
ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದ ಎರಡನೇ ದಿನವಾದ ಭಾನುವಾರ ಭಾರಿ ಸಂಖ್ಯೆಯಲ್ಲಿ ಜನರು ಹಂಪಿಗೆ ಬಂದರು. ಫಲಪುಷ್ಪ ಪ್ರದರ್ಶನ ಸಹಿತ ಇತರ ಎಲ್ಲ ಮೇಳಗಳಲ್ಲಿ ಹಾಗೂ ಮುಖ್ಯ ವೇದಿಕೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರ ದಟ್ಟಣೆ ಕಾಣಿಸಿತು.
ರಾತ್ರಿ 9.30ಕ್ಕೆ ಡ್ರೋನ್ ಶೋ ಆರಂಭವಾದಾಗ ಹಾಗೂ ಒಂದೊಂದು ದೃಶ್ಯ ಆಗಸದಲ್ಲಿ ಮೂಡಿದಾಗ ಜನರ ಹರ್ಷೋದ್ಗಾರ ಸಾಗರದ ಅಲೆಗಳಂತೆ ಕೇಳಿಸಿತು. ಈ ಮೂಲಕ ಸಾಗರೋಪಾದಿಯಲ್ಲಿ ಜನ ಎಂಬ ಉಪಮೆಗೆ ಅನ್ವರ್ಥದಂತೆ ಹಂಪಿ ಉತ್ಸವ ಪ್ರಜ್ವಲಿಸಿತು.
ಡ್ರೋನ್ ಶೋದಲ್ಲಿ ಕೆಲವೊಂದು ಸೇರ್ಪಡೆ ಮಾಡಲಾಗಿತ್ತು. ಅದರಲ್ಲಿ ಮುಖ್ಯವಾಗಿ ತುಂಗಭದ್ರಾ ಅಣೆಕಟ್ಟೆ ಮತ್ತು ಆಂಜನೇಯನ ಆಕಾರ ಪ್ರಮುಖವಾಗಿತ್ತು. ಶನಿವಾರ ಸಹ 13 ನಿಮಿಷಗಳಷ್ಟು ಹೊತ್ತು ಡ್ರೋನ್ ಶೋ ನಡೆಯಿತು.
ಶನಿವಾರ ಸಂಜೆ ವೇಳೆ ಹೆಚ್ಚು ಜನರು ಬರುತ್ತಿದ್ದರಿಂದ ವಾಹನ ನಿಲುಗಡೆ ಪ್ರದೇಶಗಳಲ್ಲಿ ದಟ್ಟಣೆ ಹೆಚ್ಚಾಗಿತ್ತು. ನಿಲುಗಡೆ ಸ್ಥಳಗಳಿಗೆ ವಾಹನಗಳನ್ನು ಕಳಿಸಿ, ಅಲ್ಲಿ ವ್ಯವಸ್ಥಿತವಾಗಿ ನಿಲ್ಲಿಸಲು ಪೊಲೀಸರು ಬಹಳಷ್ಟು ಶ್ರಮವಹಿಸಬೇಕಾಯಿತು.
ಸಂಜೆ 7ರ ನಂತರ ವಾಹನಗಳ ಸಂಖ್ಯೆ ಹೆಚ್ಚಾದ್ದರಿಂದ ಕಡ್ಡಿರಂಪುರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಎಲ್ಲ ದಾರಿಗಳು ಹಂಪೆಯ ಕಡೆಗೆ ಎನ್ನುವಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದ ಬಸ್‌ಗಳಲ್ಲಿ, ಖಾಸಗಿ ವಾಹನಗಳಲ್ಲಿ ಜನ ಸಾಗರವೇ ಹರಿದು ಬಂತು. ಪಕ್ಕದ ಜಿಲ್ಲೆಗಳಿಂದಲೂ ಜನರು ಉತ್ಸವವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದು, ಎರಡನೇ ದಿನದಲ್ಲಿ ಉತ್ಸವ ಜನೋತ್ಸವವಾಗಿತ್ತು.
ಎಲ್ಲಿ ನೋಡಿದರೂ ಜನವೋ ಜನ, ಮುಖ್ಯ ವೇದಿಕೆಯ ಎಲ್ಲ ಆಸನಗಳು ಭರ್ತಿಯಾಗಿ ಅನೇಕರು ನೆಲದಲ್ಲಿ ಆಸೀನರಾಗಿ ಟಿವಿ ಪರದೆಗಳಲ್ಲಿ ಕಾರ್ಯಕ್ರಮಗಳನ್ನೆಲ್ಲಾ ಕಣ್ತುಂಬಿಕೊಂಡರು. ಎಲ್ಲ ವೇದಿಕೆಗಳಿಗೂ ಜನರು ಹರಿದಾಡಿದರು. ಮುಖ್ಯ ವೇದಿಕೆಯಲ್ಲಿ ಕಾಂತಾರ ಚಲನಚಿತ್ರದ ನಾಯಕ ನಟಿ ಸಪ್ತಮಿ ಗೌಡ ಅವರನ್ನು ನೋಡಿ ಯುವಕರು ಯುವತಿಯರು ಪುಳಕಿತರಾದರು.
ಹೂವುಗಳಲ್ಲಿ ಮಾಡಿದ ಸಾಸಿವೆ ಕಾಳು ಗಣಪ, ಬಡವಿ ಲಿಂಗ, ಬೋನ್ಸಾಯ್ ಗಿಡಗಳನ್ನು ವೀಕ್ಷಣೆ ಮಾಡಿ ಮುಂದಿನ ಸ್ಟಾಲ್‌ಗೆ ಹೋದಾಗ ಸಿರಿ ಧಾನ್ಯದ ರಾಶಿ ನೋಡುತ್ತ ಜನ ಜಮಾವಣೆಗೊಂಡರು. ಇದರಿಂದ ತೋಟಗಾರಿಕೆ ಇಲಾಖೆಯ ಮಳಿಗೆಯಿಂದ ಕೃಷಿ ಇಲಾಖೆಯ ಮಳಿಗೆ ಪ್ರವೇಶ ಮಾಡುವವರಿಗೆ ಜನ ಸಂದಣಿ ದಾಟಿಕೊಂಡು ಹೋಗಲು ಹರಸಾಹಸ ಮಾಡಬೇಕಾಯಿತು. ಇದರ ಬಲ ಬದಿಯಲ್ಲಿಯೇ ರೋಣದ ಮಲ್ಲಜ್ಜ ಅವರ ಹಳೆಯ ಕೃಷಿ ಪರಿಕರಗಳನ್ನು ಅಚ್ಚರಿಯಿಂದ ನೋಡುತ್ತ ಮಾಹಿತಿ ಪಡೆದುಕೊಂಡರು.
ಮುಂದೆ ಸಾಗಿದಂತೆ ಕಾಣ ಸಿಗುವ ಅರಣ್ಯ ಇಲಾಖೆಯ ಪ್ರದರ್ಶನ, ಬಣ್ಣದ ಮೀನುಗಳ ಸೇರಿದಂತೆ ಹಲವು ಬಗೆಯ ಆಕರ್ಷಣೀಯ ಸ್ಥಳಗಳಲ್ಲಿ ನಿಂತು ಮೊಬೈಲ್ ಪೋಟೋ ತೆಗೆದುಕೊಳ್ಳುತ್ತ, ವಿಡಿಯೊ ಮಾಡಿಕೊಂಡು ಹರ್ಷದಿಂದ ಮುನ್ನಡೆಯುತ್ತಿದ್ದರು.
ಇಲ್ಲಿಂದ ಹೊರ ಬಂದ ಜನರು ಫಲ ಪುಷ್ಪ ಪ್ರದರ್ಶನದ ಮುಂದಿನ ಸಾಲಿನಲ್ಲಿ ಏರ್ಪಡಿಸಿದ್ದ ಅಹಾರ ಮೇಳದಲ್ಲಿ ಉತ್ತರ ಭಾರತದ ತಿನಿಸುಗಳು ಸೇರಿದಂತೆ ಅನೇಕ ಬಗೆಯ ಖಾದ್ಯಗಳ ರುಚಿ ಸವಿದು ಧಣಿವಾರಿಸಿಕೊಂಡು, ಅಲ್ಲಿಯೇ ಮಾರಾಟ ಮಾಡುತ್ತಿದ್ದ ಮಕ್ಕಳ ಆಟಿಕೆಗಳನ್ನು, ಬಟ್ಟೆಗಳನ್ನು ಹಾಗೂ ಇತರೆ ವಸ್ತುಗಳನ್ನು ಚೌಕಾಸಿಯೊಂದಿಗೆ ಕೊಂಡು ಹೋಗುತ್ತಿದು ಸಾಮಾನ್ಯವಾಗಿತ್ತು.
ಮೂರು ದಿನಗಳ ಹಂಪಿ ಉತ್ಸವಕ್ಕೆ ಭಾನುವಾರ ತೆರೆ ಬೀಳಲಿದೆ. ಸಮಾರೋಪ ಸಮಾರಂಭದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.