ಹೊಸಪೇಟೆಯಲ್ಲಿ ಚಪ್ಪಲಿ ಅಂಗಡಿಯೊಂದರಲ್ಲಿ ಹಾಕಲಾದ ವಿವಾದಾತ್ಮಕ ವಾಕ್ಯ ವಿರುದ್ಧ ಸೋಮವಾರ ನಗರಸಭೆಗೆ ಮನವಿ ಸಲ್ಲಿಸಲಾಯಿತು
ಪ್ರಜಾವಾಣಿ ಚಿತ್ರ
ಹೊಸಪೇಟೆ (ವಿಜಯನಗರ): ನಗರದ ಕಾಲೇಜು ರಸ್ತೆಯ ಚಪ್ಪಲಿ ಮಳಿಗೆಯೊಂದರ ಗಾಜಿನ ಮೇಲೆ ‘ಮೇರಾ ಜೂತಾ ಹಿಂದೂಸ್ತಾನಿ’ ಎಂದು ಬರೆದಿರುವುದನ್ನು ವಿರೋಧಿಸಿ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಸೋಮವಾರ ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಿತು, ಹೀಗಾಗಿ ಮಳಿಗೆಯನ್ನು ತಕ್ಷಣ ತಾತ್ಕಾಲಿಕವಾಗಿ ಮುಚ್ಚಿಸಲಾಯಿತು.
ಸಮಿತಿಯ ಅಧ್ಯಕ್ಷ ಪಿ.ವೆಂಕಟೇಶ್, ಉಪಾಧ್ಯಕ್ಷ ಗುಜ್ಜಲ ಗಣೇಶ, ಪ್ರಧಾನ ಕಾರ್ಯದರ್ಶಿ ದಾದಾ ಖಲಂದರ ಇತರರು ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಆಯುಕ್ತ ಎ.ಶಿವಕುಮಾರ್ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿ, ತಮ್ಮ ಕಂಪನಿಗೆ ಲಾಭ ಮಾಡಿಕೊಳ್ಳುವ ಭರದಲ್ಲಿ ಭಾರತಾಂಬೆಗೆ ಮತ್ತು ಭಾರತೀಯರಿಗೆ ಅವಮಾನ ಮಾಡುವ ರೀತಿಯಲ್ಲಿ ಪದಬಳಕೆ ಮಾಡಿದ್ದು ಸರಿಯಲ್ಲ, ದೇಶದ ಎಲ್ಲೆಡೆ ಇರುವ ಮಳಿಗೆಗಳಲ್ಲೂ ಇಂತಹದೇ ವಾಕ್ಯ ಬಳಸಲಾಗಿದೆ ಎಂದು ಮಳಿಗೆಯವರು ಹೇಳುತ್ತಿದ್ದಾರೆ. ನಗರದ ಮಳಿಗೆಯನ್ನು ಮುಚ್ಚಿಸಬೇಕು ಎಂದು ಮನವಿ ಮಾಡಿದರು.
‘ಜನರ ಭಾವನೆಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಮಳಿಗೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಲು ಸೂಚಿಸಲಾಗಿದೆ, ವಿವಾದಾತ್ಮಕ ವಾಕ್ಯವನ್ನು ಅಳಿಸುವುದಾಗಿ ಮಳಿಗೆಯವರು ತಿಳಿಸಿದ್ದಾರೆ. ಸಮಿತಿ ಸಲ್ಲಿಸಿದ ಮನವಿಯನ್ನು ಪರಿಶೀಲಿಸಲು ಕೋರಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ’ ಎಂದು ಆಯುಕ್ತ ಎ.ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.