ADVERTISEMENT

ಹೊಸಪೇಟೆ – ಧ್ವಜಸ್ತಂಭದ ಹಣ ಯಾರಿಗೆ: ಕಾಮಗಾರಿಯ ಮಾಹಿತಿಗೆ ಸಿಪಿಎಂ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 9:21 IST
Last Updated 19 ಜುಲೈ 2022, 9:21 IST
ಹೊಸಪೇಟೆಯಲ್ಲಿ ಸಿಪಿಎಂ ನಾಯಕರ ಸುದ್ದಿಗೋಷ್ಠಿ
ಹೊಸಪೇಟೆಯಲ್ಲಿ ಸಿಪಿಎಂ ನಾಯಕರ ಸುದ್ದಿಗೋಷ್ಠಿ   

ಹೊಸಪೇಟೆ (ವಿಜಯನಗರ): ‘ನಗರದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಧ್ವಜಸ್ತಂಭದ ಕಾಮಗಾರಿ, ಟೆಂಡರ್ ಪ್ರಕ್ರಿಯೆ ಕುರಿತು ಯಾವುದೇ ಮಾಹಿತಿ ಬಹಿರಂಗ ಪಡಿಸುತ್ತಿಲ್ಲ. ಹಾಗಾದರೆ ಕಾಮಗಾರಿಯ ವೆಚ್ಚ ₹6 ಕೋಟಿ ಹಣ ಯಾರಿಗೆ ಹೋಗುತ್ತಿದೆ’ ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಆರ್‌.ಎಸ್. ಬಸವರಾಜ ಪ್ರಶ್ನಿಸಿದರು.

ನಗರದ ಕ್ರೀಡಾಂಗಣದಲ್ಲಿ ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ಇಲ್ಲದೇ ಧ್ವಜಸ್ತಂಭದ ಕಾಮಗಾರಿ ಕೈಗೆತ್ತಿಕೊಳ್ಳುವ ಅಗತ್ಯವಾದರೂ ಏನಿತ್ತು? ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮಾಹಿತಿ ಇಲ್ಲ ಎಂದು ಗೊತ್ತಾಗಿದೆ. ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಯನ್ನು ಏಕೆ ಮುಚ್ಚುಮರೆಯಿಂದ ಕೈಗೊಳ್ಳಲಾಗುತ್ತಿದೆ. ಇದರ ಬಗ್ಗೆ ಸಂಬಂಧಿಸಿದವರು ಉತ್ತರಿಸಬೇಕು ಎಂದು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಿಪಿಎಂ ಕಾರ್ಯದರ್ಶಿ ಯು.ಬಸವರಾಜ ಮಾತನಾಡಿ, ಸಾಹಿತಿ ಕುಂ.ವೀರಭದ್ರಪ್ಪ ಸೇರಿದಂತೆ ರಾಜ್ಯದ ಪ್ರಗತಿಪರ ಚಿಂತಕರಿಗೆ ಮೇಲಿಂದ ಮೇಲೆ ಬೆದರಿಕೆ ಪತ್ರಗಳು ಬರುತ್ತಿವೆ. ರಾಜಾರೋಷವಾಗಿ ಬೆದರಿಕೆ ಹಾಕುತ್ತಿದ್ದಾರೆ. ಹೀಗಿದ್ದರೂ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರ ಆದಾಯ ಸಂಗ್ರಹದ ಹೆಸರಿನಲ್ಲಿ ಎಲ್ಲ ಅಗತ್ಯ ವಸ್ತುಗಳು, ಆಹಾರ ಉತ್ಪನ್ನಗಳ ಮೇಲೆ ಜಿ.ಎಸ್‌.ಟಿ ಹಾಕುತ್ತಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಕೋಟ್ಯಂತರ ರೂಪಾಯಿ ಲಾಭ ಗಳಿಸುವ ಕಾರ್ಪೋರೇಟ್ ಕಂಪನಿಗಳಿಂದ ಬಾಕಿ ಬರಬೇಕಿರುವ ತೆರಿಗೆ ವಸೂಲಿ ಮೊದಲು ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯ ಸಮಿತಿ ಸದಸ್ಯೆ ಬಿ‌.ಮಾಳಮ್ಮ, ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ್ ರೆಡ್ಡಿ, ಎಂ.ಜಂಬಯ್ಯ ನಾಯಕ, ವಿ.ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.