
ಹೊಸಪೇಟೆ (ವಿಜಯನಗರ): ಹಂಪಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಖ್ಯಾತ ಗಾಯಕರಾದ ವಿಜಯಪ್ರಕಾಶ್, ಮಂಗ್ಲಿ, ಹರಿಹರನ್, ಅರ್ಜುನ್ ಜನ್ಯ, ನವೀಜ್ ಸಜ್ಜು, ಮಣಿಕಾಂತ್ ಕದ್ರಿ, ರಘು ದೀಕ್ಷಿತ್ ಅವರು ಸಂಗೀತದ ರಸದೌತಣ ಉಣಬಡಿಸಲಿದ್ದಾರೆ.
ಸೆಲೆಬ್ರಿಟಿಗಳ ಪೈಕಿ ಮೊದಲು ದಿನ ಶಿವರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ರುಕ್ಮಿಣಿ ವಸಂತ್, ಎರಡನೇ ದಿನ ಗಣೇಶ್, ರಾಜ್ ಬಿ. ಶೆಟ್ಟಿ, ಝೈದ್ ಖಾನ್, ಸಪ್ತಮಿ ಗೌಡ, ಗಿಲ್ಲಿ, ಕಾವ್ಯ ಹಾಗೂ ಕೊನೆಯ ದಿನ ರಚಿತಾ ರಾಮ್, ಡಾಲಿ ಧನಂಜಯ, ಧ್ರುವ ಸರ್ಜಾ ಅವರು ಪ್ರೇಕ್ಷಕರಿಗೆ ಮುದ ನೀಡಲಿದ್ದಾರೆ.
ಫೆ. 13ರ ಉದ್ಘಾಟನಾ ಕಾರ್ಯಕ್ರಮದಂದು ಮೊದಲಿಗೆ ಡ್ರೋನ್ ಶೋ, ಬಳಿಕ ವಿವಿಧ ಕಲಾವಿದರಿಂದ ಕಾರ್ಯಕ್ರಮಗಳು ಮುಖ್ಯ ವೇದಿಕೆಯಲ್ಲಿ ನಡೆಯಲಿದ್ದರೆ, ವಿಜಯಪ್ರಕಾಶ್, ಹರಿಹರನ್, ಅಲ್‌ಒಕೆ ತಂಡದಿಂದ ಗಾಯನ ಸುಧೆ ಹರಿಯಲಿದೆ.
ಫೆ.14ರಂದು ನವೀನ್ ಸಜ್ಜು ಮತ್ತು ಅರ್ಜುನ್ ಜನ್ಯ ಅವರಿಂದ ಸಂಗೀತ ರಸಮಂಜರಿ ಮೊಳಗಲಿದೆ. ಫೆ.15ರಂದು ಮಂಗ್ಲಿ, ಮಣಿಕಾಂತ್ ಕದ್ರಿ ಮತ್ತು ರಘು ದೀಕ್ಷಿತ್ ಅವರ ಗಾನ ಮಾಧುರ್ಯ ಹಂಪಿಯ ಕಲ್ಲು ಕಲ್ಲುಗಳಲ್ಲಿ ಅನುರಣಿಸಲಿದೆ.
ಮತ್ತೊಂದಡೆಯೂ ಸೆಲೆಬ್ರಿಟಿಗಳು: ಎದುರುಬಸವಣ್ಣ ವೇದಿಕೆಗೆ ಈ ಬಾರಿ ‘ಶ್ರಿಕೃಷ್ಣ ದೇವರಾಯ ವೇದಿಕೆ’ ಎಂಬ ಹೆಸರಿಡಲಾಗುತ್ತಿದ್ದು, ಅಲ್ಲಿ ಮೂರೂ ದಿನ ಮೂವರು ಸೆಲೆಬ್ರೆಟಿ ಗಾಯಕರು ಕಾರ್ಯಕ್ರಮ ನೀಡಲಿದ್ದಾರೆ. ಮೊದಲ ದಿನ ಶಮಿತಾ ಮಲ್ನಾಡ್, 2ನೇ ದಿನ ಎಂ.ಡಿ.ಪಲ್ಲವಿ ಹಾಗೂ 3ನೇ ದಿನ ವಾಸುಕಿ ವೈಭವ್ ಅವರ ಕಾರ್ಯಕ್ರಮ ಸಂಘಟಿಸಲಾಗಿದೆ.
ವಿರೂಪಾಕ್ಷ ದೇವಸ್ಥಾನ ವೇದಿಕೆಯಲ್ಲಿ ಸಹ ಸೆಲೆಬ್ರಿಟಿ ಗಾಯಕರಿಗೆ ಅವಕಾಶ ನೀಡಲಾಗಿದೆ. ಮೊದಲ ದಿನ ಕಲಾವತಿ ದಯಾನಂದ, 3ನೇ ದಿನ ಬಿಗ್‌ಬಾಸ್ ಹನುಮಂತ, ಕಾಸಿಂ ಅವರಿಂದ ಗಾಯನವಿರಲಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಶಿವರಾತ್ರಿ ಜಾಗರಣೆ: ಶಿವರಾತ್ರಿ ದಿನ ಸಾವಿರಾರು ಭಕ್ತರು ವಿರೂಪಾಕ್ಷ ದೇವಸ್ಥಾನದಲ್ಲಿ ಜಾಗರಣೆ ಮಾಡುವುದು ಪದ್ಧತಿ. ಈ ಬಾರಿ ಸಹ ಅದಕ್ಕೆ ಅಡಚಣೆ ಆಗದ ರೀತಿಯಲ್ಲಿ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಲಾಗುವುದು. ಬಹುತೇಕ ಸಾಸಿವೆಕಾಳು ಗಣೇಶ ಸಮೀಪದಿಂದ ವಿರೂಪಾಕ್ಷ ದೇವಸ್ಥಾನ ತನಕ ವೃದ್ಧರು, ಮಕ್ಕಳಿಗೆ ಬ್ಯಾಟರಿ ವಾಹನ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಹಂಪಿ ಉತ್ಸವ 15ರಂದು ಪ್ರಧಾನ ವೇದಿಕೆ, ಇತರ ಮೂರು ವೇದಿಕೆಗಳಲ್ಲಿ ಮಧ್ಯರಾತ್ರಿ ವೇಳೆಗೆ ಕೊನೆಗೊಳ್ಳಲಿದ್ದರೆ, ವಿರೂಪಾಕ್ಷ ದೇವಸ್ಥಾನದೊಳಗಿನ ವೇದಿಕೆಯಲ್ಲಿ ಮಾತ್ರ ಮರುದಿನ ಬೆಳಿಗ್ಗೆಯ ತನಕವೂ ಮುಂದುವರಿಯಲಿದೆ. ಬಹುತೇಕ ಶಿವನಿಗೆ ಸಂಬಂಧಿಸಿದ ಹಾಡು, ನೃತ್ಯಗಳನ್ನೇ ಅಲ್ಲಿ ಪ್ರತ್ತುತಪಡಿಸಿ ಜಾಗರಣೆಗೆ ಭಕ್ತಿಯ ಸಿಂಚನ ನೀಡುವ ಉದ್ದೇಶ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣವರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಆಹ್ವಾನ ಪತ್ರಿಕೆ ಬಹುತೇಕ ಸಿದ್ಧ ಮಕ್ಕಳನ್ನು ಸೆಳೆಯಲು ಬರಲಿದ್ದಾರೆ ಪುಣೆಯ ಕಲಾವಿದರು ಮುಖ್ಯ ವೇದಿಕೆಯ ಮೇಲ್ಭಾಗದಲ್ಲೇ ಡ್ರೋನ್ ಶೋ
ಗರಿಷ್ಠ 15 ನಿಮಿಷ ಡ್ರೋನ್ ಶೋ
ಮೈಸೂರು ದಸರಾ ವೇಳೆ ಸುಮಾರು 12 ನಿಮಿಷಗಳಷ್ಟು ಮಾತ್ರ ಡ್ರೋನ್ ಶೋ ನಡೆದಿತ್ತು. ಹಂಪಿಯಲ್ಲಿ ಗರಿಷ್ಠ 15 ನಿಮಿಷಗಳ ಕಾಲ ಈ ಪ್ರದರ್ಶನ ನಡೆಯುವ ನಿರೀಕ್ಷೆ ಇದೆ. ಹಂಪಿಯ ಪ್ರಮುಖ ಸ್ಮಾರಕಗಳು ಕೃಷ್ಣದೇವರಾಯ ಸಿಎಂ ಸಿದ್ದರಾಮಯ್ಯ ಪುನೀತ್ ರಾಜ್‌ಕುಮಾರ್ ಅವರ ಹೆಗಲಿಗೆ ಪಾರಿವಾಳಗಳು ಬಂದು ಕುಳಿತುಕೊಳ್ಳುವಂತಹ ದೃಶ್ಯಗಳು ಹಿನ್ನೆಲೆ ಸಂಗೀತದೊಂದಿಗೆ ಆಗಸದಲ್ಲಿ ಕಾಣಿಸಲಿದೆ. ಸುಮಾರು 300ರಿಂದ 500ರಷ್ಟು ಡ್ರೋನ್‌ಗಳ ಬಳಕೆ ಆಗಲಿದೆ. ಪ್ರಧಾನ ವೇದಿಕೆಯ ಮುಂಭಾಗದ ಪ್ರೇಕ್ಷಕರು ಕುಳಿತುಕೊಳ್ಳುವ ಸ್ಥಳದ ಪಕ್ಕದ ಹೊಲವೊಂದನ್ನು ಡ್ರೋನ್‌ಗಳ ಅಳವಡಿಕೆಗೆ ಮೀಸಲಿಟ್ಟಿದ್ದು ಅಲ್ಲಿಂದಲೇ ಡ್ರೋನ್‌ಗಳು ಲಯಬದ್ಧವಾಗಿ ಹಾರಾಟ ನಡೆಸಿ ಅವುಗಳಿಂದ ಹೊಮ್ಮುವ ಬೆಳಕಿನ ಕಿರಣಗಳಿಂದ ಆಗಸದಲ್ಲಿ ದೃಶ್ಯಕಾವ್ಯ ಮೂಡಿಬರಲಿದೆ. ಪ್ರಧಾನ ವೇದಿಕೆಯ ಮೇಲ್ಭಾಗದಲ್ಲೇ ಈ ಸೊಬಗಿನ ದರ್ಶನವಾಗಲಿದ್ದು ಮೂರೂ ದಿನ ಸಂಜೆ 7ರ ವೇಳೆಗೆ ಈ ಪ್ರದರ್ಶನ ಆರಂಭವಾಗಲಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಗಾಳಿಪಟ ಉತ್ಸವ
ಈ ಬಾರಿ ಹಂಪಿ ಉತ್ಸವಕ್ಕೆ ಸೇರ್ಪಡೆಯಾಗಿರುವ ಗಾಳಿಪಟ್ಟ ಉತ್ಸವ ಹಂಪಿ ಬದಲಿಗೆ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಂಪಿ ಉತ್ಸವದಲ್ಲಿ ಹೊಸಪೇಟೆಯನ್ನು ತೊಡಗಿಸಿಕೊಳ್ಳುವ ಪರಿಪಾಠ ಮೊದಲ ದಿನದ ವಸಂತ ವೈಭವಕ್ಕೆ ಮಾತ್ರ ಸೀಮಿತವಾಗಿತ್ತು. ಅದನ್ನು ಸ್ವಲ್ಪ ವಿಸ್ತರಿಸುವ ಸಲುವಾಗಿ ಗಾಳಿಪಟ ಉತ್ಸವವನ್ನೂ ಇಲ್ಲಿ ಆಯೋಜಿಸಲಾಗುತ್ತಿದೆ. ಗಾಳಿಪಟ ಹಾರಿಸುವುದರಲ್ಲಿ ಪರಿಣಿತರಾದ ಒಂದು ತಂಡವೇ ಗುಜರಾತ್ ಮಹಾರಾಷ್ಟ್ರ ಕಡೆಯಿಂದ ಬರಲಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.