ADVERTISEMENT

ಹಂಪಿ ಕನ್ನಡ ವಿವಿಗೆ ₹2 ಕೋಟಿ ಅನುದಾನ: ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಸೂಚನೆ

ಎಂ.ಜಿ.ಬಾಲಕೃಷ್ಣ
Published 5 ನವೆಂಬರ್ 2025, 5:05 IST
Last Updated 5 ನವೆಂಬರ್ 2025, 5:05 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಶ್ವವಿದ್ಯಾಲಯಗಳಿಗೆ 2025–26ನೇ ಸಾಲಿನ ಅಭಿವೃದ್ಧಿ ಅನುದಾನ ರೂಪದಲ್ಲಿ ಸರ್ಕಾರ ಆರು ವಿಶ್ವವಿದ್ಯಾಲಯಗಳಿಗೆ ₹7.50 ಕೋಟಿ ಬಿಡುಗಡೆ ಮಾಡಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಇದರಲ್ಲಿ ₹2 ಕೋಟಿ ದೊರೆತಿದೆ.

ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಇದೊಂದು ಟಾನಿಕ್‌ನಂತೆ ಪರಿಣಮಿಸಿದ್ದು, ಅಭಿವೃದ್ಧಿ ಕಾರ್ಯಗಳು ಕೈಗೂಡಬಹುದು ಎಂಬ ಆಶಯ ಮೂಡಿದೆ. ಅಭಿವೃದ್ಧಿ ಕೆಲಸಗಳ ಹೊರತಾಗಿ ಅನ್ಯ ಉದ್ದೇಶಗಳಿಗೆ ಇದನ್ನು ಬಳಸಬಾರದು ಎಂಬ ಕಟ್ಟುನಿಟ್ಟಿನ ಷರತ್ತು ವಿಧಿಸಲಾಗಿದೆ. ಹೀಗಾಗಿ ಹೊರಗುತ್ತಿಗೆ ನೌಕರರು, ತಾತ್ಕಾಲಿಕ ಸಿಬ್ಬಂದಿಯ ವೇತನ ಬಾಕಿಗೆ ಮತ್ತೆ ಹಣ ಹೊಂದಿಸುವ ಅನಿವಾರ್ಯತೆ ಎದುರಾಗಿದೆ.

ಉನ್ನತ ಶಿಕ್ಷಣ ಇಲಾಖೆಯ ಉಪಕಾರ್ಯದರ್ಶಿ ಅವರು ಈ ಸಂಬಂಧ ಅಕ್ಟೋಬರ್‌ 21ರಂದು ಆದೇಶ ಹೊರಡಿಸಿದ್ದು, ಅದರ ಪ್ತತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಆದೇಶದಲ್ಲಿ ಉಲ್ಲೇಖವಾದಂತೆ, ರಾಯಚೂರಿನ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ₹75 ಲಕ್ಷ, ಮೇಲುಕೋಟೆಯ ಭಗವದ್‌ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ಗೆ ₹75 ಲಕ್ಷ, ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ₹1 ಕೋಟಿ, ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ₹2 ಕೋಟಿ ಹಾಗೂ ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ಗೆ ₹1 ಕೋಟಿ ಹಂಚಿಕೆಯಾಗಿದೆ.

ADVERTISEMENT

ಕೆಕೆಆರ್‌ಡಿಬಿ ಅನುದಾನ: ವಿಶ್ವವಿದ್ಯಾಲಯಗಳ ಕುಲಾಧಿಪತಿ ಅವರ ವಿವೇಚನಾ ಕೋಟಾದಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) 2024–25ನೇ ಸಾಲಿಗೆ ₹5 ಸಾವಿರ ಕೋಟಿ ಅನುದಾನದ ಪೈಕಿ ₹250 ಕೋಟಿಯನ್ನು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿತ್ತು. ಇದರಲ್ಲಿ ₹25.50 ಕೋಟಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ನಿಗದಿಯಾಗಿದೆ. ಇದರಲ್ಲಿ ಮೊದಲ ಕಂತಿನ ರೂಪದಲ್ಲಿ ₹9.50 ಕೋಟಿ ಬಿಡುಗಡೆ ಆಗಿದೆ ಎಂದು ಹೇಳಲಾಗುತ್ತಿದೆ.

ಈ ಅನುದಾನದಲ್ಲಿ ₹5.93 ಕೋಟಿ ವೆಚ್ಚದಲ್ಲಿ 500 ಕಿಲೋವಾಟ್ ಸೋಲಾರ್ ಪವರ್ ಗ್ರಿಡ್ ಸ್ಥಾಪನೆ, ₹9.58 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ ತರಗತಿ, ಕಂಪ್ಯೂಟರ್‌ ಮತ್ತು ವರ್ಕ್‌ ಸ್ಟೇಷನ್‌ಗಳ ನಿರ್ಮಾಣ, ₹6.55 ಕೋಟಿ ವೆಚ್ಚದಲ್ಲಿ ವಸ್ತುಪ್ರದರ್ಶನ ಮತ್ತು ಪುಸ್ತಕ ಮೇಳದ ಮಳಿಗೆ ಸ್ಥಾಪನೆ, ₹2.01 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಕಾಂಕ್ರೀಟ್‌ ಚರಂಡಿ ನಿರ್ಮಾಣ, ₹1.43 ಕೋಟಿ ವೆಚ್ಚದಲ್ಲಿ ಕ್ಯಾಂಪಸ್‌ನ ರಸ್ತೆಗಳ ಡಾಂಬರೀಕರಣ ಕಾಮಗಾರಿ ಸೇರಿದೆ. ಡಾಂಬರೀಕರಣ ಕೆಲಸ ಬಿಟ್ಟರೆ ಉಳಿದ ಕೆಲಸಗಳು ಎಲ್ಲಿ, ಹೇಗೆ ನಡೆಯುತ್ತಿವೆ ಎಂಬ ಮಾಹಿತಿ ಲಭಿಸಿಲ್ಲ.

ಸಿಎಂಗೆ ದೂರು: ‘ಅಗತ್ಯವಾಗಿ ಯಾರ ನೆರವಿಗೆ ಬರಬೇಕಿತ್ತೋ ಅದನ್ನು ಕಡೆಗಣಿಸಿರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.9ರಂದು ಕೂಡ್ಲಿಗಿಗೆ ಬರಲಿದ್ದು, ಹೊರಗುತ್ತಿಗೆ ನೌಕರರ ಪಡಿಪಾಟಲು ಹಾಗೂ ಈಚೆಗೆ ಹೃದಯಾಘಾತದಿಂದ ಮೃತಪಟ್ಟ ನಂದೀಶ ಎಂಬ ನೌಕರನ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಕೊಡಬೇಕೆಂದು ಕೋರಿ ಮನವಿ ಸಲ್ಲಿಸಲಾಗುವುದು’ ಎಂದು ಜಿಲ್ಲಾ ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ ತಿಳಿಸಿದರು.

ಅಭಿವೃದ್ಧಿ ಅನುದಾನ ಯಾರ ಅಭಿವೃದ್ಧಿಗೋ ಗೊತ್ತಿಲ್ಲ, ಒಂದು ವರ್ಷದಿಂದ ಸಂಬಳ ಇಲ್ಲದೆ ದುಡಿಯುತ್ತಿರುವ ಹೊರಗುತ್ತಿಗೆ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿ ಸರ್ಕಾರ ತಕ್ಷಣ ಅನುದಾನ ನೀಡಬೇಕಿತ್ತು
ಮರಡಿ ಜಂಬಯ್ಯ ನಾಯಕ, ಜಿಲ್ಲಾ ಅಧ್ಯಕ್ಷ, ದಲಿತ ಹಕ್ಕುಗಳ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.