ADVERTISEMENT

ಹೊಸಪೇಟೆ | ಹಂಪಿಗೆ ಪ್ರಯಾಣ, ಆರಂಭದಲ್ಲೇ ಭ್ರಮನಿರಸನ

ಎಂ.ಜಿ.ಬಾಲಕೃಷ್ಣ
Published 8 ಅಕ್ಟೋಬರ್ 2025, 7:34 IST
Last Updated 8 ಅಕ್ಟೋಬರ್ 2025, 7:34 IST
ಹೊಸಪೇಟೆಯ ಅನಂತಶಯನಗುಡಿ ಬಳಿ ರೈಲ್ವೆ ಹಳಿ ದಾಟಿದ ಬಳಿಕ ಕೆಟ್ಟುಹೋಗಿರುವ ರಸ್ತೆ –ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆಯ ಅನಂತಶಯನಗುಡಿ ಬಳಿ ರೈಲ್ವೆ ಹಳಿ ದಾಟಿದ ಬಳಿಕ ಕೆಟ್ಟುಹೋಗಿರುವ ರಸ್ತೆ –ಪ್ರಜಾವಾಣಿ ಚಿತ್ರ/ ಲವ ಕೆ.   

ಹೊಸಪೇಟೆ (ವಿಜಯನಗರ): ಹಂಪಿಯಲ್ಲಿ ಪ್ರವಾಸಿ ಋತು ಆರಂಭವಾಗಿದ್ದು, ನಗರದಿಂದ ಅಲ್ಲಿಗೆ ಅನಂತಶಯನಗುಡಿ ರೈಲ್ವೆ ಲೆವೆಲ್‌ ಕ್ರಾಸಿಂಗ್ ದಾಟಿಯೇ ಸಾಗಬೇಕು. ಈ ಕ್ರಾಸಿಂಗ್‌ ದಾಟಿದ ಬಳಿಕದ ಸುಮಾರು ಒಂದೂವರೆ ಕಿ.ಮೀ.ದಾರಿ ಅಕ್ಷರಶಃ ದುಃಸ್ವಪ್ನದಂತೆ ಕಾಡುತ್ತಿದೆ.

ಒಂದೆಡೆ ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ಪೂರ್ಣಗೊಳ್ಳಲು ಇನ್ನಷ್ಟು ವಿಳಂಬವಾಗುತ್ತಿದೆ, ದಿನಾ ಹತ್ತಾರು ಬಾರಿ ಇಲ್ಲಿ ವಾಹನಗಳು ರೈಲು ಚಲನೆಗೆ ಅವಕಾಶ ಮಾಡಿಕೊಡಲು ಮೈಲುದ್ದಕ್ಕೆ ಸಾಲುಗಟ್ಟಿ ನಿಲ್ಲುವುದು ಅನಿವಾರ್ಯವಾಗಿದೆ, ಗೇಟ್ ತೆರೆದು ವಾಹನಗಳು ಚಲಿಸಲು ಆರಂಭಿಸಿದ ತಕ್ಷಣ ಶಿವಶಕ್ತಿನಗರ ಬಡಾವಣೆ, ಶ್ರೀರಾಮನಗರ ಬಡಾವಣೆಗಳ ಒಳಗೆ ಸಾಗುವ ರಸ್ತೆಯಲ್ಲಿ ಬಿದ್ದಿರುವ ಹೊಂಡಗಳು ವಾಹನ ಸವಾರರನ್ನು ಇನ್ನಿಲ್ಲದಂತೆ ಸತಾಯಿಸುತ್ತಿವೆ. ಮೇಲಾಗಿ ಹಂಪಿಯತ್ತ ತೆರಳುವ ಮಾರ್ಗ ಯಾವುದು ಎಂದು ಸೂಚಿಸುವ ಸೂಚನಾ ಫಲಕವೂ ಇಲ್ಲ.

‘ಹಂಪಿಗೆ ಪ್ರವಾಸಿಗರು ಹೊಸಪೇಟೆ ಕಡೆಯಿಂದಲೇ ಹೆಚ್ಚಾಗಿ ಬರುತ್ತಾರೆ. ಹೊಸಪೇಟೆಯಲ್ಲೇ ಅಧಿಕ ಲಾಡ್ಜ್‌ಗಳು, ಹೋಟೆಲ್‌ಗಳು ಇರುವುದರಿಂದ ಇಲ್ಲೇ ಉಳಿದುಕೊಂಡು ಹಂಪಿಯತ್ತ ಬರುತ್ತಾರೆ, ಆದರೆ ಬರುವ ದಾರಿಯಲ್ಲಿ ಈ ರೀತಿಯ ಹೊಂಡ ಇದ್ದರೆ ಪ್ರವಾಸಿಗರಿಗೆ ಯಾವ ಭಾವನೆ ಬಂದೀತು ಹೇಳಿ? ಈ ಭಾಗದ ಜನರಿಗೆ ಇಲ್ಲಿನ ಸ್ಥಿತಿಗತಿ ಗೊತ್ತಿದೆ, ಸುಮ್ಮನಿರುತ್ತಾರೆ, ಪ್ರವಾಸಿಗರು ಇದೇ ಅವ್ಯವಸ್ಥೆಯನ್ನು ತಮ್ಮ ಊರಲ್ಲಿ ಹೇಳಿಕೊಂಡರೆ ಪ್ರವಾಸೋದ್ಯಮಕ್ಕೆ ಹೊಡೆತ ಅಲ್ಲವೇ?’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೂರ್ನಾಲ್ಕು ಪ್ರೊಫೆಸರ್‌ಗಳು ಆತಂಕದಿಂದ ನುಡಿದರು. ವಿಶೇಷವೆಂದರೆ ಇವರೆಲ್ಲ ಇದೇ ರಸ್ತೆಯಲ್ಲಿ ದಿನಾ ಓಡಾಡುವವರು.

ADVERTISEMENT

ಕಳೆದ ನಾಲ್ಕಾರು ದಿನಗಳಿಂದ ಹಲವು ಪ್ರವಾಸಿಗರು ಸಹ ಇದೇ ರೀತಿಯ ಗೋಳನ್ನು ‘ಪ್ರಜಾವಾಣಿ’ ಜತೆಗೆ ಹೇಳಿಕೊಂಡಿದ್ದರು. ಬೆಂಗಳೂರಿನಿಂದ ಬಂದಿದ್ದ ಅಮೃತ್‌ ಎಂಬುವವರು ಈ ರಸ್ತೆಯಲ್ಲಿ ಸಂಚರಿಸಿದ ಬಳಿಕ ‘ನಮ್ಮ ಐದು ಗಂಟೆಯ ಪ್ರಯಾಣ ಈ ಐದು ನಿಮಿಷದ ಪ್ರಯಾಣದಷ್ಟು ಸುಸ್ತು ಅನಿಸಲಿಲ್ಲ’ ಎಂದು ಮಾರ್ಮಿಕವಾಗಿ ನುಡಿದಿದ್ದರು. ಬೆಂಗಳೂರಿನಿಂದ ಏಳೆಂಟು ಪ್ರವಾಸಿಗರನ್ನು ಟೆಂಪೊ ಟ್ರಾವೆಲರ್‌ನಲ್ಲಿ ಕರೆತಂದಿದ್ದ ಅವರು, 20 ನಿಮಿಷ ರೈಲು ಗೇಟ್‌ ಬಳಿ ಕಾದಿದ್ದ ಬಳಿಕ ಹೊಂಡ ಬಿದ್ದ ರಸ್ತೆಯಲ್ಲಿ ಸಂಚಸಿರಿಸಿದ್ದರು. ಸಿಟ್ಟು, ಕುಹಕಗಳ ಮಿಶ್ರಿತ ಮಾತುಗಳಲ್ಲೇ ಅವರು ವ್ಯವಸ್ಥೆಯನ್ನು ಲೇವಡಿ ಮಾಡಿದ್ದರು.  

ಶಾಸಕರ ಗಮನಕ್ಕೆ ತರಲಾಗಿದೆ: ‘ಬಹಳ ದೊಡ್ಡ ಹೊಂಡ ಬಿದ್ದಿತ್ತು, ಅಲ್ಲಿಗೆ ತಾತ್ಕಾಲಿಕವಾಗಿ ಜಲ್ಲಿ, ಕಲ್ಲು ಹಾಕಿ ಮುಚ್ಚಲಾಗಿದೆ, ಆದರೂ ಓಡಾಟಕ್ಕೆ ತೊಂದರೆ ಆಗುವ ರೀತಿಯಲ್ಲಿ ರಸ್ತೆ ಇದೆ. ಇದನ್ನು ಶಾಸಕರ ಗಮನಕ್ಕೆ ತರಲಾಗಿದೆ. ರಸ್ತೆ ದುರಸ್ತಿಗೆ ತಗುಲಬಹುದಾದ ವೆಚ್ಚದ ಕುರಿತು ಲೋಕೋಪಯೋಗಿ ಇಲಾಖೆಯಿಂದ ಅಂದಾಜು ಸಿದ್ಧಪಡಿಸಲು ಅವರು ಸೂಚಿಸಿದ್ದಾರೆ. ಶೀಘ್ರ ದುರಸ್ತಿ ಕಾರ್ಯ ಆರಂಭವಾಗಲಿದೆ’ ಎಂದು ನಗರಸಭೆ ಆಯುಕ್ತ ಎ.ಶಿವಕುಮಾರ್ ತಿಳಿಸಿದರು.

‘ಈ ರಸ್ತೆ ದುರಸ್ತಿಯನ್ನು ತಾತ್ಕಾಲಿಕ ರಸ್ತೆ ಎಂಬ ಭಾವದಲ್ಲಿ ಮಾಡದೆ ಶಾಶ್ವತ ರಸ್ತೆ ದುರಸ್ತಿಯ ರೀತಿಯಲ್ಲೇ ಮಾಡಲಾಗುವುದು. ಫ್ಲೈಓವರ್ ಆದ ಮೇಲೂ ಈ ರಸ್ತೆ ಬಡಾವಣೆಗಳಿಗೆ ತೆರಳಲು ಬೇಕೇ ಬೇಕು. ಹೀಗಾಗಿ ಪಿಡಬ್ಲ್ಯುಡಿಯಿಂದ ಅಂದಾಜು ಪಟ್ಟಿ ಸಿದ್ಧಗೊಂಡ ತಕ್ಷಣ ರಸ್ತೆ ದುರಸ್ತಿ ಆರಂಭವಾಗಬಹುದು’ ಎಂದು ಅವರು ಹೇಳಿದರು.

ಹೊಸಪೇಟೆ ಸಮೀಪದ ಅನಂತಶಯನಗುಡಿ ರೈಲು ಗೇಟ್‌ ಬಳಿಯ ಶಿವಶಕ್ತಿ ನಗರ ಬಡಾವಣೆಯೊಳಗಿನ ರಸ್ತೆಯ ಪರಿ –ಪ್ರಜಾವಾಣಿ ಚಿತ್ರ/ ಲವ ಕೆ.

ಫ್ಲೈಓವರ್‌ ಆದರಷ್ಟೇ ನಿರಾಳ ಅನಂತಶಯನಗುಡಿ ರೈಲ್ವೆ ಫ್ಲೈಓವರ್ ಕಾಮಗಾರಿ ಕಳೆದ ಎರಡು ವರ್ಷಗಳಿಂದಲೂ ಕುಂಟುತ್ತ ಸಾಗುತ್ತಿರುವುದೇ ಸಮಸ್ಯೆಯ ಮೂಲ. ಸದ್ಯದ ಸ್ಥಿತಿ ನೋಡಿದರೆ ಇನ್ನೂ ಆರು ತಿಂಗಳು ಫ್ಲೈಓವರ್ ಕೆಲಸ ಮುಗಿಯುವುದು ಅಸಾಧ್ಯ. ಹೀಗಾಗಿ ಗೇಟ್‌ ದಾಟಿ ಬಡಾವಣೆಗಳ ಒಳಗೆ ಸಾಗುವ ರಸ್ತೆ ಬಳಕೆ ಅನಿವಾರ್ಯ. ಫ್ಲೈಓವರ್‌ಗೆ ಭೂಮಿ ಬಿಟ್ಟುಕೊಡುವವರಿಗೆ ಪರಿಹಾರ ನೀಡಿಕೆ ವಿಚಾರ ಸದ್ಯ ಕಗ್ಗಂಟಾಗಿರುವುದರಿಂದ ಕಾಮಗಾರಿ ವಿಳಂಬವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.