ADVERTISEMENT

ಹೊಸಪೇಟೆ: ಹನುಮ ಮಾಲಾಧಾರಿಗಳಿಂದ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 14:27 IST
Last Updated 12 ಡಿಸೆಂಬರ್ 2024, 14:27 IST
<div class="paragraphs"><p>ಹನುಮ ಮಾಲಾಧಾರಿಗಳಿಂದ ಪಾದಯಾತ್ರೆ</p></div>

ಹನುಮ ಮಾಲಾಧಾರಿಗಳಿಂದ ಪಾದಯಾತ್ರೆ

   

ಹೊಸಪೇಟೆ (ವಿಜಯನಗರ): ಹನುಮದ್ ವ್ರತ ಪ್ರಯುಕ್ತ ಹನುಮ ಮಾಲೆ ಧರಿಸಿದ ಸಾವಿರಾರು ಭಕ್ತರು ಗುರುವಾರ ಬೆಳಿಗ್ಗೆಯಿಂದಲೇ ಅಂಜನಾದ್ರಿ ಬೆಟ್ಟದತ್ತ ಪಾದಯಾತ್ರೆ ಆರಂಭಿಸಿದರು.

ಹೊಸಪೇಟೆ ಮಾತ್ರವಲ್ಲ, ಜಿಲ್ಲೆಯ ನಾನಾ ಭಾಗಗಳಿಂದ, ಹೊರ ರಾಜ್ಯಗಳಿಂದಲೂ ಬಂದ ಭಕ್ತರು ಹಂಪಿಯ ವಿರೂಪಾಕ್ಷ, ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ ಸಹಿತ ಹಲವು ದೇವಸ್ಥಾನಗಳನ್ನು ಪಾದಯಾತ್ರೆ ಮೂಲಕ ಸಂದರ್ಶಿಸಿದರು. ಕೆಲವರು ಗುರುವಾರ ಸಂಜೆಯ ವೇಳೆಗೆ ಅಂಜನಾದ್ರಿ ಬೆಟ್ಟ ಏರಿ, ಆಂಜನೇಯನ ದರ್ಶನ ಪಡೆದು ಮಾಲೆ ತ್ಯಜಿಸಿದರು. ಕೆಲವರು ಬೆಟ್ಟದ ಬುಡದಲ್ಲಿ ರಾತ್ರಿ ಕಳೆದು ಶುಕ್ರವಾರ ಉಷಾಕಾಲದಲ್ಲೇ ಬೆಟ್ಟ ಏರಲು ಸಿದ್ಧತೆ ಮಾಡಿಕೊಂಡರು. ಇನ್ನೂ ಅನೇಕರು ಹಂಪಿ ಸುತ್ತಮುತ್ತಲಲ್ಲೇ ರಾತ್ರಿ ತಂಗಿದ್ದು, ಶುಕ್ರವಾರ ನಸುಕಿನಲ್ಲೇ ಅಂಜನಾದ್ರಿಗೆ ತೆರಳಿ ಹನುಮದ್ ವ್ರತದಲ್ಲಿ ಪಾಲ್ಗೊಂಡು ಹನುಮಾನ್‌ ಮಾಲೆ ವಿಸರ್ಜೆನೆ ಮಾಡಿ ಬರಲಿದ್ದಾರೆ.

ADVERTISEMENT

ಉತ್ಸಾಹ: ಗುರುವಾರ ನಸುಕಿನ 5 ಗಂಟೆಯಿಂದಲೇ ನೂರಾರು ಜನರು ನಗರದಿಂದ ಹಂಪಿಯತ್ತ ಕಾಲ್ನಡಿಗೆ ಆರಂಭಿಸಿದ್ದರು. ಮೋಡ ಮುಸುಕಿದ ವಾತಾವರಣದಲ್ಲಿ ಮಧ್ಯಾಹ್ನವಾಗುತ್ತಿದ್ದಂತೆಯೇ ಕಾಲ್ನಡಿಗೆ ಮಾಡುವವರ ಸಂಖ್ಯೆ ಹೆಚ್ಚಿತು.

ತಮ್ಮ ಜತೆಗೆ ಒಯ್ದಿರುವ ಅಕ್ಕಿ, ಬೆಲ್ಲ, ತುಪ್ಪ, ಅರಶಿನ, ಕುಂಕುಮ ಸಹಿತ ವಿವಿಧ ಪೂಜಾ ಸಾಮಗ್ರಿಗಳನ್ನು ಶುಕ್ರವಾರ ನಸುಕಿನಲ್ಲಿ ಅಂಜನಾದ್ರಿ ಬೆಟ್ಟದ ಮೇಲೆ ನಡೆಯುವ ಪವಮಾನ ಹೋಮ ಕುಂಡದ ಬಳಿ ದೇವರಿಗೆ ಸಮರ್ಪಿಸಲಿದ್ದು, ಬಳಿಕ ಮಾಲೆ ವಿಸರ್ಜಿಸಿ ಮರಳಲಿದ್ದಾರೆ. ಮಾಲೆ ಧರಿಸಿದವರ ಪೈಕಿ ಶೇ 90ರಷ್ಟು ಮಂದಿ ಅಂಜನಾದ್ರಿ ಬೆಟ್ಟ ಏರುವುದು ನಿಶ್ಚಿತವಾಗಿರುತ್ತದೆ.

ಬೆಟ್ಟ ಏರಲು ಸಾಧ್ಯವಾಗದವರು ಯಂತ್ರೋದ್ಧಾರಕ ಆಂಜನೇಯ ಸಹಿತ ಹೊಸಪೇಟೆ ಸುತ್ತಮುತ್ತ, ಆನೆಗುಂದಿ ಸುತ್ತಮುತ್ತಲಿನ ಹನುಮಾನ್‌ ದೇವಸ್ಥಾನಗಳಿಗೆ ತರಳಿ ಮಾಲೆ ವಿಸರ್ಜಿಸುವ ಪರಿಪಾಠವೂ ಇದೆ.

ಮಾಲೆ ಧರಿಸಿ 31 ದಿನ, 21, 11, 9, 5, 3, 1 ಹೀಗೆ ಬೆಸ ಸಂಖ್ಯೆಯ ದಿನಗಳ ಕಾಲ ವ್ರತ ಕೈಗೊಳ್ಳುವ ಸಂಪ್ರದಾಯ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.