
ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದ ಸಡಗರ ಆರಂಭವಾಗಿದ್ದು, ಶನಿವಾರ ಮಾತಂಗ ಪರ್ವತ ಮೈದಾನದಲ್ಲಿ ಸಾಂಪ್ರದಾಯಿಕ ಶಿಲ್ಪಕಲಾ ಶಿಬಿರ ಉತ್ಸವಕ್ಕೆ ಸ್ವಾಗತ ಕೋರುವಂತೆ ಕಾಣಿಸಿತು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಕಲ್ಲುಗಳಿಗೆ ಪೂಜೆ ಸಲ್ಲಿಸುವ ಮೂಲಕ ಶಿಲ್ಪಕಲಾ ಶಿಬಿರಕ್ಕೆ ಚಾಲನೆ ನೀಡಿದರು. ಶಿಲ್ಪಿ ಸುರೇಶ್ ಆಚಾರ್ ಅವರ ನಿರ್ದೇಶನದಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂದ 15 ಶಿಲ್ಪಿಗಳು ಕಲ್ಲಿನಲ್ಲಿ ಸುಂದರವಾಗಿ ಕಲೆ ಅರಳಿಸುವ ಕೆಲಸದಲ್ಲಿ ತೊಡಗಿದರು. ಇವರಲ್ಲಿ ಇಬ್ಬರು ಮಹಿಳಾ ಶಿಲ್ಪಿಗಳೂ ಇರುವುದು ವಿಶೇಷವಾಗಿತ್ತು. ಫೆ.11ರವರೆಗೆ ಈ ಶಿಬಿರ ನಡೆಯಲಿದ್ದು, ರಚನೆಯಾಗುವ ಸುಂದರ ಮೂರ್ತಿಗಳನ್ನು, ಕೆತ್ತನೆಗಳನ್ನು ಹಂಪಿ ಉತ್ಸವದ ವೇಳೆ ಪ್ರದರ್ಶನಕ್ಕೆ ಇಡಲಾಗುತ್ತದೆ.
ಆತಿಥೇಯ ವಿಜಯನಗರ ಜಿಲ್ಲೆಯ ಕೆ.ಯುವರಾಜ, ಬಿ.ಅಂಚನಾಚಾರ್, ವಿನೋದ್, ಕಲಬುರ್ಗಿಯ ವಿಶ್ವನಾಥ್, ಕೊಪ್ಪಳದ ಕಾಳಿಚರಣ್, ಬಾಗಲಕೋಟೆಯ ಮಲ್ಲಪ್ಪ ಹಡಪದ, ಕುರಡಗಿಯ ವೀರೇಶ್ ಬಡಿಗೇರ್, ಗದಗದ ಸುಮಲತಾ, ಹಾಸನದ ಸಂದೇಶ್, ಬಾದಾಮಿಯ ದಾನಯ್ಯ ಮುಖ್ಯ ಶಿಲ್ಪಿಗಳಾಗಿದ್ದರೆ, ಗದಗದ ಸಹನಾ ಬಡಿಗೇರ, ಶಿಗ್ಲಿಯ ಶ್ರೀಕಾಂತ್, ಚಿತ್ರದುರ್ಗದ ತೀರ್ಥಾಚಾರಿ, ಚಿಕ್ಕಮಗಳೂರಿನ ಚೇತನ್, ದಾವಣಗೆರೆಯ ಸಂದೀಪ್ ಅವರು ಸಹಾಯಕ ಶಿಲ್ಪಿಗಳಾಗಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಮುಖ್ಯ ವೇದಿಕೆ ನಿರ್ಮಾಣ ಆರಂಭ: ಗಾಯತ್ರಿ ಪೀಠ ಸಮೀಪದ ಮೈದಾನದಲ್ಲಿ ಮುಖ್ಯ ವೇದಿಕೆ ನಿರ್ಮಿಸುವ ಕೆಲಸ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಅದು ಅಂತಿಮ ಹಂತಕ್ಕೆ ತಲುಪಲಿದೆ. ಎದುರುಬಸವಣ್ಣ ಮಂಟಪ ಸಮೀಪದಲ್ಲೂ ವೇದಿಕೆ ನಿರ್ಮಾಣ ಕಾರ್ಯಕ್ಕೆ ವೇಗ ಸಿಕ್ಕಿದೆ.
ಧ್ವನಿಬೆಳಕು–ತಾಲೀಮು ಜೋರು: ಧ್ವನಿಬೆಳಕು ಕಾರ್ಯಕ್ರಮಕ್ಕೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ತಾಲೀಮು ಆರಂಭವಾಗಿದ್ದು, ಶನಿವಾರವೂ ಮುಂದುವರಿಯಿತು. ಭಾನುವಾರ ಇಲ್ಲಿ ಕೊನೆಗೊಳ್ಳಲಿದ್ದು, ಸೋಮವಾರದ ಹಂಪಿಯ ಆನೆಲಾಯ ಪ್ರದೇಶದಲ್ಲೇ ತಾಲೀಮು ನಡೆಯಲಿದೆ.
ಅಧಿಕಾರಿಗಳಾದ ಜಿತೇಂದ್ರ ಪಾನ್ ಪಾಟೀಲ್, ಸಂತೋಷಿ ಮೇಡಂ, ಎಲ್.ಡಿ.ಜೋಷಿ, ಜಯಕುಮಾರ್, ಮಂದಾರ್ ಎಸ್.ಗುಪ್ತ ಮಾರ್ಗದರ್ಶನದಲ್ಲಿ ತರಬೇತಿ ನಡೆಯುತ್ತಿದೆ. ಶೀಲಾ ಶ್ರೀಧರನ್ ಅವರು ನೃತ್ಯ ನಿರ್ದೇಶಕಿಯಾಗಿದ್ದಾರೆ. ಮತ್ತೊಂದೆಡೆ ಆನೆಲಾಯ ಪ್ರದೇಶದಲ್ಲಿ ಹಲವು ವೇದಿಕೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.
13ಕ್ಕೆ ಸಂಜೆ 6ಕ್ಕೆ ಸಿಎಂರಿಂದ ಉತ್ಸವಕ್ಕೆ ಚಾಲನೆ ಮುಖ್ಯ ವೇದಿಕೆ ಬಳಿಯಲ್ಲೇ ಫೆ.13ರಿಂದ 15ರವರೆಗೆ ಸಂಜೆ 7ಕ್ಕೆ ಡ್ರೋನ್ ಶೋ ಆನೆಲಾಯ ಬಳಿ 13ರ ಸಂಜೆ 6ರಿಂದ ‘ವಿಜಯನಗರ ವೈಭವ ಧ್ವನಿಬೆಳಕು’
ನಾಳೆಯಿಂದ ಕಾರ್ಯಕ್ರಮಗಳ ರಸದೌತಣ ಹಂಪಿ ಉತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳ ಪಟ್ಟಿ ಈಗಾಗಲೇ ಸಿದ್ಧವಾಗಿದ್ದು ಫೆ.9ರಂದು ಸಂಜೆ 5ಕ್ಕೆ ಮಾತಂಗ ಪರ್ವತ ಮೈದಾನದಲ್ಲಿ ಚಿತ್ರಕಲಾ ಶಿಬಿರ ನಡೆಯಲಿದೆ. 10ರಂದು ಬೆಳಿಗ್ಗೆ 8ಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ವಿರೂಪಾಕ್ಷ ದೇವಸ್ಥಾನದವರೆಗೆ ಬೈಕ್ ರ‍್ಯಾಲಿ ನಡೆಯಲಿದೆ. ಫೆ.11ರಂದು ಸಂಜೆ 6ಕ್ಕೆ ವಿರೂಪಾಕ್ಷ ದೇವಸ್ಥಾನದ ಬಳಿ ತುಂಗಾರತಿಯ ವೈಭವ ಜರುಗಲಿದೆ. ಫೆ.12ರಂದು ಬೆಳಿಗ್ಗೆ 10ಕ್ಕೆ ಹಂಪಿ ಬೈ ಸ್ಕೈ ಹೆಲಿಕಾಪ್ಟರ್ ಹಾರಾಟ ಕಮಲಾಪುರ ಮಯೂರ ಹೋಟೆಲ್ ಬಳಿ ಆರಂಭವಾಗಲಿದೆ. ಅದೇ ದಿನ ಸಂಜೆ 3ಕ್ಕೆ ಹೊಸಪೇಟೆ ನಗರದ ವಡಕರಾಯ ದೇವಸ್ಥಾನದಿಂದ ಪುನೀತ್ ರಾಜ್‌ಕುಮಾರ್ ವೃತ್ತದವರೆಗೆ ವಸಂತ ವೈಭವ ಕನ್ನಡ ಭುವನೇಶ್ವರಿಯ ಶೋಭಾಯಾತ್ರೆ ನಡೆಯಲಿದೆ. ಫೆ.13ರಂದು ಬೆಳಿಗ್ಗೆ 10ಕ್ಕೆ ಕಮಲಾಪುರದಲ್ಲಿ ಎತ್ತುಗಳ ಪ್ರದರ್ಶನ ಅದೇ ಸಮಯದಲ್ಲಿ ವಿರೂಪಾಕ್ಷ ದೇವಸ್ಥಾನದ ಮುಂಭಾಗದಲ್ಲಿ ರಂಗೋಲಿ ಸ್ಪರ್ಧೆ ಮಾತಂಗ ಪರ್ವತ ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ 10.30ಕ್ಕೆ ಅದೇ ಸ್ಥಳದಲ್ಲಿ ಮತ್ಸ್ಯಮೇಳ ಕೃಷಿ ಕರಕುಶಲ ಕೈಗಾರಿಕೆ ಪುಸ್ತಕ ಪ್ರದರ್ಶನ ವಿರೂಪಾಕ್ಷ ದೇವಸ್ಥಾನ ವೇದಿಕೆಯಲ್ಲಿ ಹಂಪಿ ಇತಿಹಾಸ ಕುರಿತು ವಿಚಾರ ಸಂಕಿರಣ ಕಮಲಾಪುರ ಕೆರೆಯಲ್ಲಿ ದೋಣಿವಿಹಾರ ಬೆಳಿಗ್ಗೆ 11.30ಕ್ಕೆ ಮಾತಂಗ ಪರ್ವತ ಮೈದಾನದಲ್ಲಿ ಆಹಾರ ಮೇಳ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.