ADVERTISEMENT

ವಿಜಯನಗರ: ಹಂಪಿ ಸ್ಮಾರಕದ ಸ್ತಂಭಕ್ಕೆ ಧಕ್ಕೆ, ನಾಪತ್ತೆ

ಗುತ್ತಿಗೆದಾರ, ಎಎಸ್‌ಐ ವಿರುದ್ಧ ಠಾಣೆಯಲ್ಲಿ ದೂರು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 4:36 IST
Last Updated 8 ಡಿಸೆಂಬರ್ 2025, 4:36 IST
ಹಂಪಿಯ ನೆಲಸ್ತರ ಶಿವಾಲಯ ದೇವಸ್ಥಾನದ ಬಳಿ ತುಂಡರಿಸಿರುವ ಸ್ಮಾರಕ ಸ್ತಂಭವನ್ನು ಟಿ.ಶಿವಕುಮಾರ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದು
ಹಂಪಿಯ ನೆಲಸ್ತರ ಶಿವಾಲಯ ದೇವಸ್ಥಾನದ ಬಳಿ ತುಂಡರಿಸಿರುವ ಸ್ಮಾರಕ ಸ್ತಂಭವನ್ನು ಟಿ.ಶಿವಕುಮಾರ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದು   

ಹೊಸಪೇಟೆ (ವಿಜಯನಗರ): ಹಂಪಿಯ ನೆಲಮಹಡಿ ಶಿವ ದೇವಾಲಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ವತಿಯಿಂದ ನಡೆಯುತ್ತಿರುವ ಪುನಶ್ಚೇತನ ಕಾಮಗಾರಿ ವೇಳೆ ಸ್ಮಾರಕ ಸ್ತಂಭವೊಂದನ್ನು ತುಂಡರಿಸಿದ ಮತ್ತು ಅದನ್ನು ನಾಪತ್ತೆ ಮಾಡಿದ ಕುರಿತಂತೆ ಹಂಪಿ ಠಾಣೆಗೆ ಕಮಲಾಪುರದ ಟಿ.ಶಿವಕುಮಾರ್ ಎಂಬುವವರು ದೂರು ನೀಡಿದ್ದಾರೆ.

‘ಗುತ್ತಿಗೆದಾರ ಪದ್ಮನಾಭ ಅವರಿಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಶಿವ ದೇವಸ್ಥಾನದ ಬಳಿ ಸೈಡ್‌ವಾಲ್ ಕಟ್ಟುವ ವೇಳೆ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಕಲ್ಲುಗಳನ್ನು ಯಂತ್ರ ಬಳಸಿ ತುಂಡರಿಸಲಾಗಿತ್ತು. ಡಿ.2ರಂದು ಈ ಬಗ್ಗೆ ಎಎಸ್ಐಗೆ ದೂರು ನೀಡಿದ್ದೆ. ಆದರೆ ಕ್ರಮ ಕೈಗೊಳ್ಳಲಿಲ್ಲ. ಬಳಿಕ ಅದೇ ಪಿಲ್ಲರ್‌ ಅನ್ನು ಒಡೆದು ಹಾಕಿದ್ದಲ್ಲದೆ, ಬಳಿಕ ಅದನ್ನು ನಾಪತ್ತೆ ಮಾಡಲಾಗಿದೆ, ಹೀಗಾಗಿ ಎಎಸ್ಐ ಅಧೀಕಾರಿಗಳನ್ನು ಸಹ ಕರಿಸಿ ವಿಚಾರಣೆ ನಡೆಸಬೇಕು’ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಟಿ.ಶಿವಕುಮಾರ್ ಅವರು ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆಯ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿದ್ದಾರೆ. ‘ಸಾರ್ವಜನಿಕರು ಒಂದು ಕಲ್ಲನ್ನು ಎತ್ತಿ ಇಟ್ಟರೆ ಎಎಸ್‌ಐನವರು ಕೇಸ್‌ ಹಾಕುತ್ತಾರೆ, ಪುನಶ್ಚೇತನ ಹೆಸರಲ್ಲಿ ಇವರು ಸ್ಮಾರಕ ಕಲ್ಲನ್ನು ನಾಶಪಡಿಸುವುದು ಸರಿಯೇ?’ ಎಂದು ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ದೂರು ಸ್ವೀಕರಿಸಲಾಗಿದೆ, ಅದರ ಬಗ್ಗೆ ಪರಿಶೀಲಿಸಿ, ಎಎಸ್‌ಐ ಅಧಿಕಾರಿಗಳಿಂದ ವಿವರಣೆ ಪಡೆಯುವ ಬಗ್ಗೆ ನಿರ್ಧರಿಸುತ್ತೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.