ADVERTISEMENT

ಕಾಂಗ್ರೆಸ್‌ ವರಿಷ್ಠರು ಮತ್ತೆ ತಪ್ಪು ಮಾಡಲ್ಲ: ಬಿ.ವಿ. ಶಿವಯೋಗಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 9:43 IST
Last Updated 23 ಮಾರ್ಚ್ 2022, 9:43 IST
   

ಹೊಸಪೇಟೆ (ವಿಜಯನಗರ): ‘ವಿಜಯನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷದ ವರಿಷ್ಠರು, ಹೈಕಮಾಂಡ್‌ ಎರಡು ಸಲ ತಪ್ಪು ನಿರ್ಧಾರ ತೆಗೆದುಕೊಂಡು ಅದಕ್ಕೆ ಬೆಲೆ ತೆತ್ತಿದ್ದಾರೆ. ಪುನಃ ಅಂತಹುದೇ ತಪ್ಪು ಮಾಡೊಲ್ಲ’ ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ಅಭಿಪ್ರಾಯ ಪಟ್ಟರು.

ವಿಜಯನಗರ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ಯಾರು ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. ಯಾರು ಮಾಡುತ್ತಿಲ್ಲ ಎನ್ನುವುದರ ಬಗ್ಗೆ ವರದಿ ಕೊಡುವ ಕೆಲಸ ನನ್ನದು. ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕ್ಷೇತ್ರದಲ್ಲಿ ಪಕ್ಷದಲ್ಲಿ ಗೊಂದಲ ಇದೆ. ವರಿಷ್ಠರೇ ಅದನ್ನು ಬಗೆಹರಿಸುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಭರವಸೆ ವ್ಯಕ್ತಪಡಿಸಿದರು.

ವಿಜಯನಗರ ಕ್ಷೇತ್ರದ ವಿಚಾರದಲ್ಲಿ ಎರಡು ಸಲ ಹೈಕಮಾಂಡ್‌ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಆ ತಪ್ಪು ಸರಿಪಡಿಸುವ ಕೆಲಸ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮಾಡುತ್ತಾರೆ. ಪಕ್ಷಾಂತರಿಗಳಿಗೆ ಮಣೆ ಹಾಕಿದರೆ ಪಕ್ಷಕ್ಕೆ ದುಡಿದವರು ಎಲ್ಲಿಗೆ ಹೋಗಬೇಕು? ಸ್ಥಳೀಯ ಎಲ್ಲ ವಿಚಾರಗಳನ್ನು ವರಿಷ್ಠರಿಗೆ ತಿಳಿಸಲಾಗಿದೆ. ಸಕಾಲಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್‌ ಮುಖಂಡ ಸಿರಾಜ್‌ ಶೇಖ್‌ ಬಗ್ಗೆ ಕೆಪಿಸಿಸಿಗೆ ಈಗಾಗಲೇ ದೂರು ಸಲ್ಲಿಸಲಾಗಿದ್ದು, ಅಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ADVERTISEMENT

ಮಾ. 24ರಂದು ಶಿವಕುಮಾರ ಭೇಟಿ

‘ಗುರುವಾರ ಬೆಳಿಗ್ಗೆ 11ಕ್ಕೆ ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಪಕ್ಷದ ಡಿಜಿಟಲ್‌ ಸದಸ್ಯತ್ವ ಪರಿಶೀಲನಾ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಕಾರ್ಯಾಧ್ಯಕ್ಷರಾದ ಈಶ್ವರ್‌ ಖಂಡ್ರೆ, ಸತೀಶ್‌ ಜಾರಕಿಹೊಳಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳುವರು’ ಎಂದು ಶಿವಯೋಗಿ ತಿಳಿಸಿದರು.

ಜಿಲ್ಲೆಯಲ್ಲಿ 1.22 ಲಕ್ಷ ಸದಸ್ಯತ್ವ ಆಗಿದೆ. 80 ಸಾವಿರ ಜನರ ಸದಸ್ಯತ್ವ ಪರಿಶೀಲನೆ ಹಂತದಲ್ಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 50 ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದೆ. ಪ್ರತಿ ಬೂತ್‌ ಮಟ್ಟದಲ್ಲಿ ‘ಬೂತ್‌ ಎನ್‌ರೋಲರ್‌’ ನೇಮಕ ಮಾಡಿದ್ದು, ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿನಾಯಕ ಶೆಟ್ಟರ್‌, ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ವೆಂಕಟರಾವ ಘೋರ್ಪಡೆ, ಗುಜ್ಜಲ್ ರಘು, ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ, ಎಂ.ಸಿ. ವೀರಸ್ವಾಮಿ, ಪಾಂಡು, ಮೊಹಮ್ಮದ್‌ ಸಲೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.