ಹೊಸಪೇಟೆ: ಮತ್ತೆ ಮಳೆ ಸುರಿಯುವ ವಿದ್ಯಮಾನದ ನಡುವೆಯೇ ದೀಪಾವಳಿ ಹಬ್ಬದ ಸಡಗರ ಆರಂಭವಾಗಿದ್ದು, ಅಮಾವಾಸ್ಯೆ ಮತ್ತು ಬಲಿಪಾಡ್ಯಮಿ ಆಚರಣೆಗಳಿಗಾಗಿ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಸೋಮವಾರ ನಡೆಯಿತು. ವಸ್ತುಗಳ ದರ ನಿರೀಕ್ಷೆಗಿಂತ ಕೊಂಚ ಕಡಿಮೆಯೇ ಇದ್ದ ಕಾರಣ ಜನ ನಿರಾಳರಾದರು.
ಗಾಂಧಿ ಚೌಕ, ಮೇನ್ ಬಜಾರ್, ಮದಕರಿ ವೃತ್ತ, ನಗರಸಭೆ ಕಚೇರಿ ಮುಂಭಾಗ, ವಾಲ್ಮೀಕಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತಗಳಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನ ಪೂಜೆಗೆ, ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ತೊಡಗಿದರು. ಇದರಿಂದ ಕೆಲವೊಮ್ಮೆ ಸಂಚಾರ ದಟ್ಟಣೆಯೂ ಕಾಣಿಸಿತು.
‘ದೀಪಾವಳಿಗೆ ಹಣ್ಣು ದರ ಏರಬಹುದು ಎಂಬ ನಿರೀಕ್ಷೆ ಇತ್ತು, ಆದರೆ ದರ ಏರಿಕೆ ಆಗಿಲ್ಲ, ಕೆಲವೊಂದಕ್ಕೆ ಸ್ವಲ್ಪ ದರ ಕಡಿಮೆಯೇ ಆಗಿದೆ’ ಎಂದು ಮೇನ್ ಬಜಾರ್‌ನ ಹಣ್ಣಿನ ವ್ಯಾಪಾರಿ ಮಲ್ಲಪ್ಪ ಹೇಳಿದರು.
ಮಣ್ಣಿನ ಹಣತೆಗಳಲ್ಲಿ ಬಹಳಷ್ಟು ವೈವಿಧ್ಯತೆ ಕಾಣಿಸಿದ್ದು, ಸಾಂಪ್ರದಾಯಿಕ ಹಣತೆಗಳಿಗೆ ಡಜನ್‌ಗೆ ₹30ರಂತೆ ದರ ನಿಗದಿಯಾಗಿತ್ತು. ಬಾಳೆಗಿಡ ಚಿಕ್ಕದಕ್ಕೆ ಜೋಡಿಗೆ ₹50, ದೊಡ್ಡದಕ್ಕೆ ₹150ರಿಂದ ₹200ರಂತೆ ಮಾರಾಟವಾಗುತ್ತಿತ್ತು.
ಪಟಾಕಿ ಮಾರಾಟ: ಕಾರಿಗನೂರು ಸಮೀಪ ಹೆದ್ದಾರಿ ಬದಿಯಲ್ಲಿ ಕಿಲೋ ಲೆಕ್ಕದಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದು, ಭಾರಿ ಸಂಖ್ಯೆಯಲ್ಲಿ ಜನ ಅಲ್ಲಿಗೇ ಹೋಗಿ ಖರೀದಿಸುತ್ತಿದ್ದಾರೆ. ಕಿಲೋಗೆ ₹600ರಂತೆ ಕನಿಷ್ಠ 4ರಿಂದ 5 ಕೆ.ಜಿ ಪಟಾಕಿ ಖರೀದಿಸಲು ಅಲ್ಲಿ ಹೇಳುತ್ತಿದ್ದು, ಜನ ಖುಷಿಯಿಂದಲೇ ಖರೀದಿಸುತ್ತಿದ್ದಾರೆ. ಮತ್ತೊಂದೆಡೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಹ 20 ಪಟಾಕಿ ಮಳಿಗೆಗಳನ್ನು ಹಾಕಲಾಗಿದ್ದು, ಅಲ್ಲಿಗೂ ಜನರು ಹೋಗಿ ಪಟಾಕಿ ಖರೀದಿಸುತ್ತಿದ್ದಾರೆ.
‘20 ಬಗೆಯ ಪಟಾಕಿಗಳಿರುವ ಫ್ಯಾಮಿಲಿ ಪ್ಯಾಕ್ ದರ ₹300ರಷ್ಟಿದ್ದರೆ, ಇನ್ನಷ್ಟು ಪಟಾಕಿಗಳನ್ನು ಒಳಗೊಂಡ ಫ್ಯಾಮಿಲಿ ಪ್ಯಾಕ್ ಬೇರೆ ಬೇರೆ ದರದಲ್ಲಿದೆ. ₹2,000 ದ ಫ್ಯಾಮಿಲಿ ಪ್ಯಾಕ್ ಸಹ ಉತ್ತಮವಾಗಿ ಮಾರಾಟವಾಗುತ್ತಿದೆ. ನಾವು ಮಾರುವ ಎಲ್ಲ ಪಟಾಕಿಗಳೂ ಹಸಿರು ಪಟಾಕಿಗಳೇ ಆಗಿವೆ’ ಎಂದು ಜಿಲ್ಲಾ ಕ್ರೀಡಾಂಗಣದಲ್ಲಿ ಮಳಿಗೆ ಇಟ್ಟಿರುವ ರಾಮು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.