ADVERTISEMENT

ವಾರದಲ್ಲಿ 2 ಕಡೆ ಚೆಲ್ಲಿದ ರಕ್ತ; ಬೆಚ್ಚಿಬಿದ್ದ ಹೊಸಪೇಟೆ

ಗಂಡನಿಂದ ದೂರವಿದ್ದ, ಮೂವರು ಮಕ್ಕಳ ತಾಯಿಯ ಭೀಕರ ಕೊಲೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 3:12 IST
Last Updated 7 ಜನವರಿ 2026, 3:12 IST
ಹೊಸಪೇಟೆಯ ಚಾಪಲಗಡ್ಡ ಪ್ರದೇಶದಲ್ಲಿ ಮಂಗಳವಾರ ನಸುಕಿನಲ್ಲಿ ಮಹಿಳೆಯ ಕೊಲೆ ನಡೆದ ಸ್ಥಳವನ್ನು ಎಸ್‌ಪಿ ಎಸ್‌.ಜಾಹ್ನವಿ ಪರಿಶೀಲಿಸಿದರು   –ಪ್ರಜಾವಾಣಿ ಚಿತ್ರ
ಹೊಸಪೇಟೆಯ ಚಾಪಲಗಡ್ಡ ಪ್ರದೇಶದಲ್ಲಿ ಮಂಗಳವಾರ ನಸುಕಿನಲ್ಲಿ ಮಹಿಳೆಯ ಕೊಲೆ ನಡೆದ ಸ್ಥಳವನ್ನು ಎಸ್‌ಪಿ ಎಸ್‌.ಜಾಹ್ನವಿ ಪರಿಶೀಲಿಸಿದರು   –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಸಮೀಪದ ವೆಂಕಟಾಪುರ ಕ್ಯಾಂಪ್‌ ಗುಂಡ್ಲಕೇರಿ ಟಿ.ಬಿ.ಬೋರ್ಡ್‌ ಕ್ವಾರ್ಟರ್ಸ್‌ನಲ್ಲಿ ಡಿ.31ರಂದು ಮಹಿಳೆಯೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಮರೆಯಾಗುವ ಮೊದಲೇ ಮಂಗಳವಾರ ಚಾಪಲಗಡ್ಡದಲ್ಲಿ ಮೂರು ಮಕ್ಕಳ ತಾಯಿಯನ್ನು ಕತ್ತುಕೊಯ್ದು ಕೊಲೆ ಮಾಡಿದ ಘಟನೆಗೆ ನಗರ ಬೆಚ್ಚಿಬಿದ್ದಿದೆ.

ಗುಂಡ್ಲುಕೇರಿ ಘಟನೆಯಲ್ಲಿ ಆರೋಪಿಯನ್ನು ನಾಲ್ಕೇ ತಾಸಿನೊಳಗೆ ಬಂಧಿಸಿರುವ ಪೊಲೀಸರು, ಚಾಪಲಗಡ್ಡ ಪ್ರಕರಣದಲ್ಲೂ ಕೆಲವೇ ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಮಹಿಳೆಯರನ್ನು ಮಚ್ಚಿನಿಂದ ಕೊಚ್ಚಿ, ಚೂರಿಯಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ ಸುದ್ದಿ ಕೇಳಿ ಜನ ದಂಗಾಗಿದ್ದಾರೆ.

ರೈಲು ನಿಲ್ದಾಣ ಸಮೀಪದ ಚಾಪಲಗಡ್ಡದ ತನ್ನ ತವರು ಮನೆಯಲ್ಲಿ ಗಂಡನನ್ನ ಬಿಟ್ಟು ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದ ಉಮಾ (35) ಮಂಗಳವಾರ ನಸುಕಿನಲ್ಲಿ ಕೊಲೆ ಆಗಿರುವುದು ಕೇಳಿ ಜನ ಹೌಹಾರಿದ್ದರು. ಪೊಲೀಸರು ಆರೋಪಿ ಖಾಜಾ ಹುಸೇನ್‌ನನ್ನು ಶೀಘ್ರ ಬಂಧಿಸಿದ್ದರಿಂದ ಜನರ ಮನದಲ್ಲಿ ನೆಲೆಸಿದ್ದ ಆತಂಕ ಸ್ವಲ್ಪ ದೂರವಾಯಿತು ಹಾಗೂ ಹಲವಾರು ಸಂಶಯಗಳಿಗೂ ತೆರೆಬಿತ್ತು.

ADVERTISEMENT

ಅನೈತಿಕ ಸಂಬಂಧ: ಮೂರು ಮಕ್ಕಳ ತಾಯಿ ಉಮಾ ಅವರು ಕೂಲಿ ಕೆಲಸ ಮಾಡುತ್ತಿದ್ದರು. ರೈಲು ನಿಲ್ದಾಣದಲ್ಲಿ ಕೇಟರಿಂಗ್ ಕೆಲಸಕ್ಕೂ ಅಗತ್ಯ ಇದ್ದಾಗ ಹೋಗುತ್ತಿದ್ದರು. ಐದು ತಿಂಗಳ ಹಿಂದೆ ಭಟ್ರಳ್ಳಿ ಆಂಜನೇಯ ದೇವಸ್ಥಾನದ ಬಳಿ ಒಂದು ವಸ್ತುಪ್ರದರ್ಶನ ನಡೆದಿತ್ತು. ಅಲ್ಲಿಗೆ ಕೆಲಸಕ್ಕೆ ಉಮಾ ಹೋಗಿದ್ದಾಗ ಆಕೆಗೆ ಹಂಪಿ ರಸ್ತೆಯ ಖಾಜಾ ಹುಸೇನ್‌ನ ಪರಿಚಯವಾಗಿತ್ತು. ಅದು ಅನೈತಿಕ ಸಂಬಂಧವಾಗಿ ಬೆಳೆದು ಗೋಪ್ಯವಾಗಿ ಮದುವೆಯ ಹಂತಕ್ಕೂ ಹೋಗಿತ್ತು ಎಂದು ಪೊಲೀಸರಿಗೆ ಉಮಾ ತಾಯಿ ಗಾಯತ್ರಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಆಸ್ಪತ್ರೆಯಲ್ಲಿ ಆಕ್ರಂದನ: ಉಮಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ 100 ಹಾಸಿಗೆ ಆಸ್ಪತ್ರೆಯ ಶವಾಗಾರದಲ್ಲಿ ನಡೆಯಿತು. ಆದರೆ ಹೆಣ ಹಸ್ತಾಂತರ ವೇಳೆ ಸ್ವಲ್ಪ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಪರಿಹಾರ ವಿಚಾರದಲ್ಲಿ ಕುಟುಂಬದ ಸದಸ್ಯರು ಒತ್ತಾಯ ಮಾಡಿದರು. ಕೊನೆಗೆ ನಗರಸಭೆ ಆಧ್ಯಕ್ಷ ರೂಪೇಶ್ ಕುಮಾರ್ ಅವರು ಸರ್ಕಾರದಿಂದ ಸಿಗಬಹುದಾದ ಸೌಲಭ್ಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು ಹಾಗೂ ಮಕ್ಕಳ ಶಿಕ್ಷಣದ ಹೊಣೆಯನ್ನು ತಾವು ಹೊರುವುದಾಗಿ ಶಾಸಕರ ಕಡೆಯಿಂದ ಬಂದವರು ಹೇಳಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.