ADVERTISEMENT

ಹೊಸಪೇಟೆ, ಬೆಳಗಾವಿ: ಇಬ್ಬರು ಬಾಣಂತಿಯರ ಸಾವು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 23:11 IST
Last Updated 26 ಡಿಸೆಂಬರ್ 2024, 23:11 IST
ಐಶ್ವರ್ಯಾ
ಐಶ್ವರ್ಯಾ   

ಹೊಸಪೇಟೆ (ವಿಜಯನಗರ): ಇಲ್ಲಿನ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ (ಎಂಸಿಎಚ್‌) ಡಿ.20ರಂದು ಸಿಸೇರಿಯನ್‌ ಮೂಲಕ ಹೆಣ್ಣು ಮಗುವನ್ನು ಹೆತ್ತಿದ್ದ ಐಶ್ವರ್ಯಾ (20) ಎಂಬುವವರು ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.

‘ಸಂಡೂರಿನಲ್ಲಿ ವಾಸವಿದ್ದ ಐಶ್ವರ್ಯಾ ಅವರ ತವರು ಮನೆ ತಾಲ್ಲೂಕಿನ ಇಂಗಳಗಿಯಲ್ಲಿದೆ. ಹೀಗಾಗಿ ಎಂಸಿಎಚ್‌ನಲ್ಲಿ ಅವರಿಗೆ ಹೆರಿಗೆ ಆಗಿದೆ. ವಾಂತಿ, ಭೇದಿ ಆಗಿದ್ದ ಕಾರಣ ಅವರನ್ನು 24ರಂದು ಕೊಪ್ಪಳ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿ ಗುರುವಾರ ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ. ಸಾವಿಗೆ ಏನು ಕಾರಣ ಎಂಬುದನ್ನು ತಿಳಿಯಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಲ್‌.ಆರ್.ಶಂಕರ್ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಣಂತಿಗೆ ನಂಜಾಗಿತ್ತು’ ಎಂದಷ್ಟೇ ಕೊಪ್ಪಳ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ADVERTISEMENT

ಬೆಳಗಾವಿ ವರದಿ: ಇಲ್ಲಿನ ಬಿಮ್ಸ್‌ ಆಸ್ಪತ್ರೆಯಲ್ಲಿ ಗುರುವಾರ ಹೆರಿಗೆ ಬಳಿಕ ಬಾಣಂತಿ ಸಾವನ್ನಪ್ಪಿದ್ದಾರೆ. ವೈದ್ಯರು ಶಿಶುವನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೂಜಾ (25) ಎನ್ನುವವರು ಅವರು ಗರ್ಭಧಾರಣೆ ಸಂದರ್ಭದಲ್ಲೇ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು. ಡಿ.24ರಂದು ಅವರನ್ನು ಹೆರಿಗೆಗೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆಗ ಅವರ ಮೂಗು ಮತ್ತು ಬಾಯಿಯಲ್ಲಿ ರಕ್ತಸ್ರಾವವಾಗುತ್ತಿತ್ತು.‌ ಇದು ಪೂಜಾ ಅವರ ಐದನೇ ಹೆರಿಗೆಯಾಗಿದ್ದರಿಂದ ಅವರು ಇನ್ನಷ್ಟು ನಿತ್ರಾಣರಾಗಿದ್ದರು.

‘ಹೆರಿಗೆ ದಿನಾಂಕ ಇನ್ನೂ ಒಂದು ತಿಂಗಳು ಮುಂದೆ ಇತ್ತು. ಮುಂಚಿತವಾಗಿಯೇ ಅವರಿಗೆ ನೋವು ಕಾಣಿಸಿಕೊಂಡಿದ್ದರಿಂದ ಹೆರಿಗೆ ಮಾಡಿಸಲಾಯಿತು. ಮಗುವಿನ ಜೀವ ಉಳಿಸುವ ಸಲುವಾಗಿ ಕುಟುಂಬದವರ ಒಪ್ಪಿಗೆ ಪಡೆದು ಸಹಜ ಹೆರಿಗೆ ಮಾಡಿಸಲಾಯಿತು. ಆದರೆ, ಪೂಜಾ ಅವರು ಬದುಕುಳಿಯಲಿಲ್ಲ’ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.