ADVERTISEMENT

ಬಿಡಿಸಿಸಿ ಗೋಲ್ಮಾಲ್‌ ತನಿಖೆಗೆ ಆಗ್ರಹ; ಸಚಿವ ಆನಂದ್‌ ಸಿಂಗ್‌ ರಾಜೀನಾಮೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 13:21 IST
Last Updated 6 ಫೆಬ್ರುವರಿ 2023, 13:21 IST
   

ಹೊಸಪೇಟೆ (ವಿಜಯನಗರ): ‘ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) 58 ಹುದ್ದೆಗಳ ನೇಮಕಾತಿಯಲ್ಲಿ ಗೋಲ್ಮಾಲ್‌ ನಡೆದಿದೆ’ ಎಂದು ಆರೋಪಿಸಿರುವ ಕಾಂಗ್ರೆಸ್‌ ಮುಖಂಡ ರಾಜಶೇಖರ್‌ ಹಿಟ್ನಾಳ್, ‘ವಿವಿಧ ಹುದ್ದೆಗಳಿಗೆ ನೇಮಕ ಆದವರಿಂದ ₹15 ಕೋಟಿ ಹಣ ಸಂಗ್ರಹಿಸಲಾಗಿದೆ. ಇದಕ್ಕೆ ಬ್ಯಾಂಕಿನ ಅಧ್ಯಕ್ಷರೇ ನೇರ ಹೊಣೆ. ಆನಂದ್‌ ಸಿಂಗ್‌ ಅವರು ಅಧ್ಯಕ್ಷ ಸ್ಥಾನ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಸಚಿವರು ರಾಜೀನಾಮೆ ಕೊಟ್ಟು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯಿಂದ ಪಾರದರ್ಶಕ ತನಿಖೆ ನಡೆಸಬೇಕು. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಸಹಕಾರ ಇಲಾಖೆಯ ಕಾರ್ಯದರ್ಶಿಗೆ ದೂರು ಸಲ್ಲಿಸಲಾಗುವುದು. ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಇದರ ವಿರುದ್ಧ ಹೋರಾಟ ನಡೆಸಲಾಗುವುದು. ಬ್ಯಾಂಕ್‌ ನೂರು ವರ್ಷ ಪೂರೈಸಿದೆ. ರಾಜ್ಯದಲ್ಲಿ ಲಾಭದಲ್ಲಿರುವ ಕೆಲವೇ ಕೆಲವು ಬ್ಯಾಂಕುಗಳಲ್ಲಿ ಬಿಡಿಸಿಸಿ ಕೂಡ ಒಂದು. ಹಣದ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದಕ್ಕೆ ಅಧ್ಯಕ್ಷರೇ ನೇರ ಹೊಣೆ. ಈ ಬ್ಯಾಂಕಿನಲ್ಲಿ ರೈತರೇ ಷೇರುದಾರರು. ಹಣ ಇಲ್ಲದ ಪ್ರತಿಭಾವಂತರು ವಂಚಿತರಾಗಿದ್ದಾರೆ. ಕೂಡಲೇ ನೇಮಕಾತಿ ರದ್ದುಪಡಿಸಬೇಕು ಎಂದು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಹುದ್ದೆಗಳ ನೇಮಕಾತಿಯಲ್ಲಿ ಹಣ ಹರಿದಾಡಿದೆ. ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಆಡಿಯೊ ಹರಿದಾಡುತ್ತಿದೆ. ನೇಮಕಾತಿಗೆ ಒಂದು ಸಮಿತಿ ಮಾಡಿದ್ದರು. ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ, ಸಿಇಒ ಹಾಗೂ ಇಬ್ಬರು ನಿರ್ದೇಶಕರು ಅದರಲ್ಲಿದ್ದರು. ಒಂದು ಹುದ್ದೆಗೆ ₹20 ಲಕ್ಷ ಕೊಟ್ಟಿದ್ದೇನೆ. ತಂಗಿ ಮದುವೆಗೆ ₹10 ಲಕ್ಷ ಇಟ್ಟುಕೊಂಡಿದ್ದೆ. ₹30 ಲಕ್ಷ ಕೇಳಿದ್ದರು. ಎಲ್ಲರೂ ₹30 ಲಕ್ಷ ಕೊಟ್ಟಿದ್ದಾರೆ. ಹೋಟೆಲ್‌ನೊಳಗೆ ಹೋಗಿ ಹಣ ಕೊಟ್ಟಿದ್ದೇವೆ. ಗೋಣಿ ಚೀಲದಲ್ಲಿ ಹಣ ಕಟ್ಟಿಕೊಂಡು ಹೋಗಿದ್ದಾರೆ. ಇದರ ಬಗ್ಗೆ ಮಾತಾಡಬೇಡಿ ಎಂದು ಹುಡುಗನೊಬ್ಬ ಕಳಕಳಿಯಿಂದ ಕಾಲ್‌ ಮಾಡಿ ನನಗೆ ಹೇಳಿದ್ದಾನೆ. ಇನ್ನೂ ನಾಲ್ಕೈದು ಜನ ಕರೆ ಮಾಡಿ ಗೋಳು ತೋಡಿಕೊಂಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

ADVERTISEMENT

ಸಾಲ ಸೂಲ ಮಾಡಿ ಓದಿಸಿದವರ ಗತಿ ಏನು? ಮೆರಿಟ್‌ ಇದ್ದವರ ಪಾಡೇನು? ₹15 ಕೋಟಿ ಹಣ ಸಂಗ್ರಹಿಸಿದ್ದು ಯಾರು? ಇದರ ಬಗ್ಗೆ ತನಿಖೆ ಏಕಿಲ್ಲ? ಆನಂದ್‌ ಸಿಂಗ್‌ ಇದರ ಬಗ್ಗೆ ತನಿಖೆ ಮಾಡಿಸದಿದ್ದರೆ ಅನುಮಾನ ಬರುತ್ತದೆ. ₹15 ಕೋಟಿ ಹಣ ಯಾರಿಗೆ ಜಮೆ ಆಗಿದೆ. ಹಗರಣದಲ್ಲಿ ಯಾರ ಕೈವಾಡ ಇದೆ. ಯಾವುದೇ ಹಗರಣದ ಬಗ್ಗೆ ಇವರು ಮಾತಾಡುವುದಿಲ್ಲ. ಹಾಗಿದ್ದರೆ ಹಗರಣಗಳಲ್ಲಿ ಯಾರ ಕೈವಾಡ ಇದೆ ಎಂದು ಕೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿನಾಯಕ ಶೆಟ್ಟರ್‌, ಪಕ್ಷದ ಸಾಮಾಜಿಕ ಮಾಧ್ಯಮಗಳ ವಿಭಾಗದ ಕೋ ಆರ್ಡಿನೇಟರ್‌ ನಿಂಬಗಲ್‌ ರಾಮಕೃಷ್ಣ, ಮುಖಂಡರಾದ ವೀರಭದ್ರ ನಾಯಕ, ಬಾಣದ ಗಣೇಶ್‌, ಮಲ್ಲಪ್ಪ, ಸೋಮಶೇಖರ್‌ ಬಣ್ಣದಮನೆ, ಖಾಜಾ ಇದ್ದರು.

‘ಸಚಿವರ ಅಳಿಯನಿಗೆ ಹಣ’
‘ಬಿಡಿಸಿಸಿ ನೇಮಕಾತಿಯಲ್ಲಿ ಸಚಿವರ ಅಳಿಯ ಸಂದೀಪ್‌ ಅವರಿಗೆ ಹಣ ಮುಟ್ಟಿಸಿದ್ದೇವೆ ಎಂದು ಹೇಳಿರುವುದು ಆಡಿಯೊದಲ್ಲಿದೆ. ಅವರು ಬಿಡಿಸಿಸಿಯಲ್ಲಿ ಯಾವ ಹುದ್ದೆಯಲ್ಲಿದ್ದಾರೆ. ಅವರಿಗೆ ಹಣ ಮುಟ್ಟಿಸಿದರೆ ಯಾರಿಗೆ ಹೋಗುತ್ತೆ. ಇದರ ಬಗ್ಗೆ ತನಿಖೆ ನಡೆಸಿ ಜನರಿಗೆ ತಿಳಿಸಬೇಕು. ಆಡಿಯೊ ಒರಿಜಿನಲ್‌ ಅಥವಾ ಡುಪ್ಲಿಕೇಟ್‌ ಎನ್ನುವುದು ತನಿಖೆಯಿಂದ ಗೊತ್ತಾಗಬೇಕು. ಆದರೆ, ಅವರು ತನಿಖೆ ನಡೆಸಬೇಕಲ್ಲ. ತನಿಖೆ ಮಾಡದಿದ್ದರೆ ಅನುಮಾನ ಬರುತ್ತದೆ’ ಎಂದು ರಾಜಶೇಖರ್‌ ಹಿಟ್ನಾಳ್‌ ತಿಳಿಸಿದರು.

‘ಕಾಲೇಜಿನಲ್ಲಿ ₹3 ಕೋಟಿ ಹಗರಣ’
‘ಹೊಸಪೇಟೆಯ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ₹3 ಕೋಟಿ ಹಗರಣ ನಡೆದಿದೆ. ಅದರ ಸಿಡಿಸಿ ಚೇರಮೆನ್ ಯಾರು. ಅದರ ಬಗ್ಗೆ ಅವರೇಕೆ ಮಾತಾಡುವುದಿಲ್ಲ. ಇದುವರೆಗೆ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ’ ಎಂದು ರಾಜಶೇಖರ್‌ ಹಿಟ್ನಾಳ್‌ ಆರೋಪಿಸಿದರು.
ಕಲುಷಿತ ನೀರು ಸೇವಿಸಿ ನಗರದಲ್ಲಿ ಮಹಿಳೆಯೊಬ್ಬರು ಮೃತಪಟ್ಟು, 200ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಅದರಲ್ಲಿ ₹100 ಕೋಟಿ ಅವ್ಯವಹಾರ ಆಗಿದೆ. ಕಾಮಗಾರಿ ಸರಿಯಿಲ್ಲ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿ ಯಾರ ವಿರುದ್ಧವಾದರೂ ಕ್ರಿಮಿನಲ್‌ ಕೇಸ್‌ ಹಾಕಿದ್ದಾರಾ? ಅಮಾನತು ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಹಂಪಿ ಉತ್ಸವ ಕಪ್ಪು ಚುಕ್ಕೆ; ಸಚಿವರ ವೈಫಲ್ಯ
‘ಕಪ್ಪು ಚುಕ್ಕೆ ಆಗುವ ರೀತಿಯಲ್ಲಿ ಈ ಸಲ ‘ಹಂಪಿ ಉತ್ಸವ’ ಸಂಘಟಿಸಲಾಗಿತ್ತು. ಇದರಲ್ಲಿ ಸಚಿವರ ವೈಫಲ್ಯ ಎದ್ದು ಕಾಣುತ್ತದೆ. ಉತ್ಸವಕ್ಕೆ ರಾಜ್ಯದ ಸಿ.ಎಂ. ಬಂದಾಗ 1500–2000 ಜನ ಇರಲಿಲ್ಲ. ಸಿ.ಎಂ. ಬಂದು ಕೂರಲು ಮುಜುಗರ ಆಗಿತ್ತು. ಉತ್ಸವಕ್ಕೂ ಮುನ್ನ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅಧಿಕಾರಿಗಳು, ರೈತರು, ವಿರೋಧ ಪಕ್ಷದವರೊಂದಿಗೆ ಸಮಾಲೋಚಿಸಿಲ್ಲ’ ಎಂದು ರಾಜಶೇಖರ್ ಹಿಟ್ನಾಳ್‌ ಆರೋಪಿಸಿದರು.

ದಿವಂಗತ ಮಾಜಿ ಸಚಿವ ಎಂ.ಪಿ. ಪ್ರಕಾಶ್‌ ಅವರು ವಿಶ್ವಕ್ಕೆ ಮಾದರಿ ಆಗುವ ರೀತಿಯಲ್ಲಿ ಹಂಪಿ ಉತ್ಸವ ಪ್ರಾರಂಭಿಸಿದ್ದರು. ಉತ್ಸವಗಳಲ್ಲಿ ಜನಜಂಗುಳಿ, ಉತ್ಸುಕತೆ ಇರುತ್ತಿತ್ತು. ಆದರೆ, ಈ ಸಲ ಅದು ಇರಲಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.