಬೋರ್ಡ್‌ಗಳಿಗೆ ₹9.58 ಕೋಟಿಯನ್ನು ಪಟ್ಟಿಯಲ್ಲಿ ನಿಗದಿಪಡಿಸಲಾಗಿದೆ. ಇದು ಅನುಮಾನಕ್ಕೆ ಎಡೆಮಾಡಿಕೊಡುವಂತಿದೆ ಎನ್ನುತ್ತವೆ ಮೂಲಗಳು. ಅನಂತಶಯನಗುಡಿ ಬಳಿಯ ವಿ.ವಿ ನಿವೇಶನದಲ್ಲಿ ಇನ್ನೊಂದು ಪ್ರಸಾರಾಂಗ ಕಟ್ಟಡ ನಿರ್ಮಿಸುವ ಯೋಜನೆ ಇದ್ದು ಅದಕ್ಕಾಗಿಯೇ ₹6.55 ಕೋಟಿ ನಿಗದಿಪಡಿಸಲಾಗಿದೆ. ಕ್ಯಾಂಪಸ್‌ನೊಳಗೆ ರಸ್ತೆ ಇದ್ದರೂ ಕಾಂಕ್ರೀಟ್‌ ಹಾಗೂ ಡಾಂಬರು ರಸ್ತೆಗೆ ₹3.44 ಕೋಟಿ ನಿಗದಿಪಡಿಸಲಾಗಿದೆ ಎನ್ನಲಾಗಿದೆ. ವಿ.ವಿ ಕ್ಯಾಂಪಸ್‌ಗೆ ಕಾಂಪೌಂಡ್‌ ಇಲ್ಲ. ಬೆಳ್ಳಿ ಭವನ ಅರ್ಧಂಬರ್ಧವಾಗಿ ನಿಂತಿದೆ. ಕ್ರೀಡಾಂಗಣ ಇಲ್ಲ... ಹೀಗೆ ಅಗತ್ಯದ ಕೆಲಸಗಳಿಗೆ ಈ ₹25 ಕೋಟಿ ಸಿಗಬೇಕಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.