ADVERTISEMENT

ಕೊಟ್ಟೂರು: ಕೇಸರಿ ಶಾಲು ಹಾಕಿಕೊಂಡು ಬಂದವರಿಗೆ ಕಾಲೇಜು ಪ್ರವೇಶಕ್ಕೆ ನಕಾರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 12:18 IST
Last Updated 7 ಫೆಬ್ರುವರಿ 2022, 12:18 IST
ಕೊಟ್ಟೂರು: ಕೇಸರಿ ಶಾಲು ಹಾಕಿಕೊಂಡು ಬಂದವರಿಗೆ ಕಾಲೇಜು ಪ್ರವೇಶಕ್ಕೆ ನಕಾರ
ಕೊಟ್ಟೂರು: ಕೇಸರಿ ಶಾಲು ಹಾಕಿಕೊಂಡು ಬಂದವರಿಗೆ ಕಾಲೇಜು ಪ್ರವೇಶಕ್ಕೆ ನಕಾರ   

ಕೊಟ್ಟೂರು (ವಿಜಯನಗರ ಜಿಲ್ಲೆ): ರಾಜ್ಯದ ವಿವಿಧ ಕಾಲೇಜುಗಳಲ್ಲಿ ಸೃಷ್ಟಿಯಾಗಿರುವ ಹಿಜಾಬ್, ಕೇಸರಿ ಶಾಲು ವಿವಾದ ಸೋಮವಾರ ವಿಜಯನಗರ ಜಿಲ್ಲೆಗೂ ಕಾಲಿಟ್ಟಿದೆ.

ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿಗೆ ಕೆಲ ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲು ಹಾಕಿಕೊಂಡು ಬಂದದ್ದರಿಂದ ತರಗತಿಗಳಿಗೆ ಹಾಜರಾಗಲು ಪ್ರಾಚಾರ್ಯ ಡಿ.ರವೀಂದ್ರಗೌಡ ನಿರಾಕರಿಸಿದರು.

‘ತರಗತಿಯಲ್ಲಿ ಹಿಜಾಬ್‌ ಧರಿಸಿ ಬಂದವರನ್ನು ಹೊರಗೆ ಕಳುಹಿಸಬೇಕು. ಇಲ್ಲವಾದಲ್ಲಿ ನಾವು ಕೇಸರಿ ಶಾಲು ಹಾಕಿಕೊಂಡು ಹೋಗಲು ಅವಕಾಶ ಕಲ್ಪಿಸಬೇಕು’ ಎಂದು ಪಟ್ಟು ಹಿಡಿದು ಪ್ರಾಚಾರ್ಯರೊಂದಿಗೆ ವಾಗ್ವಾದಕ್ಕಿಳಿದರು.

ADVERTISEMENT

‘ಸಮವಸ್ತ್ರ ಧರಿಸಿಕೊಂಡು ಬಂದವರಿಗಷ್ಟೇ ಮಂಗಳವಾರದಿಂದ ಕಾಲೇಜಿನೊಳಗೆ ಬರಲು ಅನುಮತಿ ನೀಡಲಾಗುವುದು. ಈ ಕುರಿತು ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸಲಾಗುವುದು’ ಎಂದು ಪ್ರಾಚಾರ್ಯರು ತಿಳಿಸಿದ ನಂತರ ಸುಮ್ಮನಾದರು.

‘ಕಾಲೇಜಿನಲ್ಲಿ ಓದುತ್ತಿರುವವರೆಲ್ಲರೂ ಒಂದೇ. ಇಲ್ಲಿ ಉಡುಪಿಗಿಂತ ಓದು ಮುಖ್ಯ. ಪದವಿ ಪೂರ್ವ ಕಾಲೇಜಿಗೆ ರಜೆ ಇದೆ. ಬಿಸ್ಸಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿವೆ. ಪದವಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ನಡೆಯುತ್ತಿವೆ. ಕಡ್ಡಾಯವಾಗಿ ಎಲ್ಲ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಬರಬೇಕು’ ಎಂದು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.