
ವಂಚನೆ: ದೂರು
ಹೊಸಪೇಟೆ (ವಿಜಯನಗರ): ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿ ಅತಿ ಶೀಘ್ರದಲ್ಲಿ ಅದರಿಂದ ಅಧಿಕ ಲಾಭ ಗಳಿಸುವ ಆಮಿಷ ಒಡ್ಡಿದ ದುಷ್ಕರ್ಮಿಗಳು, ವ್ಯಕ್ತಿಯೊಬ್ಬರಿಗೆ ₹44.56 ಲಕ್ಷ ವಂಚಿಸಿರುವ ಪ್ರಕರಣ ನಗರದ ಟಿ.ಬಿ.ಡ್ಯಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎ.ಆರೋಗ್ಯದಾಸ್ ಎಂಬುವವರಿಗೆ 2025ರ ನವೆಂಬರ್ 11ರಿಂದ 2026ರ ಜನವರಿ 1ರ ನಡುವೆ ಈ ವಂಚನೆ ನಡೆದಿರುವ ಬಗ್ಗೆ ದೂರು ನೀಡಲಾಗಿದೆ. ವಂಚಕರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಎಸ್‌ಪಿ ಎಸ್.ಜಾಹ್ನವಿ ತಿಳಿಸಿದ್ದಾರೆ.
ಆರೋಗ್ಯದಾಸ್ ಅವರಿಗೆ ಎರಡು ವಾಟ್ಸ್ಆ್ಯಪ್ ನಂಬರ್‌ಗಳಿಂದ ಕರೆ ಮಾಡಿದ್ದ ಆರೋಪಿಗಳು ಇಂಕ್ರೆಡ್ ಹೋಲ್ಡಿಂಗ್ಸ್ ಕಂಪನಿಯಲ್ಲಿ ಸದಸ್ಯತ್ವ ಪಡೆದು ಹಣ ಹೂಡಿಕೆ ಮಾಡಲು ಪುಸಲಾಯಿಸಿದ್ದರು. ಇದಕ್ಕೆ ಸಮ್ಮತಿಸಿದ ಆರೋಗ್ಯದಾಸ್ ವಂಚಕರು ಹೇಳಿದಂತೆ 12 ವಿವಿಧ ಖಾತೆಗಳಿಗೆ ಹಣ ಹಾಕಿದ್ದರು. ನಿಮ್ಮ ಖಾತೆಯಲ್ಲೀಗ ₹1.49 ಕೋಟಿ ಹಣ ಜಮೆ ಆಗಿದ್ದು, ₹15.46 ಲಕ್ಷವನ್ನು ಕಮಿಷನ್ ಮತ್ತು ತೆರಿಗೆ ರೂಪದಲ್ಲಿ ನೀಡಿದರೆ ನಾಲ್ಕೇ ದಿನದಲ್ಲಿ ಅಷ್ಟೂ ದುಡ್ಡು ಬರುತ್ತದೆ ಎಂದು ಹೇಳಿದ್ದರು. ಅದರಂತೆ ಈ ಮೊತ್ತವನ್ನು ಸಹ ಪಾವತಿಸಲಾಗಿತ್ತು. ಮತ್ತೂ ₹3 ಲಕ್ಷ ಕಳುಹಿಸಲು ತಿಳಿಸಿದಾಗ ಸಂಶಯಗೊಂಡ ಆರೋಗ್ಯದಾಸ್ ಆಡಿಟರ್ ಕಚೇರಿಗೆ ಹೋಗಿ ಪರಿಶೀಲಿಸಿದ್ದರು. ಆಗ ಇದೆಲ್ಲವೂ ನಕಲಿ ಎಂದು ಗೊತ್ತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
‘ನಾನು ಈ ವಂಚಕರಿಗೆ ಆರ್‌ಟಿಜಿಎಸ್ ಮತ್ತು ಫೋನ್ ಪೇ ಮೂಲಕ ಒಟ್ಟು ₹44.56 ಲಕ್ಷ ಪಾವತಿಸಿದ್ದೇನೆ. ನನಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಆರೋಗ್ಯದಾಸ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.