
ಹೊಸಪೇಟೆ (ವಿಜಯನಗರ): ಜೈನರು ಮತ್ತು ವೈಷ್ಣವರ ಮಧ್ಯೆ ಬಹು ದೊಡ್ಡ ತಿಕ್ಕಾಟ ಬಂದಾಗ ವಿಜಯನಗರ ಸಂಗಮ ಆರಸರು ಎರಡೂ ಸಮುದಾಯಗಳನ್ನು ಒಂದುಗೂಡಿಸಿ ಅವರ ಮನಸ್ಸುಗಳನ್ನು ತಿಳಿಗೊಳಿಸಿ, ಜೈನರನ್ನು ರಕ್ಷಿಸುವ ಜವಾಬ್ದಾರಿಯನ್ನು ವೈಷ್ಣವರಿಗೆ ನೀಡಿದರು. ಕನ್ನಡ ನಾಡನ್ನು ಶಾಂತಿಯ ತೋಟವನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಶುಕ್ರವಾರ ಹಂಪಿಯ ಎಂ.ಪಿ.ಪ್ರಕಾಶ್ ವೇದಿಕೆಯಲ್ಲಿ ಹಂಪಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಂಪಿಯ ಕಲ್ಲಿನಲ್ಲಿ ಬರಿ ಸಂಗೀತವಿಲ್ಲ. ಅಲ್ಲಿ ಸಾಮರಸ್ಯವಿದೆ. ಮೊಟ್ಟ ಮೊದಲ ಬಾರಿಗೆ ಭುವನೇಶ್ವರಿ ಪುತ್ಥಳಿಯನ್ನು ಸ್ಥಾಪನೆ ಮಾಡಿದ್ದು ಹಂಪಿಯಲ್ಲಿ. ಕರ್ನಾಟಕ ಏಕೀಕರಣ ಮಾಡಬೇಕು ಎನ್ನುವವರಿಗೆ ಹಂಪಿ ಸ್ಪೂರ್ತಿಯ ತಾಣವಾಗಿತ್ತು ಎಂದರು.
‘ಸಂಗೀತ ಕ್ಷೇತ್ರದಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದ ಎಕೈಕ ಸಂಗೀತಗಾಋ ಭೀಮ್‌ಸೇನ್ ಜೋಶಿ ನಮ್ಮ ಕನ್ನಡಿಗರು ಎಂಬ ಹೆಮ್ಮೆ ನಮ್ಮದು, ಅಲ್ಲದೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ನಮ್ಮ ಕನ್ನಡಿಗರು. ನೀರಾವರಿಗಾಗಿ ಬಹು ದೊಡ್ಡ ಯೋಜನೆ ರೂಪಿಸಿ ಅದನ್ನು ಜಾರಿಗೆ ತಂದವರು ವಿಜಯನಗರ ಸಾಮ್ರಾಜ್ಯದವರು. ಇವರ ಪ್ರಭಾವದಿಂದ ಮೈಸೂರು ರಾಜರು ಸಹ ನೀರಾವರಿ ಯೋಜನೆಗಳನ್ನು ರೂಪಿಸಿದರು’ ಎಂದು ಅವರು ಹೇಳಿದರು.
₹391 ಕೋಟಿ ಒದಗಿಸಿ: ಸಚಿವ ಜಮೀರ್ ಆಹಮದ್ ಖಾನ್ ಮಾತನಾಡಿ, ಹೊಸದಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ₹391 ಕೋಟಿ ಮೀಸಲಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
ನೂತನವಾಗಿ ಜಿಲ್ಲಾಡಳಿತ ಭವನ ರಚನೆ, ಜಿಲ್ಲಾಸ್ಪತ್ರೆ ಅಭಿವೃದ್ಧಿ, ಆರಣ್ಯ ಇಲಾಖೆಯ ಕಟ್ಟಡ ಸೇರಿ ಮೂಲಸೌಕರ್ಯಗಳನ್ನು ಕಲ್ಪಿಸಲು ಬಜೆಟ್‌ನಲ್ಲಿ ಅನುದಾನ ಒದಗಿಸಬೇಕು ಎಂದರು.
ಸಚಿವ ಶಿವರಾಜ್ ತಂಗಡಗಿ, ಸಂಸದ ಇ.ತುಕಾರಾಂ, ನಟ ಶಿವರಾಜ್‌ಕುಮಾರ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿದರು.
ಶಾಸಕರ ಮುನಿಸು ಶಮನ?: ಈ ಬಾರಿಯ ಹಂಪಿ ಉತ್ಸವದ ಸಿದ್ಧತಾ ಸಭೆಗಳಿಂದ ದೂರವೇ ಉಳಿದಿದ್ದ ಶಾಸಕ ಎಚ್.ಆರ್.ಗವಿಯಪ್ಪ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ಚುಟುಕಾಗಿಯೇ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಸಿಗುವ ವಿಶ್ವಾಸ ಇದೆ ಎಂದರು.
ಬೆಳಿಗ್ಗೆಯೇ ಅವರ ನಿವಾಸಕ್ಕೆ ತೆರಳಿದ್ದ ಸಚಿವ ಜಮೀರ್ ಅಹಮದ್ ಖಾನ್ ಅವರು ಶಾಸರಲ್ಲದೆ, ಅವರ ತಂದೆಯವನ್ನೂ ಮಾತನಾಡಿಸಿದ್ದರು. ಹೀಗಾಗಿ ಬಳಿಕ ಜಲಸಾಹಸ ಕ್ರೀಡೆ, ಎತ್ತುಗಳ ಪ್ರದರ್ಶನ, ಇತರ ಕೆಲವು ಕಾರ್ಯಕ್ರಮಗಳಲ್ಲಿ ಸಚಿವರ ಜತೆಗೆ ಶಾಸಕರೂ ಇದ್ದರು.
ಜನ ಕಡಿಮೆ ಬಳಿಕ ದಟ್ಟಣೆ
ಸಾಮಾನ್ಯವಾಗಿ ಹಂಪಿ ಉತ್ಸವದ ಮೊದಲ ದಿನ ಅಷ್ಟಾಗಿ ಜನ ಇರುವುದಿಲ್ಲ. ಶುಕ್ರವಾರವೂ ಅದೇ ರೀತಿ ಆಗಬಹುದೇನೋ ಎಂಬ ಭಯ ಇತ್ತು. ಮೊದಲಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಇತ್ತು. ಬರಬರುತ್ತ ಅವರ ಸಂಖ್ಯೆ ಹೆಚ್ಚಾಯಿತು. ಸಿಎಂ ಸಹ 7 ಗಂಟೆಗೆ ಬರಬೇಕಾದವರು ಸುಮಾರು ಒಂದೂವರೆ ತಾಸು ವಿಳಂಬವಾಗಿ ತಾವು ತಂಗಿದ್ದ ಹೋಟೆಲ್‌ನಿಂದ ಬಂದರು. ಜನ ಸೇರಲಿ ಎಂಬುದೇ ಅವರ ಉದ್ದೇಶವಾಗಿತ್ತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.