ADVERTISEMENT

ಹಂಪಿ ಉತ್ಸವ: ಪ್ರೇಕ್ಷಕರ ಮೈನವಿರೇಳಿಸಿದ ಕುಸ್ತಿ ಪಂದ್ಯಾವಳಿ

ಸಿ.ಶಿವಾನಂದ
Published 15 ಫೆಬ್ರುವರಿ 2026, 2:13 IST
Last Updated 15 ಫೆಬ್ರುವರಿ 2026, 2:13 IST
<div class="paragraphs"><p>ಹಂಪಿ ಉತ್ಸವದಲ್ಲಿ ನಡೆದ ಕುಸ್ತಿ ಪಂದ್ಯದಲ್ಲಿ ಒಂದು ರೋಚಕ ಕ್ಷಣ–‍</p></div>

ಹಂಪಿ ಉತ್ಸವದಲ್ಲಿ ನಡೆದ ಕುಸ್ತಿ ಪಂದ್ಯದಲ್ಲಿ ಒಂದು ರೋಚಕ ಕ್ಷಣ–‍

   

ಪ್ರಜಾವಾಣಿ ಚಿತ್ರ/ ಲವ ಕೆ.

ಹಂಪಿ (ವಿಜಯನಗರ): ವಿಜಯನಗರ ಸಾಮ್ರಾಜ್ಯದ ಆಡಳಿತದ ಅವಧಿಯಲ್ಲಿ ಕುಸ್ತಿಗೆ ಉತ್ತೇಜನ ನೀಡಲಾಗಿತ್ತು, ಹಾಗೆಯೇ ಕುಸ್ತಿಪಟುಗಳಿಗೆ ವಿಶೇಷ ಗೌರವ ದೊರೆಯುತ್ತಿತ್ತು ಅಂತೆಯೇ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಹೊಸ ಮಲಪನಗುಡಿಯ ವಿದ್ಯಾರಣ್ಯ ಪ್ರೌಢಶಾಲೆಯ ಹಿಂಭಾಗದ ಮೈದಾನದಲ್ಲಿ ನಿರ್ಮಿಸಿದ್ದ ಅಖಾಡದಲ್ಲಿ ಶನಿವಾರ ಕುಸ್ತಿಪಂದ್ಯಗಳನ್ನು ಆಯೋಜಿಸಲಾಗಿತ್ತು,

ADVERTISEMENT

ಸುಡು ಬಿಸಿಲನ್ನೂ ಲೆಕ್ಕಿಸದ ಕುಸ್ತಿಪ್ರೇಮಿಗಳು ಅಂಕಣವನ್ನು ಸುತ್ತುವರೆದಿದ್ದರು, ಇದರಿಂದಾಗಿ ಹೂಗಳಿಂದ ಅಲಂಕೃತಗೊಂಡಿದ್ದ ಕುಸ್ತಿ ಅಂಕಣ ವಿಶೇಷವಾಗಿ ರಂಗೇರಿತ್ತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕುಸ್ತಿಪಟುಗಳು ತಮ್ಮ ಬಿಗಿ ಪಟ್ಟುಗಳನ್ನು ಪ್ರದರ್ಶಿಸಿ ಇಡೀ ದಿನ ಕುಸ್ತಿಯ ರಸದೌತಣ ನೀಡಿದರು, ಪೈಲ್ವಾನರು ಪರಸ್ಪರ ಸೆಣಸಾಟಕ್ಕೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕುಸ್ತಿ ಪ್ರೇಮಿಗಳನ್ನು ಮೈನವಿರೇಳುವಂತೆ ಮಾಡಿತ್ತು.

57ರಿಂದ 65 ಕೆಜಿ ತೂಕದ ಕುಸ್ತಿಯಲ್ಲಿ ರಾಜ್ಯಮಟ್ಟದ ಹಂಪಿ ಕಿಶೋರ ಪ್ರಶಸ್ತಿಗೆ ನಡೆದ ಸೆಣೆಸಾಟದಲ್ಲಿ ವಿರೂಪಾಕ್ಷ ಎದುರಾಳಿಯನ್ನು ಚಿತ್ ಮಾಡಿ ಪ್ರಥಮ ಸ್ಥಾನ ಗಳಿಸಿದರು. ಕಾರ್ತಿಕ್, ಮಾರುತಿ ದ್ವಿತೀಯ ಸ್ಥಾನ ಪಡೆದರು. 64 ರಿಂದ 74 ಕೆಜಿ ತೂಕದ ಕುಸ್ತಿಯಲ್ಲಿ ರಾಜ್ಯ ಮಟ್ಟದ ಹಂಪಿ ಕುಮಾರ ಪ್ರಶಸ್ತಿಗೆ ನಡೆದ ಕಾದಾಟದಲ್ಲಿ ಕೆ.ಸಂಜೀವನ ಪ್ರಥಮ ಸ್ಥಾನ ಪಡೆದು ನೆಚ್ಚಿನ ಪೈಲ್ವಾನ್ ಎನಿಸಿದರು. ಭರತ್ ಕುಡ್ಡೆಮ್ಮಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.

75 ರಿಂದ 85 ಕೆಜಿ ತೂಕದ ವಿಭಾಗದಲ್ಲಿ ರಾಜ್ಯ ಮಟ್ಟದ ಹಂಪಿ ಕೇಸರಿ ಪ್ರಶಸ್ತಿಗೆ ನಡೆದ ಕಾದಾಟದಲ್ಲಿ ಬೀರಲಿಂಗೇಶ್ವರ ಪ್ರಥಮ ಸ್ಥಾನ ಪಡೆದರೆ, ಶಿವಾನಂದ ದ್ವಿತೀಯ ಸ್ಥಾನ ಪಡೆದರು. 86ಕ್ಕೂ ಮೇಲ್ಪಟ್ಟ ತೂಕದ ಕುಸ್ತಿಯಲ್ಲಿ ರಾಜ್ಯಮಟ್ಟದ ಹಂಪಿ ಕಂಠೀರವ ಪ್ರಶಸ್ತಿಗೆ ಪರಮಾನಂದ ಪ್ರಥಮ, ವಿಜಯಕುಮಾರ.ಜಿ ದ್ವಿತೀಯ ಸ್ಥಾನಕ್ಕೆ ತೃಪ್ತರಾದರು.

ಕಲ್ಲರ್ಜಿಂಗ್, ಏಕಲಾಂಗ್, ಸವಾರಿ ಪಟ್ಟುಗಳನ್ನು ಪೈಲ್ವಾನರು ಲೀಲಾಜಾಲವಾಗಿ ಪ್ರದರ್ಶಿಸಿ ಎದುರಾಳಿಗೆ ಪರಸ್ಪರ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ 39 ಪುರುಷ ಹಾಗೂ 36 ಮಹಿಳಾ ಪೈಲ್ವಾನರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಪುರುಷರ 57ರಿಂದ 86 ಕೆಜಿ ವಿಭಾಗದಲ್ಲಿ ವಿವಿಧ ನಾಲ್ಕು ಹಂತಗಳ ಕುಸ್ತಿಗಳು ನಡೆದವು, ಮಹಿಳೆಯರಿಗೆ 45ರಿಂದ 58 ತೂಕದ ವಿಭಾಗದಲ್ಲಿ ಕುಸ್ತಿಗಳು ನಡೆದವು. ರಾಜ್ಯ, ವಿಭಾಗ ಮತ್ತು ಜಿಲ್ಲಾ ಮಟ್ಟದ ಕುಸ್ತಿಗಳನ್ನು ಪ್ರತ್ಯೇಕವಾಗಿ ನಡೆಸಲಾಯಿತು. ಕುಸ್ತಿಯ ಆರಂಭಿಕ ಉದ್ಘಾಟನೆ ಪಂದ್ಯದಲ್ಲಿ ತಿಪ್ಪೇಸ್ವಾಮಿ ಮತ್ತು ವಿಜಯಕುಮಾರ್ ಮದಗಜಗಳಂತೆ ಕಾದಾಡಿದರು, ಆರು ನಿಮಿಷಗಳ ಪಂದ್ಯದಲ್ಲಿ ವಿಜಯಕುಮಾರ್ ಕೇವಲ 1 ಅಂಕದ ಅಂತರದಲ್ಲಿ ತಿಪ್ಪೇಸ್ವಾಮಿ ಅವರನ್ನು ಮಣ್ಣು ಮುಕ್ಕಿಸಿದರು.

ಶಾಸಕ ಎಚ್.ಆರ್.ಗವಿಯಪ್ಪ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಉಪವಿಭಾಗಧಿಕಾರಿ ವಿವೇಕಾನಂದ ಇದ್ದರು. ದುರುಗೋಜಿ, ವೆಂಕಟೇಶ್, ಬೀರಲಿಂಗಪ್ಪ, ಯು.ಅಶೋಕ್ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.