
ಹಂಪಿ
ಹೊಸಪೇಟೆ (ವಿಜಯನಗರ): ಒಂದೂವರೆ ತಿಂಗಳ ಹಿಂದೆ ಹಂಪಿಯಲ್ಲಿ ಎರಡು ದಿನ ಸಭೆ ನಡೆಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಾರಣಕ್ಕೆ ಈ ಬಾರಿಯ ಕೇಂದ್ರ ಬಜೆಟ್ ಮೇಲೆ ಜಿಲ್ಲೆಯ ನಿರೀಕ್ಷೆ ಹೆಚ್ಚಿದೆ. ಹಂಪಿಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುತ್ತಾರೆಯೇ ಎಂಬ ದೊಡ್ಡ ನಿರೀಕ್ಷೆಯನ್ನು ಜನ, ಜನಪ್ರತಿನಿಧಿಗಳು ಇಟ್ಟುಕೊಂಡಿದ್ದಾರೆ.
ಹಣಕಾಸು ಸಚಿವಾಲಯದ 120 ಮಂದಿ ಹಿರಿಯ ಅಧಿಕಾರಿಗಳ ಸಹಿತ 150ಕ್ಕೂ ಅಧಿಕ ಅಧಿಕಾರಿಗಳ ನಿಯೋಗದೊಂದಿಗೆ ನಿರ್ಮಲಾ ಸೀತಾರಾಮನ್ ಅವರು ಡಿಸೆಂಬರ್ ಮೂರನೇ ವಾರ ಹಂಪಿಗೆ ಬಂದಿದ್ದರು. ಎರಡು ದಿನ ಸಭೆ ನಡೆಸಿದ್ದರು. ಅಧಿಕಾರಿಗಳೆಲ್ಲ ಹಂಪಿಯ ಸ್ಮಾರಕಗಳನ್ನು ಕಣ್ತುಂಬಿಕೊಂಡಿದ್ದರು. ಹಂಪಿಗೆ ಏನು ಬೇಕು ಎಂಬುದನ್ನು ಎಲ್ಲರೂ ಖುದ್ದಾಗಿ ಕಂಡುಕೊಂಡಿದ್ದರು. ಅದೆಲ್ಲವೂ ಈ ಬಜೆಟ್‌ನಲ್ಲಿ ಧಾರೆಯಾಗಿ ವಿಜಯನಗರ ಜಿಲ್ಲೆಗೆ ಇಳಿಯಲಿದೆಯೇ ಎಂಬ ಪ್ರಶ್ನೆ ನೂರಾರು ಕೋಟಿ ಮೌಲ್ಯದ್ದಾಗಿ ಕಾಣಿಸಿದೆ.
ಸಂಸದರಿಂದ ಒತ್ತಾಯ: ‘ಹಂಪಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಮತ್ತು ರಾಜ್ಯ ಹೊಣೆಗಾರಿಕೆಯ ಸ್ಮಾರಕಗಳ ಸಂರಕ್ಷಣೆಗೆ ಪ್ರತಿ ವರ್ಷ ₹15 ಕೋಟಿಯಂತೆ 10 ವರ್ಷದಲ್ಲಿ ₹150 ಕೋಟಿಯನ್ನು ನೀಡಬೇಕು. ಪ್ರವಾಸಿಗರಿಗೆ ವಿವಿಧ ಸೌಲಭ್ಯಗಳಿಗಾಗಿ ₹50 ಕೋಟಿಯಂತೆ ಮೂರು ವರ್ಷಕ್ಕೆ ₹150 ಕೋಟಿ ಒದಗಿಸಬೇಕು ಹಾಗೂ ಹಂಪಿ ಸುತ್ತಮುತ್ತಲಿನ 28 ಗ್ರಾಮಗಳು ಹಾಗೂ ಕಮಲಾಪುರ ಪುರಸಭೆಯಲ್ಲಿನ ಮೂಲಸೌಲಭ್ಯಗಳ ಅಭಿವೃದ್ಧಿಗೆ ₹50 ಕೋಟಿಯಂತೆ ಆರು ವರ್ಷಕ್ಕೆ ₹300 ಕೋಟಿ ಒದಗಿಸಬೇಕು’ ಎಂದು ಸಂಸದ ಇ.ತುಕಾರಾಂ ಅವರು ಈಗಾಗಲೇ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
‘1975ರಲ್ಲಿ ಜಾರಿಗೆ ತರಲಾದ ಹಂಪಿ ಮೇಲಿನ ರಾಷ್ಟ್ರೀಯ ಯೋಜನೆಯಿಂದಾಗಿ 1986ರಲ್ಲಿ ಹಂಪಿ ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿತು. 2008–09ರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರವು ರಾಜ್ಯಕ್ಕೆ ಅನುದಾನ ನೀಡಿದರೂ, ರಾಜ್ಯದಿಂದ ಸಮಾನವಾಗಿ ಅನುದಾನ ಹಂಚಿಕೆ ಆಗಲಿಲ್ಲ, ಹೀಗಾಗಿ ಯೋಜನೆಗಳು ಇಂದಿಗೂ ಪೂರ್ಣಗೊಂಡಿಲ್ಲ. 2017–18ರ ಬಜೆಟ್ ಭಾಷಣದಲ್ಲಿ ಹಂಪಿಗೆ ಅನುದಾನ ನೀಡುವ ಮಾತು ಆಡಿದರೂ, ಅನುದಾನ ಬರಲಿಲ್ಲ. ಆದರ್ಶ ಸ್ಮಾರಕ ಯೋಜನೆಯಡಿಯಲ್ಲಿ ಸಹ ಸಮರ್ಪಕವಾಗಿ ಅನುದಾನ ಬರಲೇ ಇಲ್ಲ. ‘ಪ್ರಸಾದ ಯೋಜನೆ’ ಅಡಿಯಲ್ಲಿ ರಾಜ್ಯ ಸರ್ಕಾರ ಯಾವುದೇ ಪ್ರಸ್ತಾವ ಕಳುಹಿಸಲಿಲ್ಲ. ಆದರೆ ಈ ಬಾರಿಯಾದರೂ ಕೇಂದ್ರ ಬಜೆಟ್‌ನಲ್ಲೇ ಹಂಪಿಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ವಿಮಾನ ನಿಲ್ದಾಣ ಬೇಕು: ಶಾಸಕ ಎಚ್.ಆರ್.ಗವಿಯಪ್ಪ ಅವರು ಸಹ ಜಿಲ್ಲೆಯ ಜನರ ಪರವಾಗಿ ಸಚಿವೆ ನಿರ್ಮಲಾ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಹಂಪಿಯ ಪ್ರವಾಸೋದ್ಯಮ ವೃದ್ಧಿಗಾಗಿ ಈ ಭಾಗದಲ್ಲಿ ಪ್ರತ್ಯೇಕ ವಿಮಾನನಿಲ್ದಾಣ ನಿರ್ಮಾಣ ಅಗತ್ಯ ಎಂದು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಸೂಚನೆ ಮೇರೆಗೆ ಕೇಂದ್ರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರೂ ಈ ತಿಂಗಳ ಮೊದಲ ವಾರದಲ್ಲಿ ಹಂಪಿಗೆ ಬಂದಿದ್ದರು. ಈ ಭಾಗದ ವಿವಿಧ ಉದ್ಯಮಿಗಳು, ಹೋಟೆಲ್ ಉದ್ಯಮಿಗಳ ಜತೆಗೆ ಸಮಾಲೋಚನೆ ನಡೆಸಿದ್ದರು. ಕೊನೆಗೆ ‘ಗವಿಯಪ್ಪನವರೇ, ನಾನು ನಿಮಗೆ ಖಾಲಿ ಚೆಕ್ ಕೊಡುತ್ತೇನೆ, ಎಷ್ಟು ಬೇಕಾದರೂ ಬೆರೆದುಕೊಳ್ಳಿ. ಸಮರ್ಪಕ, ಸಮನ್ವಯದಿಂದ ಕೂಡಿದ ಯೋಜನೆಯನ್ನು ಕೇಂದ್ರದ ಮುಂದೆ ತನ್ನಿ’ ಎಂದು ಹೇಳಿದ್ದರು. ಇಬ್ಬರೂ ಸಚಿವರ ಈ ಭರವಸೆಯ ಮಾತುಗಳ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಹಂಪಿಗೆ ವಿಶೇಷ ಅನುದಾನ ಸಿಗಬಹುದು ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ.
ಮರಿಯಮ್ಮನಹಳ್ಳಿ– ಶಿವಮೊಗ್ಗ ನಡುವಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಬೇಕು, ಹೊಸಪೇಟೆ–ಬಳ್ಳಾರಿ ಹೆದ್ದಾರಿ ಕಾಮಗಾರಿ ಬೇಗ ಮುಗಿಸಬೇಕು, ಬಿಎಸ್‌ಎನ್‌ಎಲ್ ನೆಟ್ವರ್ಕ್ ಬಲಪಡಿಸಬೇಕು, ರೈಲ್ವೆ ಜಾಲವನ್ನು ಇನ್ನಷ್ಟು ವಿಸ್ತರಿಸಬೇಕು, ಕಿಷ್ಕಿಂಧಾದಿಂದ ರಾಮೇಶ್ವಶ್ವರಕ್ಕೆ ನೇರ ರೈಲು ಯಾನ ಆರಂಭಿಸಬೇಕು ಮೊದಲಾದ ಹಲವಾರು ಬೇಡಿಕೆಗಳು ಜಿಲ್ಲೆಯ ಜನರ ಮುಂದೆ ಸದಾ ಇದ್ದು, ಈ ಬಜೆಟ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹಂಪಿಯಲ್ಲಿ ಬಜೆಟ್ ಸಿದ್ಧತಾ ಸಭೆ ನಡೆಸಿದ್ದ ಸಚಿವೆ ನಿರ್ಮಲಾ ಸಚಿವರಿಗೆ ಮಾಹಿತಿ ನೀಡಿದ್ದ ಶಾಸಕ ಗವಿಯಪ್ಪ ಸಂಸದ ಇ.ತುಕಾರಾಂ ಅವರಿಂದ ವಿವರವಾದ ಪತ್ರ
ಹೊಸಪೇಟೆಯಿಂದ ಬಳ್ಳಾರಿ ಮೂಲಕ ಬೆಂಗಳೂರಿಗೆ ವಂದೇ ಭಾರತ್ ರೈಲು ಓಡಿಸಬೇಕು ಕೈಗಾರಿಕಾ ಕೇಂದ್ರಗಳು ನೂತನ ಕೈಗಾರಿಕಾ ಪ್ರದೇಶಗಳು ಈ ಭಾಗಕ್ಕೆ ಬೇಕು ಈಗಾಗಲೇ ಜಿಲ್ಲೆಯ ನಿರೀಕ್ಷೆಯ ಪಟ್ಟಿ ಸಲ್ಲಿಸಲಾಗಿದೆಅಶ್ವಿನ್ ಕೊತ್ತಂಬರಿ ಅಧ್ಯಕ್ಷ ವಿಜಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ
ಹೊಸಪೇಟೆ ರೈಲು ನಿಲ್ದಾಣ ವಿಶ್ವದರ್ಜೆಗೆ ಏರಿಸಬೇಕು ಪ್ರತ್ಯೇಕ ವಿಮಾನನಿಲ್ದಾಣ ನಿರ್ಮಾಣದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಸಚಿವರಿಗೆ ವಿವಿಧ ಬೇಡಿಕೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ ವೈ.ಯಮುನೇಶ್ ಅಧ್ಯಕ್ಷ ರೈಲ್ವೆ ಬಳಕೆದಾರರ ಹಿತರಕ್ಷಣಾ ಸಮಿತಿ
‘ಪ್ರವಾಸೋದ್ಯಮವೇ ಉಸಿರು’
ಗಣಿಗಾರಿಕೆಯ ಭರಾಟೆ ವಿಜಯನಗರ ಭಾಗದಲ್ಲಿ ಕಡಿಮೆಯಾಗಿದ್ದು ಈಗ ಏನಿದ್ದರೂ ಪ್ರವಾಸೋದ್ಯಮವೇ ಕೈಹಿಡಿಯಬೇಕಾದ ಕ್ಷೇತ್ರ. ವಿಶೇಷವೆಂದರೆ ಬಜೆಟ್ ತಯಾರಿಯ ಹಂತದಲ್ಲೇ ಹಣಕಾಸು ಸಚವರು ಮತ್ತು ಪ್ರವಾಸೋದ್ಯಮ ಸಚಿವರು ಹಂಪಿಯಲ್ಲಿ ಎರಡೆರಡು ದಿನ ಇದ್ದು ಸಭೆ ನಡೆಸಿ ಹೋಗಿದ್ದಾರೆ. ಹೀಗಾಗಿ ವಿಶ್ವ ಪಾರಂಪರಿಕ ತಾಣ ಹಂಪಿಯನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ವಿಶ್ವ ಮಟ್ಟದಲ್ಲಿ ಬಿಂಬಿಸುವ ನಿಟ್ಟಿನಲ್ಲಿ ಕೇಂದ್ರದಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಗಳು ಸಿಗಬಹುದು ಎಂಬ ನಿರೀಕ್ಷೆಯನ್ನು ಈ ಬಾರಿ ಹಿಂದೆಂದಿಗಿಂತ ಹೆಚ್ದಿನ ಮಟ್ಟದಲ್ಲಿ ಇಟ್ಟುಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.