ಹಂಪಿ ಉತ್ಸವದಲ್ಲಿ ಹರಿಹರನ್ ಗಾನಸುಧೆ
ಹಂಪಿ (ವಿಜಯನಗರ): ಹಂಪಿ ಉತ್ಸವದ ಮೊದಲ ದಿನವಾದ ಶುಕ್ರವಾರ ರಾತ್ರಿ ಎಂ.ಪಿ.ಪ್ರಕಾಶ್ ವೇದಿಕೆ ಭರ್ಜರಿ ಹಾಡು, ನೃತ್ಯಗಳ ಸಂಗಮವಾಯಿತು. ವಿಜಯಪ್ರಕಾಶ್ ಮಧ್ಯರಾತ್ರಿ 1 ಗಂಟೆಯ ಬಳಿಕ ನಿದ್ದೆಯನ್ನು ಸಂಪೂರ್ಣ ಹಾರಿಸಿಬಿಟ್ಟರೆ, ಅದಕ್ಕಿಂತ ಮೊದಲು ಹರಿಹರನ್ ತಮ್ಮ ಗಾಯನದ ಮೂಲಕ ಹಾಗೂ ಸಂಜನಾ ಆನಂದ್ ಮತ್ತು ಮಾನ್ವಿತಾ ಹರೀಶ್ ತಮ್ಮ ನೃತ್ಯದ ಮೂಲಕ ಮೋಡಿ ಮಾಡಿಬಿಟ್ಟರು.
‘ಇದು ಚರಿತ್ರೆ ಸೃಷ್ಟಿಸೊ ಅವತಾರ’ ಎಂದು ಹಾಡುತ್ತ ವೇದಿಕೆಗೆ ಬಂದ ವಿಜಯಪ್ರಕಾಶ್ ಪ್ರೇಕ್ಷಕರ ಉತ್ಸಾಹ ಇಮ್ಮಡಿಗೊಳಿಸಿದರು.
ಹೊಸಪೇಟೆ ಹಾಡಿ ನನ್ನ ಜೊತೆ ಎಂದು ಹೇಳಿ ‘ಹಲೋ ಹಲೋ ನನ್ನ ಮನಸು ಇಲ್ಲೊ ಎಲ್ಲೋ ಕಳೆದೋಯ್ತು’ ಎಂಬ ಹಾಡನ್ನು ತಮ್ಮ ಮಧುರ ಕಂಠದಿಂದ ಹೊರ ಹೊಮ್ಮಿಸಿದರು. ಗಾಯಕಿ ಐಶ್ವರ್ಯ ರಂಗರಾಜನ್ ಅವರೊಂದಿಗೆ ಕಾಂತಾರ ಚಿತ್ರದ ‘ಸಿಂಗಾರ ಸಿರಿಯೇ ಅಂಗಾಲಿನಲ್ಲಿ ಬಂಗಾರ..’ ಹಾಡುತ್ತಿದ್ದಂತೆಯೇ ಪ್ರೇಕ್ಷಕರು ಅಕ್ಷರಶಃ ತಲೆದೂಗಿದರು. ‘ಮೀಟ್ ಮಾಡೋಣ’ ಹಾಡನ್ನು ಐಶ್ವರ್ಯ ಹಾಡಿದಾಗ ಪಡ್ಡೆ ಹುಡುಗರ ಹೃದಯ ಬಿರಿದು ನೃತ್ಯ ತನ್ನಿಂದ ತಾನೇ ಹುಟ್ಟಿಕೊಂಡಿತ್ತು. ಶಿವರಾತ್ರಿಯ ಮುನ್ನ ದಿನವೇ ವಿ.ಪಿ ಅವರು ಓಂ.. ಶಿವೋಮ್... ಎಂದು ಹಾಡುವ ಮೂಲಕ ಜನರಲ್ಲಿ ಶಿವರಾತ್ರಿಯ ಭಕ್ತಿ ಮೂಡುವಂತೆ ಮಾಡಿ, ಅಧ್ಯಾತ್ಮದಲ್ಲಿ ಮುಳುಗಿಸಿದರು.
ಹೊಸಪೇಟೆ ಜನ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಅಭಿನಯದ ರಾಜಕುಮಾರ ಚಿತ್ರದ ‘ಬೊಂಬೆ ಹೇಳುತ್ತೈತಿ’ ಹಾಡನ್ನು ಹಾಡುತ್ತಿದ್ದಾಗ ಎದ್ದು ನಿಂತರು. ಕೊನೆಯಲ್ಲಿ ಜೈ ಹೋ, ಜೈ ಹೋ ಹಾಡಿನ ಮೂಲಕ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಗಮನ ಸೆಳೆದರು.
ಗಾಯಕರಾದ ನಿಖಿಲ್ ಹಾಗೂ ನೇಹಾ ಅವರು ‘ರಾರಾ ರಕ್ಕಮ್ಮ ಎಕ್ಕ ಸಕ್ಕ ಎಕ್ಕ ಸಕ್ಕ’ ಹಾಡು ಹಾಡುತ್ತಿದ್ದಾಗ ಪ್ರೇಕ್ಷಕರು ಸಹ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇವೆಲ್ಲಗಳ ಮಧ್ಯ ನಿರೂಪಕಿ ಅನುಶ್ರೀ ಅವರು ತಮ್ಮ ವಿಶಿಷ್ಟ ಮಾತಿನ ದಾಟಿಯಲ್ಲಿ ನಿರೂಪಣೆ ಮಾಡುತ್ತ ಜನರನ್ನು ವೇದಿಕೆಯತ್ತ ಸೆಳೆಯುತ್ತಿದ್ದರು.
ಇದಕ್ಕೂ ಮೊದಲು ಗಾಯಕ ಹರಿಹರನ್ ಅನೇಕ ಹಾಡುಗಳನ್ನು ಹಾಡುತ್ತ ರಂಜಿಸಿದರು. ‘ಓ ಓ ಚುಲವೆ ಚಲುವೆ, ನೀನು ಬಂದು ನಿಂತಾಗ, ಸವಿ ಸವಿ ನನೆಪು, ಚುಕು ಬುಕು ರೈಲು, ಟೆಲಿ ಪೋನ್ ಗೆಳತಿ ಸೇರಿದಂತೆ ಕೆಲ ಹಿಂದಿ ಹಾಡುಗಳನ್ನು ಹಾಡಿ ರಂಜಿಸಿದ ಅವರು, ಕಾಲವನ್ನು ತಡೆಯರೋ ಯಾರು ಇಲ್ಲ ಎನ್ನುವ ಹಾಡನ್ನು ಹಾಡಿ ಪ್ರಕ್ಷರನ್ನು ಹಳೆ ಹಾಡುಗಳ ಲೋಕಕ್ಕೆ ಕರೆದುಕೊಂಡು ಹೋದರು.
ಮಿಮಿಕ್ರಿ ಗೋಪಿ ಮೋಡಿ: ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಅವರು ಮುಖ್ಯ ಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮದ್ ಖಾನ್, ವಿಷ್ಣುವರ್ಧನ್ ಸೇರಿದಂತೆ ಅನೇಕರ ಧ್ವನಿಗಳನ್ನು ಅನುಕರಿಸಿ, ನಯನ ಹಾಗೂ ಶರತ್ ಅವರೊಂದಿಗೆ ಕೆಲವು ಹಾಸ್ಯ ಸನ್ನಿವೇಶಗಳನ್ನು ಪ್ರಸ್ತುಪಡಿಸಿ ಪ್ರೇಕ್ಷರನ್ನು ರಂಜಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಹಾಡಲು ವೇದಿಕೆ ಬಂದ ನಟ ಶಿವರಾಜ್ ಕುಮಾರ್ ‘ಊರಿಯಿಂದ ಓಡಿ ಬಂದ ಜೋಗಿ ನಾ ಅಲ್ಲರಿ’, ಓ ಎದ್ದು ಬಂದ ಸತ್ಯನೂ ಅಲ್ಲರಿ ಹಾಗೂ ಟಗರು ಬಂಟು ಟಗರು ಹಾಡಿಗೆ ಸಹ ಕಲಾವಿದರೊಂದಿಗೆ ಕುಣಿಯುತ್ತ ಯುವಕರನ್ನು ಕುಣಿಯುವಂತೆ ಮಾಡಿದರು. ನಂತರ ‘ನೀ ಯರೋ ನೀ ಯರೋ’ ಎಂಬ ಹಾಡನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.