ADVERTISEMENT

ಹಂಪಿ: ವಸತಿ ಕೊರತೆಯ ವಿಶ್ವರೂಪ ದರ್ಶನ

ರೂಂ ಸಿಗದೆ ಕಲ್ಯಾಣಮಂಟಪ, ದೇವಸ್ಥಾನ, ರೈತಭವನದಲ್ಲಿ ಆಸರೆ

ಎಂ.ಜಿ.ಬಾಲಕೃಷ್ಣ
Published 28 ಡಿಸೆಂಬರ್ 2025, 4:33 IST
Last Updated 28 ಡಿಸೆಂಬರ್ 2025, 4:33 IST
ಹಂಪಿಯಲ್ಲಿ ಶನಿವಾರ ಭಾರಿ ಸಂಖ್ಯೆಯ ಪ್ರವಾಸಿಗರ ಜತೆಗೆ ಕಾಣಿಸಿದ ವಾಹನಗಳ ಸರದಿ  –ಪ್ರಜಾವಾಣಿ ಚಿತ್ರ
ಹಂಪಿಯಲ್ಲಿ ಶನಿವಾರ ಭಾರಿ ಸಂಖ್ಯೆಯ ಪ್ರವಾಸಿಗರ ಜತೆಗೆ ಕಾಣಿಸಿದ ವಾಹನಗಳ ಸರದಿ  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಹಂಪಿಯಲ್ಲಿ ಪ್ರವಾಸಿಗರು ಅನುಭವಿಸುತ್ತಿರುವ ಹತ್ತಾರು ಸಮಸ್ಯೆಗಳ ಕುರಿತು ಸ್ಪಷ್ಟ ಚಿತ್ರಣ ದೊರೆಯಬೇಕಿದ್ದರೆ ಕ್ರಿಸ್‌ಮಸ್, ವರ್ಷಾಂತ್ಯದ ವೇಳೆ, ದಸರಾ ರಜೆಯ ಸಮಯದಲ್ಲಿ ನೋಡಬೇಕು ಎಂಬ ಮಾತು ಮತ್ತೊಮ್ಮೆ ಸತ್ಯವಾಗಿದ್ದು, ಸಾವಿರಾರು ಮಂದಿ ಉಳಿದುಕೊಳ್ಳಲು ಕೊಠಡಿ ಸಿಗದೆ ಪರದಾಡಿದ್ದು ಕಳೆದ ಎರಡು ದಿನಗಳಿಂದ ಕಂಡುಬಂದಿದೆ.

‘ಪ್ರವಾಸಿಗರು ಬಹಳ ಕಷ್ಟಪಟ್ಟರು, ಅವರ ಕಷ್ಟ ನೋಡಲಾಗದೆ ಕಮಲಾಪುರದಲ್ಲಿ ರೈತ ಭವನದಲ್ಲಿ ಸುಮಾರು 100 ಮಂದಿಗೆ ವ್ಯವಸ್ಥೆ ಮಾಡಿದೆವು. ಈಶ್ವರ ಗುಡಿ, ಒಂದು ಕಲ್ಯಾಣ ಮಂಟಪದಲ್ಲೂ ರಾತ್ರಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದೆವು’ ಎಂದು ಕಮಲಾಪುರದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸುವ ಮೂಲಕ ವಸತಿ ಸಮಸ್ಯೆ ಎಷ್ಟು ಗಂಭೀರ ಸ್ಥಿತಿಗೆ ತಲುಪಿತ್ತು ಎಂಬುದನ್ನು ಬೆಟ್ಟುಮಾಡಿ ತೋರಿಸಿದರು.

ಪ್ರವಾಸಕ್ಕೆ ಬಂದ ಕೆಲವು ಬಸ್‌, ಕಾರುಗಳಲ್ಲೇ ಜನ ರಾತ್ರಿ ಕಳೆದುದು ಸಹ ಗಮನಕ್ಕೆ ಬಂತು. ಹೊಸಪೇಟೆಯಲ್ಲಿ ಕೆಲವು ಕಲ್ಯಾಣಮಂಟಪಗಳಲ್ಲಿ ಪ್ರವಾಸಿಗರು ರಾತ್ರಿ ಕಳೆದರು.

ADVERTISEMENT

ಸಂಚಾರ ದಟ್ಟಣೆ: ಹಂಪಿಗೆ ರಜಾ ಸಮಯದಲ್ಲಿ ಬಂದರೆ ಗಂಟೆಕಟ್ಟಲೆ ಸಂಚಾರ ದಟ್ಟಣೆಯಲ್ಲೇ ಸಿಲುಕಬೇಕಾಗುತ್ತದೆ ಎಂಬ ಮಾತನ್ನು ಪ್ರವಾಸಿ ಮಾರ್ಗದರ್ಶಕರು ಹಲವು ಬಾರಿ ಹೇಳಿದ್ದರು. ಶನಿವಾರ ಸಹ ಅದೇ ಪರಿಸ್ಥಿತಿ ಎದುರಾಯಿತು. ಹಂಪಿಯ ಸ್ಮಾರಕಗಳನ್ನು ನೋಡುವ ಕುತೂಹಲದಲ್ಲಿ ಬಂದವರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಕೆಲವು ಸ್ಮಾರಕಗಳನ್ನು ನೋಡದೆ ವಾಪಸಾದರು.

30 ಸಾವಿರ ವಾಹನ: ‘ಹಂಪಿಗೆ ಶನಿವಾರ 25 ಸಾವಿರದಿಂದ 30 ಸಾವಿರದಷ್ಟು ವಾಹನಗಳು ಬಂದಿವೆ. ವಾಹನ ನಿಲುಗಡೆ ಸಮಸ್ಯೆ ಆಗಲಿಲ್ಲ, ಆದರೆ ರಸ್ತೆ ಕಿರಿದಾಗಿರುವ ಕಾರಣ ಅಲ್ಲಲ್ಲಿ ಸಂಚಾರ ದಟ್ಟಣೆ ಆಗಿದ್ದುದು ನಿಜ, ಸಾಧ್ಯವಾದಷ್ಟು ಮಟ್ಟಿಗೆ ಸಂಚಾರ ದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿತ್ತು’ ಎಂದು ಕಮಲಾಪುರದ ಇನ್‌ಸ್ಪೆಕ್ಟರ್ ರಾಜೇಶ್ ಬಟಗುರ್ಕಿ ಹೇಳಿದರು.

ನಾಲ್ಕು ಪಟ್ಟು ದರ: ಹೋಟೆಲ್ ರೂಂಗಳೆಲ್ಲ ಭರ್ತಿಯಾಗಿದ್ದು, ₹1 ಸಾವಿರ ಇದ್ದ ರೂಂಗಳಿಗೆ ₹4 ಸಾವಿರ ದರ ನಿಗದಿಪಡಿಸಿದ್ದು ಕಾಣಿಸಿತು. ಕೆಲವೆಡೆ ಇನ್ನೂ ಹೆಚ್ಚು ಹಣ ಪಡೆದು ರೂಂ ಕೊಡಲಾಗಿದೆ. ಕೆಲವರು ಒಂದು ರೂಂಗಾಗಿಯೇ  ₹8 ಸಾವಿರದಿಂದ ₹10 ಸಾವಿರ ಖರ್ಚು ಮಾಡಿದ್ದನ್ನು ‘ಪ್ರಜಾವಾಣಿ’ ಬಳಿ ಹೇಳಿಕೊಂಡರು. ಇನ್ನೂ ನಾಲ್ಕು ದಿನ ಇದೇ ಪರಿಸ್ಥಿತಿ ಮುಂದುವರಿಯುವುದು ನಿಶ್ಚಿತ ಎಂದು ಹಲವು ಪ್ರವಾಸಿ ಮಾರ್ಗದರ್ಶಿಗಳು ಅಭಿಪ್ರಾಯಪಟ್ಟರು.

ಯೋಜನೆ ರೂಪಿಸಿ: ‘ಹಂಪಿಗೆ ಪ್ರವಾಸ ಬರುವವರಲ್ಲಿ ಇದೀಗ ದೇಶೀಯರ ಸಂಖ್ಯೆಯೇ ಹೆಚ್ಚುತ್ತಿದೆ, ಅಂದರೆ ಮುಂದಿನ ದಿನಗಳಲ್ಲಿ ಸಹ ಅವರ ಸಂಖ್ಯೆ ಇನ್ನಷ್ಟು ಹೆಚ್ಚುವುದು ನಿಶ್ಚಿತ. ಹೀಗಾಗಿ ವಸತಿ ವ್ಯವಸ್ಥೆ ಹೆಚ್ಚಿಸುವುದು, ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಹೋಂಸ್ಟೇಗಳಿಗೆ ಅನುಮತಿ ನೀಡುವುದು, ಡಾರ್ಮೆಟರಿಗಳನ್ನು ನಿರ್ಮಿಸುವ ಯೋಜನೆಗೆ ಮುಂದಾಗಬೇಕು. ಯುರೋಪ್‌ ದೇಶಗಳಲ್ಲಿ ಪ್ರವಾಸೋದ್ಯಮವನ್ನು ಅದು ಹೇಗೆ ನಾಡಿನ ಅಭಿವೃದ್ಧಿಗೂ ಬಳಸಿಕೊಂಡಿದ್ದಾರೆ ಎಂಬುದನ್ನು ನೋಡಿಯೇ ತಿಳಿದುಕೊಳ್ಳಬೇಕಿದೆ’ ಎಂದು ಈಚೆಗಷ್ಟೇ ಯೂರೋಪ್ ಪ್ರವಾಸ ಮುಗಿಸಿ ಬಂದಿರುವ ಸಖಿ ಟ್ರಸ್ಟ್‌ನ ನಿರ್ದೇಶಕಿ ಎಂ.ಭಾಗ್ಯಲಕ್ಷ್ಮಿ ಪ್ರತಿಕ್ರಿಯಿಸಿದರು.

ಹಂಪಿಯ ಕಿರಿದಾದ ರಸ್ತೆಗಳಲ್ಲಿ ಹೀಗೆ ವಾಹನ ದಟ್ಟಣೆ ಶನಿವಾರ ಸಾಮಾನ್ಯ ದೃಶ್ಯವಾಗಿತ್ತು  –ಪ್ರಜಾವಾಣಿ ಚಿತ್ರ

ಡಾರ್ಮೆಟರಿ ಎಲ್ಲಿ?

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದಲೇ 2024ರ ಸೆಪ್ಟೆಂಬರ್‌ನಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಹಂಪಿಯಲ್ಲಿ ₹45 ಕೋಟಿ ವೆಚ್ಚದಲ್ಲಿ ಆಧುನಿಕ ಧ್ವನಿಬೆಳಕು ವ್ಯವಸ್ಥೆ ಕಲ್ಪಿಸುವುದಕ್ಕೆ ಹಾಗೂ ಕಮಲಾಪುರದಲ್ಲಿ ₹15 ಕೋಟಿ ವೆಚ್ಚದಲ್ಲಿ ಡಾರ್ಮೆಟರಿ ನಿರ್ಮಿಸುವುದಕ್ಕೆ ಸರ್ಕಾರದ ಮಂಜೂರಾತಿ ಲಭಿಸಿತ್ತು. ಅದರ ಆದೇಶ ಪತ್ರವೂ ಬಂದಿದೆ ಎಂದು ಶಾಸಕ ಎಚ್‌.ಆರ್‌.ಗವಿಯಪ್ಪ 2024ರ ಅಕ್ಟೋಬರ್ 23ರಂದು ತಿಳಿಸಿದ್ದರು. ಆದರೆ ಒಂದೂಕಾಲು ವರ್ಷದ ಬಳಿಕವೂ ಡಾರ್ಮೆಟರಿ ನಿರ್ಮಾಣ ಹೋಗಲಿ ಅದಕ್ಕೆ ಭೂಮಿಪೂಜೆ ಸಹ ನಡೆದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.