ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಯೋಜಿತ ಕಾಲೇಜುಗಳಿಲ್ಲದ ಕಾರಣ ಆಂತರಿಕ ಸಂಪನ್ಮೂಲವೇ ಬಹಳ ಕಡಿಮೆ ಇದೆ ಎಂಬ ಭಾವನೆ ಸಾರ್ವತ್ರಿಕವಾಗಿದ್ದರೂ, 2023–24ನೇ ಸಾಲಿನಲ್ಲಿ ₹2.35 ಕೋಟಿ ಸಂಗ್ರಹವಾಗಿದ್ದನ್ನು ಲೆಕ್ಕಪರಿಶೋಧಕರು ಕಂಡುಕೊಂಡಿದ್ದಾರೆ.
2019–20ರಲ್ಲಿ ₹2.73 ಕೋಟಿ, 2020–21ರಲ್ಲಿ ₹2.04 ಕೋಟಿ, 2021–22ರಲ್ಲಿ ₹2.13 ಕೋಟಿ, 2022–23ರಲ್ಲಿ ₹2.15 ಕೋಟಿ ಆಂತರಿಕ ಸಂಪನ್ಮೂಲದ ರೂಪದಲ್ಲಿ ಸಂಗ್ರಹವಾಗಿದೆ ಎಂಬ ಮಾಹಿತಿ ‘ಪ್ರಜಾವಾಣಿ’ಗೆ ವಿಶ್ವವಿದ್ಯಾಲಯದ ವಾರ್ಷಿಕ ವರದಿಯಿಂದ ತಿಳಿದುಬಂದಿದೆ.
ಸದ್ಯ ವಿಶ್ವವಿದ್ಯಾಲಯದಲ್ಲಿ ಮಹಾಲೇಖಪಾಲರಿಂದ ಲೆಕ್ಕಪರಿಶೋಧನೆ ನಡೆಯುತ್ತಿದ್ದು, ಮಾರ್ಚ್ 29ರವರೆಗೂ ಅದು ಮುಂದುವರಿಯಲಿದೆ. ಇದೇ ಮೊದಲ ಬಾರಿಗೆ ಆಂತರಿಕ ಸಂಪನ್ಮೂಲವನ್ನು ಯಾವ ಯಾವ ಬಗೆಯಲ್ಲಿ, ಎಷ್ಟು ಸಂಗ್ರಹಿಸಲಾಗಿದೆ ಎಂಬ ವಿವರವನ್ನು ಲೆಕ್ಕಪರಿಶೋಧಕರು ಕೇಳಿದ್ದಾರೆ. ಹೀಗಾಗಿ ಆ ವಿವರವನ್ನು ವಿಶ್ವವಿದ್ಯಾಲಯ ನೀಡಿದೆ ಎಂದು ಮೂಲಗಳು ತಿಳಿಸಿವೆ.
‘ಈ ಬಾರಿಯ ಬಜೆಟ್‌ನಲ್ಲಿ ಅಭಿವೃದ್ಧಿ ಅನುದಾನ ರೂಪದಲ್ಲಿ ಕಳೆದ ವರ್ಷದಷ್ಟೇ ಅಂದರೆ ₹1.91 ಕೋಟಿ ಮೀಸಲಿಡಲಾಗಿದೆ. ಇದರಿಂದ ಅಗತ್ಯದ ಕೆಲಸಗಳಿಗೆ ಮಾತ್ರ ಖರ್ಚು ಮಾಡಲು ಸಾಧ್ಯ.ತಾತ್ಕಾಲಿಕ ಸಿಬ್ಬಂದಿ, ಹೊರಗುತ್ತಿಗೆ ಸಿಬ್ಬಂದಿಗೆ ಸಂಬಳ ಕೊಡಲು ಸಾಧ್ಯವಿಲ್ಲ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅವರು ಅಳಲು ತೋಡಿಕೊಂಡಿದ್ದರು.
ಆಂತರಿಕ ಮೂಲದ ದುಡ್ಡು ಎಲ್ಲಿಗೆ ಹೋಗುತ್ತದೆ?: ರಾಜ್ಯದ ಎಲ್ಲೆಡೆ ವಿಶ್ವವಿದ್ಯಾಲಯಗಳು ಹಣಕಾಸಿನ ಮುಗ್ಗಟ್ಟಿನಲ್ಲಿವೆ, ಕನ್ನಡದ ಅಸ್ಮಿತೆಯ ಸಂಕೇತವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾದರೂ ಸರ್ಕಾರ ಆದ್ಯತೆ ನೀಡಬೇಕಿತ್ತು ಎಂಬುದು ಕನ್ನಡಿಗರ ಒತ್ತಾಯವಾಗಿದೆ. ಆದರೆ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲವನ್ನು ಯಾವುದಕ್ಕೆ ಖರ್ಚು ಮಾಡಲಾಗುತ್ತದೆ? ತಾತ್ಕಾಲಿಕ ಸಿಬ್ಬಂದಿ ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ ಸಂಬಳ ವಿತರಿಸಲು ಇದನ್ನು ಬಳಸಿಕೊಳ್ಳಲು ಸಾಧ್ಯವಿಲ್ಲವೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಶುಲ್ಕವೇ ದೊಡ್ಡ ಬಂಡವಾಳ
ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿ ಶುಲ್ಕ ರೂಪದಲ್ಲಿ ಸಿಗುವ ಮೊತ್ತವೇ ಬಹಳ ದೊಡ್ಡ ಬಂಡವಾಳ. ಪರೀಕ್ಷಾ ಕಾರ್ಯ ಇತರ ವೆಚ್ಚಗಳಿಗೆಂದು ಗರಿಷ್ಠ ₹30 ಲಕ್ಷದಷ್ಟು ವೆಚ್ಚ ತಗುಲಿದರೂ ಸುಮಾರು ₹90 ಲಕ್ಷ ಉಳಿದಿರುತ್ತದೆ. ಇತರ ಮೂಲಗಳಿಂದ ಸಿಗುವ ಮೊತ್ತದಲ್ಲೂ ಖರ್ಚು ಅಷ್ಟಾಗಿ ಇರುವುದಿಲ್ಲ. ಹೀಗಾಗಿ ₹1.75 ಕೋಟಿಯಷ್ಟು ದುಡ್ಡು ಖರ್ಚಿಗೆ ಲಭಿಸಿಯೇ ತೀರುತ್ತದೆ. ಇದನ್ನು ವಿಶ್ವವಿದ್ಯಾಲಯದ ದಿನವಹಿ ಕಾರ್ಯನಿರ್ವಹಣೆಗೆ ಬಳಸಿದರೆ ಅನುದಾನ ಕೊರತೆಯನ್ನು ಸ್ವಲ್ಪಮಟ್ಟಿಗೆ ನೀಗಿಸಿ ಸುಗಮ ಕಾರ್ಯನಿರ್ವಹಣೆ ಮಾಡಬಹುದು ಎಂದು ವಿಶ್ವವಿದ್ಯಾಲಯದ ನಿಕಟ ಸಂಪರ್ಕ ಇಟ್ಟುಕೊಂಡಿರುವ ಹಲವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.