
ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದ ಸಮಾರೋಪದ ಸಮಾರಂಭ ಸಚಿವರ ಗೈರು ಹಾಜರಿಯಲ್ಲಿ ಭಾನುವಾರ ಕೊನೆಗೊಂಡಿತು. ಶಾಸಕ ಎಚ್.ಆರ್.ಗವಿಯಪ್ಪ ಅವರೇ ಇಡೀ ಸಮಾರೋಪದ ಹೊಣೆ ಹೊತ್ತುಕೊಂಡು ಚುಟುಕಾಗಿ ಸಭಾ ಕಾರ್ಯಕ್ರಮ ಕೊನೆಗೊಳಿಸಿದರು.
ಹಂಪಿ ಉತ್ಸವದ ಎಲ್ಲಾ ಸಿದ್ಧತಾ ಸಭೆಗಳಿಂದ ದೂರವೇ ಉಳಿದಿದ್ದ ಶಾಸಕರ ಮನೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಶಾಸಕರ ಮುನಿಸು ತಣಿಸುವ ಯತ್ನ ಮಾಡಿದ್ದರು. ಅದರ ಫಲವಾಗಿ ಬಳಿಕ ಶಾಸಕರು ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಜತೆಗೆ ಹಾಗೂ ಮುಂದಿನ ಎರಡೂ ದಿನ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಸಮಾರೋಪದಲ್ಲಿ ಅವರನ್ನು ಮುಂದಿಟ್ಟು ಬೇಸರವನ್ನು ಇನ್ನಷ್ಟು ಶಮನ ಮಾಡಲು ಸಚಿವರು ಪರೋಕ್ಷವಾಗಿ ಸಹಕರಿಸಿದರೇ ಎಂದು ಯೋಚಿಸುವ ಮಟ್ಟಿಗೆ ಸಚಿವರ ಅನುಪಸ್ಥಿತಿ ಚಿಂತನೆಗೆ ಹಚ್ಚಿತು.
ಹಂಪಿಯ ಅಭಿವೃದ್ಧಿ: ‘ಹಂಪಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ತಲಾ ₹1 ಕೋಟಿ ವೆಚ್ಚದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೆರವಿನಲ್ಲಿ 20 ಟ್ರ್ಯಾವೆಲರ್ ನೂಕ್ಸ್ ಸ್ಥಾಪಿಸುವ ಯೋಜನೆ ಆರಂಭವಾಗಿದೆ’ ಎಂದು ಶಾಸಕ ಗವಿಯಪ್ಪ ಹೇಳಿದರು.
ಕಮಲಾಪುರದಲ್ಲಿ ₹10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಫುಡ್ ಕೋರ್ಟ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಪ್ರಸ್ತುತ ಟೆಂಡರ್ ಹಂತದಲ್ಲಿದೆ. ಕಮಲಾಪುರ ಕೆರೆಯ ಸುತ್ತ ಸುಮಾರು 2.5 ರಿಂದ 3 ಕಿ.ಮೀ ಉದ್ದದ ರಿಂಗ್ ರೋಡ್ ನಿರ್ಮಿಸಿ, ಆ ಪ್ರದೇಶವನ್ನು ಪ್ರವಾಸಿ ಆಕರ್ಷಣೀಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಇದೆ ಎಂದು ತಿಳಿಸಿದರು.
ಎಂ.ಪಿ.ಪ್ರಕಾಶ್ ಕನಸು ಈಡೇರಿದೆ: ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ‘ಹಂಪಿ ಉತ್ಸವ ಆರಂಭಿಸಿರುವ ಎಂ.ಪಿ.ಪ್ರಕಾಶ ಅವರ ಆಶಯಗಳು ಈಡೇರಿದೆ, ಹಂಪಿ ಉತ್ಸವ ಜನೋತ್ಸವವಾಗಿದೆ’ ಎಂದರು.
‘ಮೈಸೂರು ದಸರಾದಂತೆ ಹಂಪಿಯಲ್ಲೂ ವಿಜಯನಗರ ಸಾಮ್ರಾಜ್ಯದ ವೈಭವ ಮರುಕಳಿಸಬೇಕು ಎಂಬುದು ಎಂ.ಪಿ. ಪ್ರಕಾಶ್ ಅವರ ಆಸೆಯಾಗಿತ್ತು. ಅಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಅವರು ಹಂಪಿ ಉತ್ಸವ ಆಚರಣೆಗೆ ಹೊಸ ರೂಪುರೇಷೆ ನೀಡಿದರು. ಕಳೆದ 39 ವರ್ಷಗಳಿಂದ ಹಂಪಿ ಉತ್ಸವ ನಡೆದುಕೊಂಡು ಬರುತ್ತಿದ್ದು, ತಾಂತ್ರಿಕ ಕಾರಣಗಳಿಂದ ಕೆಲ ವರ್ಷಗಳು ಹಂಪಿ ಉತ್ಸವ ಆಚರಿಸಲು ಆಗಲಿಲ್ಲ. ಪ್ರತಿ ವರ್ಷವೂ ಸಂಪ್ರದಾಯದಂತೆ ಹಂಪಿ ಉತ್ಸವ ಯಶಸ್ವಿಯಾಗಿ ಸಾಗಿ ಬರುತ್ತಿದೆ. ದೇಶ ವಿದೇಶಗಳ ಕಲಾವಿದರ ಜೊತೆಗೆ ಸ್ಥಳೀಯ ಕಲಾವಿದರಿಗೂ ಉತ್ಸವದಲ್ಲಿ ವೇದಿಕೆ ಕಲ್ಪಿಸಲಾಗುತ್ತಿದೆ. ಇಂದು ಹಂಪಿ ಸಾಂಸ್ಕೃತಿಕ ಕೇಂದ್ರವಾಗಿದೆ. ಹಂಪಿ ಉತ್ಸವಕ್ಕೆ ಆಗಮಿಸುವ ಜನರಿಗೆ ನಮ್ಮ ತಂದೆ ಎಂ.ಪಿ.ಪ್ರಕಾಶ್ ಅನ್ನದಾನ ವ್ಯವಸ್ಥೆ ಸಹ ಮಾಡಿದ್ದರು. ಸದ್ಯ ಶಾಸಕ ಗವಿಯಪ್ಪ ಅವರು ಸಹ ಅನ್ನ ದಾಸೋಹ ಮುಂದುವರಿಸಿರುವುದು ಶ್ಲಾಘನೀಯ’ ಎಂದು ಶಾಸಕಿ ಹೇಳಿದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಉತ್ಸವದ ಯಶಸ್ಸಿಗಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಲೋಗೊ ರಚಿಸಿದ ದೀಪಕ್ ಬಾಣದ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ, ಹೊಸಪೇಟೆ ನಗರಸಭೆ ಅಧ್ಯಕ್ಷ ಎನ್. ರೂಪೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಂ ಷಾ, ಎಸ್‌ಪಿ ಎಸ್.ಜಾಹ್ನವಿ, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜ್, ಎಡಿಸಿ ಇ.ಬಾಲಕೃಷ್ಣಪ್ಪ, ಉಪವಿಭಾಗಾಧಿಕಾರಿ ವಿವೇಕಾನಂದ ಇದ್ದರು.
‘ಹಂಪಿ ಪ್ರಕಾಶ್’ ಹೆಸರು ಸಾರ್ಥಕ
‘ಹಂಪಿ ಉತ್ಸವದಿಂದಾಗಿ ರಾಜ್ಯದಾದ್ಯಂತ ತಂದೆಯನ್ನು ‘ಹಂಪಿ ಪ್ರಕಾಶ್’ ಎಂದು ಕರೆಯಲಾಗುತ್ತಿತ್ತು. ಹಂಪಿಯಲ್ಲಿರುವ ಪ್ರತಿಯೊಂದು ಕಲ್ಲು ಮತ್ತು ಬಂಡೆಗಳು ಇತಿಹಾಸ ಸಾರುತ್ತವೆ. ಹಂಪಿ ಉತ್ಸವದಲ್ಲಿನ ಜನರ ಉತ್ಸಾಹ ಇಂದು ಈ ಕಲ್ಲು ಬಂಡೆಗಳಿಂದ ಪ್ರತಿಧ್ವನಿಸುತ್ತಿದೆ. ನಮ್ಮ ತಂದೆಯವರ ಕನಸು ಇಂದು ಬೃಹದಾಕಾರವಾಗಿ ಬೆಳದಿದೆ’ ಎಂದು ಶಾಸಕಿ ಲತಾ ಮಲ್ಲಿಕಾರ್ಜುನ್ ಭಾವುಕರಾಗಿ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.