ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಗೆ ₹9.79 ಕೋಟಿ!

ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೆಕೆಆರ್‌ಡಿಬಿಯಿಂದ ₹19.21 ಕೋಟಿ ಮಂಜೂರು

ಎಂ.ಜಿ.ಬಾಲಕೃಷ್ಣ
Published 5 ಜನವರಿ 2026, 0:40 IST
Last Updated 5 ಜನವರಿ 2026, 0:40 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಸರ್ಕಾರದ ವಿವೇಚನಾ ನಿಧಿ ಅಡಿಯಲ್ಲಿ ₹19.21 ಕೋಟಿ ಮಂಜೂರಾಗಿದ್ದು, ಇದರಲ್ಲಿ ಕ್ಯಾಂಪಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ₹9.79 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ.

ವಿದ್ಯಾರಣ್ಯ ಕ್ಯಾಂಪಸ್‌ನ ಆವರಣದಲ್ಲಿ ಅಗ್ನಿ ನಿಯಂತ್ರಕ, ಸೋಲಾರ್‌ ಹೈಮಾಸ್ಟ್ ದೀಪ, ಸೋಲಾರ್ ಬಿಸಿ ನೀರು ಘಟಕ, ಹವಾನಿಯಂತ್ರಕ ಮತ್ತು ಬ್ಯಾಟರಿ ಅಳವಡಿಸುವ ಕಾಮಗಾರಿಗಳಿಗೆ ₹9.42 ಕೋಟಿ ಅಂದಾಜು ವೆಚ್ಚ ನಿಗದಿಪಡಿಸಿ ಈಗ ಮಂಜೂರಾತಿ ಪತ್ರ ನೀಡಲಾಗಿದೆ.

ಮೂಲತಃ ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಪೀಠೋಪಕರಣ, ಸಂಶೋಧನಾ ಕಾರ್ಯ, ಹಾಸ್ಟೆಲ್‌ಗಳಿಗೆ, ಜಿಮ್‌ ಸಾಮಗ್ರಿಗಳ ಖರೀದಿಗೆ ನಿಗದಿಯಾಗಿದ್ದ ಮೊತ್ತ ಇದಾಗಿತ್ತು. ಅಲ್ಲಿಂದ ವಿಸ್ತೃತ ಯೋಜನಾ ವರದಿ ಸಲ್ಲಿಕೆ ಆಗದ ಕಾರಣ ಪ್ರಸ್ತಾವ ರದ್ದುಪಡಿಸಿ, ಅದೇ ಹಣವನ್ನು ಹಂಪಿ ವಿಶ್ವವಿದ್ಯಾಲಯಕ್ಕೆ ನೀಡಲು ನಿರ್ಧರಿಸಲಾಗಿದೆ.

ADVERTISEMENT

ಶಂಕೆ: ‘ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆಗೆ ₹9.79 ಕೋಟಿ ಖರ್ಚಾಗಲಿದೆಯೇ? ರಾಜ್ಯಪಾಲರ ಕೋಟಾದಲ್ಲಿ ಕಳೆದ ವರ್ಷ ಮಂಜೂರಾದ ₹25 ಕೋಟಿ ಅನುದಾನದಲ್ಲಿ ಸ್ಮಾರ್ಟ್‌ ತರಗತಿ, ಸ್ಮಾರ್ಟ್ ಬೋರ್ಡ್‌ಗಳು ಇದ್ದರೂ ಮತ್ತೆ ಅದೇ ಹೆಸರಲ್ಲಿ ₹9.58 ಕೋಟಿ ಮಂಜೂರಾಗಿತ್ತು. ಇದರ ಹಿಂದೆ ದುಡ್ಡು ಹೊಡೆಯುವ ತಂತ್ರ ಇದ್ದಂತಿದೆ’ ಎಂದು ಕೆಕೆಆರ್‌ಡಿಬಿಗೆ ನಿಕಟ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ನಿರಾಕರಣೆ: ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಈ ಶಂಕೆಯನ್ನು ನಿರಾಕರಿಸಿದ್ದಾರೆ. 

’ವಿಶ್ವವಿದ್ಯಾಲಯ ಕ್ಯಾಂಪಸ್‌ 745 ಎಕರೆಯಷ್ಟು ವಿಶಾಲವಾಗಿದೆ. ಈಗಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ. ಪ್ರಮುಖ ರಸ್ತೆ, ದ್ವಾರ, ಸಭಾಂಗಣ, ನಾಲ್ಕು ಹಾಸ್ಟೆಲ್‌ಗಳಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಸೌಲಭ್ಯ ಅಳವಡಿಕೆಗೆ ಬಹಳಷ್ಟು ಹಣ ಬೇಕು. ನಾವು ಕಾಂಪೌಂಡ್‌ ನಿರ್ಮಾಣಕ್ಕೆ ಹಣ ಕೇಳಿದ್ದೆವು. ಅದರ ಬದಲಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಹಣ ಮಂಜೂರಾಗಿದೆ. ಈಗ ಅದಕ್ಕೇ ನೆರವು ಬಳಸಿಕೊಳ್ಳುತ್ತೇವೆ. ವಿವರವಾದ ಯೋಜನಾ ವರದಿ ಸಲ್ಲಿಸಿದ ಬಳಿಕ ಅಂತಿಮ ಒಪ್ಪಿಗೆ ಸಿಗಲಿದೆ’ ಎಂದು ಹೇಳಿದರು.

––––

ರಾಯಚೂರು ವಿಶ್ವವಿದ್ಯಾಲಯ ಅನುದಾನಕ್ಕಾಗಿ ಮತ್ತೆ ಯತ್ನಿಸಿದರೆ ಆದೇಶ ಬದಲಾಗುವ ಸಾಧ್ಯತೆ ಇದೆ. ಕ್ಯಾಂಪಸ್‌ ಸುರಕ್ಷತೆಗೆ ಕಾಂಪೌಂಡ್‌ ಬೇಕು. ಹಣ ವರ್ಗಾವಣೆ ಅಸಾಧ್ಯ. ಸಿಕ್ಕಿದ ಅನುದಾನವನ್ನು ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಬಳಸುತ್ತೇವೆ

–ಪ್ರೊ.ಡಿ.ವಿ.ಪರಮಶಿವಮೂರ್ತಿ ಕುಲಪತಿ ಹಂಪಿ ಕನ್ನಡ ವಿಶ್ವವಿದ್ಯಾಲಯ.

––

ಕಣ್ಣಿಗೆ ಕಾಣದ ಯೋಜನೆಗೆ ಹಣ: ಆರೋಪ

‘ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಕ್ಯಾಂಪಸ್‌ಗೆ ಕಾಂಪೌಂಡ್‌ ಇಲ್ಲ. ಬೆಳ್ಳಿ ಭವನ ನಿರ್ಮಾಣ ಕಾಮಗಾರಿ ಪೂರ್ಣವಾಗಿಲ್ಲ. ಕ್ರೀಡಾಂಗಣ ಇಲ್ಲ. ಈ ಕೆಲಸಗಳಿಗೆ ಅನುದಾನ ಮಂಜೂರಾಗಿದ್ದರೆ ಕೆಲಸವಾದರೂ ಕಾಣಿಸುತ್ತಿತ್ತು. ಆದರೆ ಕಣ್ಣಿಗೆ ಕಾಣಿಸದ ಕೆಲ ಯೋಜನೆಗಳಿಗೆ ಹಣ ಮಂಜೂರು ಮಾಡಿಸಿಕೊಂಡು ಬರುವ ಪರಿಪಾಠ ನಡೆದಿದೆ‘ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.