
ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿರುವ 1962ರ ನಿಕ್ಷೇಪ ನಿಧಿ ಅಧಿನಿಯಮದಲ್ಲಿ ನಿಧಿಗಳ ಬಳಕೆ, ಹಂಚಿಕೆ ಕುರಿತಂತೆ ಸ್ಪಷ್ಟ ಮಾರ್ಗಸೂಚಿಗಳಿವೆ. ಯಾವುದೇ ಮೌಲ್ಯದ ನಿಧಿ ಎಲ್ಲಿಯಾದರೂ ಸಿಕ್ಕಲ್ಲಿ ತಕ್ಷಣ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಬೇಕು, ತಪ್ಪಿದಲ್ಲಿ ಜೈಲು ನಿಶ್ಚಿತ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಆರ್. ಶೇಜೇಶ್ವರ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ನಡೆದ ‘ಹಂಪಿ ಸ್ಮಾರಕಗಳ ಸಂರಕ್ಷಣಾ ಕಾನೂನುಗಳ ಅರಿವು’ ಎಂಬ ಅಮಾಸಿಕ ಮಾತು ಮಾಲಿಕೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಧಿ ಕಂಡುಹಿಡಿದ ವ್ಯಕ್ತಿ ತಹಶೀಲ್ದಾರರಿಗೆ ಮಾಹಿತಿ ನೀಡಿದರೆ ಅದರ ಮೌಲ್ಯದ ಆಧಾರದ ಮೇಲೆ ಬಹುಮಾನ ನೀಡಲಾಗುತ್ತದೆ ಎಂದ ಅವರು, ಹಂಪಿಯಂತಹ ವಿಶ್ವಪರಂಪರೆ ತಾಣಗಳ ಸಂರಕ್ಷಣೆಗೆ ಕಾನೂನು ಅರಿವು ಅತ್ಯಗತ್ಯವಾಗಿದ್ದು, ಸಾರ್ವಜನಿಕ ಸಹಭಾಗಿತ್ವ ಇಲ್ಲದೆ ಪರಂಪರೆ ರಕ್ಷಣೆ ಸಾಧ್ಯವಿಲ್ಲ ಎಂದರು.
‘ಸ್ಮಾರಕಗಳನ್ನು ರಕ್ಷಿಸುವ ಜವಾಬ್ದಾರಿ ಕೇವಲ ಸರ್ಕಾರದ ಮೇಲೆ ಮಾತ್ರವಲ್ಲ; ಜನಸಾಮಾನ್ಯರ ಮೇಲೆಯೂ ಇದೆ. ನಮ್ಮ ಸುತ್ತಮುತ್ತಲಿನ ಪಾರಂಪರಿಕ ಕಟ್ಟಡಗಳು, ವಸ್ತುಗಳು ಹಾಗೂ ಸಾಂಸ್ಕೃತಿಕ ಸಂಪತ್ತಿನ ಬಗ್ಗೆ ಜಾಗರೂಕರಾಗಿ ನಡೆದುಕೊಳ್ಳಬೇಕು ಹಾಗೂ ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಮನೋಭಾವ ಬೆಳೆಸಬೇಕು’ ಎಂದರು.
ಸಿಎಸ್‌ಆರ್ ನಿಧಿಯೂ ಬೇಕು: ‘ಅಂತರರಾಷ್ಟ್ರೀಯ ಮಟ್ಟದಿಂದ ಸ್ಥಳೀಯ ಆಡಳಿತದವರೆಗೆ ವಿವಿಧ ಸರ್ಕಾರಗಳು ಒಟ್ಟಾಗಿ ಕಾಯ್ದೆಗಳನ್ನು ರೂಪಿಸಿ ಸ್ಮಾರಕ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇದರ ಜೊತೆಗೆ ಖಾಸಗಿ ಸಂಸ್ಥೆಗಳು ತಮ್ಮ ಸಿ.ಎಸ್.ಆರ್ ನಿಧಿಗಳ ಮೂಲಕ ಸ್ಮಾರಕಗಳನ್ನು ದತ್ತು ಪಡೆದು ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಕೈಜೋಡಿಸಬೇಕಾಗಿದೆ’ ಎಂದು ಶೇಜೇಶ್ವರ ಅಭಿಪ್ರಾಯಪಟ್ಟರು.
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ವಾಸುದೇವ ಬಡಿಗೇರ, ‘ಹಂಪಿಯ ನೈಜ ಇತಿಹಾಸವು ಕಾವ್ಯ ಮತ್ತು ಪುರಾಣಗಳಲ್ಲಿ ಕಣ್ಮರೆಯಾಗಿದೆ’ ಎಂದರು.
ಪ್ರಾಧ್ಯಾಪಕ ಪ್ರೊ. ಎಸ್.ವೈ.ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಮುಖ್ಯಸ್ಥ ಪ್ರೊ. ರಮೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.