
ಬೆಂಗಳೂರಿನಲ್ಲಿ ಗುರುವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹಂಪಿ ಉತ್ಸವದ ಆಹ್ವಾನದ ಆಹ್ವಾನ ಪತ್ರಿಕೆ ನೀಡಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು
ಹೊಸಪೇಟೆ (ವಿಜಯನಗರ): ಹಂಪಿ ಉತ್ಸವಕ್ಕೆ ಒಂದು ವಾರವಷ್ಟೇ ಬಾಕಿ ಉಳಿದಿದ್ದು, ಗಣ್ಯರಿಗೆ ಆಹ್ವಾನ ನೀಡುವುದು, ರಸ್ತೆಗಳ ದುರಸ್ತಿ ಕೆಲಸಗಳು ಭರದಿಂದ ಸಾಗಿವೆ. ಮತ್ತೊಂದೆಡೆ ಕಲಾವಿದರ ಆಯ್ಕೆ, ಧ್ವನಿಬೆಳಕು ಕಾರ್ಯಕ್ರಮಕ್ಕೆ ಪೂರ್ವಾಭ್ಯಾಸಗಳೂ ಶುರುವಾಗಿವೆ.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಗುರುವಾರ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿ ಮಾಡಿ ಹಂಪಿ ಉತ್ಸವದ ಆಹ್ವಾನ ಪತ್ರಿಕೆ ನೀಡಿದರು.
ರಸ್ತೆ ದುರಸ್ತಿ: ಹೊಸಪೇಟೆ ನಗರದಿಂದ ಹಂಪಿಗೆ ತೆರಳುವಾಗ ಸಿಗುವ ಅನಂತಶಯನಗುಡಿ ರೈಲು ಗೇಟ್ ಬಳಿ ಸುಮಾರು ಒಂದೂವರೆ ಕಿ.ಮೀ ನಷ್ಟು ರಸ್ತೆ ಸಂಪೂರ್ಣ ಹಾಳಾಗಿದ್ದು, ಅದನ್ನು ದುರಸ್ತಿಗೊಳಿಸಿ, ಮರುಡಾಂಬರೀಕರಣ ಮಾಡುವ ಕೆಲಸ ಗುರುವಾರ ಆರಂಭವಾಯಿತು.
ಈ ಕೆಲಸಕ್ಕೆ ಕನಿಷ್ಠ ₹50 ಲಕ್ಷದ ಅಂದಾಜು ಮಾಡಲಾಗಿದ್ದು, ಹಂಪಿ ಉತ್ಸವ ಅನುದಾನ ಅಥವಾ ಬೇರೆ ಯಾವುದಾದರೂ ಅನುದಾನ ಬಳಸಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ನಗರಸಭೆ ಆಯುಕ್ತ ಎ.ಶಿವಕುಮಾರ್ ಹೇಳಿದರು.
ಹಂಪಿ ಉತ್ಸವಕ್ಕೆ ಈ ಬಾರಿ ಕೆಲವೊಂದು ವಿಶೇಷ ಆಕರ್ಷಣೆ ಸೇರ್ಪಡೆಯಾಗಿದ್ದು, ಹೊಸಪೇಟೆ ಪ್ರವೇಶದ್ವಾರವೆಂದೇ ಪರಿಗಣಿಸಲಾಗಿರುವ ಸುರಂಗ ಮಾರ್ಗದ ಬಳಿ ಹಂಪಿಯ ಕಲ್ಲಿನ ರಥ, ಕರ್ನಾಟಕದ ಭೂಪಟವನ್ನು ಬಿಂಬಿಸುವ ಪ್ರತಿಕೃತಿ ರಚಿಸಿ, ಅವುಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಹೆದ್ದಾರಿಯಲ್ಲಿ ಸಾಗುವವರಿಗೆ ಥಟ್ಟನೆ ಹಂಪಿ ಉತ್ಸವದ ವೈಭವ ಕಣ್ತಂಬಿಕೊಳ್ಳಲು ಈ ವ್ಯವಸ್ಥೆ ಮಾಡಲಾಗಿದೆ.
ರಂಗೋಲಿ ಸ್ಪರ್ಧೆಗೆ ನೋಂದಣಿ: ಹಂಪಿ ಉತ್ಸವದ ಪುಯುಕ್ತ ಫೆಬ್ರವರಿ 13ರಿಂದ 15 ರವರೆಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮಹಿಳೆಯರು ರಂಗೋಲಿಗೆ ಸಂಬಂಧಿಸಿದ ಎಲ್ಲಾ ಸಾಮಗ್ರಿಗಳೊಂದಿಗೆ ಭಾಗವಹಿಸಬಹುದು.
ಆಸಕ್ತರು ಫೆ.9ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗಾಗಿ ನಗರದ ಬಸವೇಶ್ವರ ಬಡಾವಣೆ, ಮೆಟ್ರೋ ಪ್ಯಾಷನ್, ಮೊದಲನೇ ಮಹಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅಥವಾ ದೂ.ಸಂ: 7353629118, 9880641856 ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಫೆ.13 14– ವಿವಿಧ ಕ್ರೀಡಾ ಸ್ಪರ್ಧೆ
ಹಂಪಿ ಉತ್ಸವದ ಅಂಗವಾಗಿ ಫೆ.13 ಮತ್ತು 14ರಂದು ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 13ರಂದು ಬೆಳಿಗ್ಗೆ 10 ಗಂಟೆಗೆ ಮಲಪನಗುಡಿಯ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ಹಂಪಿ ಉತ್ಸವದ ಓಪನ್ ಬೆಂಚ್ ಪ್ರೆಸ್ ಸ್ಪರ್ಧೆ ವಿಕಲಚೇತನರ ಸಿಟ್ಟಿಂಗ್ ಕಬಡ್ಡಿ ಸ್ಪರ್ಧೆ ಫೆ.14ರಂದು ರಾಜ್ಯ ಮಟ್ಟದ ಪುರುಷ ಮಹಿಳಾ ಹಾಗೂ ಕಲಬುರಗಿ ವಿಭಾಗದ ಮಹಿಳಾ ಕುಸ್ತಿ ಮತ್ತು ಜಿಲ್ಲಾ ಮಟ್ಟದ ಪುರುಷ ಕುಸ್ತಿ ಮುಕ್ತ ಕಲ್ಲು ಗುಂಡು ಎತ್ತುವ ಸ್ಪರ್ಧೆ ಬಂಡಿಗಾಲಿ ತೊಡಿಸುವ ಸ್ಫರ್ಧೆ ಆಯೋಜಿಸಲಾಗಿದೆ.
ಆಸಕ್ತರು ತಮ್ಮ ಆಧಾರ್ ಕಾರ್ಡ್ ಅಥವಾ ಯಾವುದೇ ಗುರುತಿನ ಚೀಟಿ ಪ್ರತಿಯೊಂದಿಗೆ ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ದೂ.ಸಂಖ್ಯೆ 9980872083 9916565522 9880921916 ಸಂಪರ್ಕಿಸಬಹುದು ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಎಂ.ಉಮೇಶ್ ತಿಳಿಸಿದ್ದಾರೆ.
- ಫೆ.13ರಂದು ಜೋಡಿ ಎತ್ತುಗಳ ಪ್ರದರ್ಶನ
ಹಂಪಿ ಉತ್ಸವದ ಅಂಗವಾಗಿ ಜಿಲ್ಲೆಯ ಕಮಾಲಾಪುರದ ಹೊಸ ಬಸ್ ನಿಲ್ದಾಣದ ಹತ್ತಿರ ಫೆ.13 ರಂದು ವಿವಿಧ ತಳಿಗಳ ಜೋಡಿ ಎತ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಆಸಕ್ತ ರೈತರು ತಮ್ಮ ಎತ್ತುಗಳನ್ನು ಕರೆತರಬಹುದಾಗಿದ್ದು ಬೆಳಿಗ್ಗೆ 8ರಿಂದ 10 ಗಂಟೆಯೊಳಗೆ ನೋಂದಣಿ ಮಾಡಿಸಿಕೊಳ್ಳಲು ತಿಳಿಸಲಾಗಿದೆ. ಮಾಹಿತಿಗೆ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.