ADVERTISEMENT

ಹೊಸಪೇಟೆ: ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ

ಸಿಗದ ಸೆಣಬು ಸಬ್ಸಿಡಿ- ಸರ್ಕಾರದ ನಿಜ ಬಣ್ಣ ಬಯಲು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 8:37 IST
Last Updated 24 ಫೆಬ್ರುವರಿ 2026, 8:37 IST
<div class="paragraphs"><p>ಹೊಸಪೇಟೆ: ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ</p></div>

ಹೊಸಪೇಟೆ: ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ

   

ಹೊಸಪೇಟೆ (ವಿಜಯನಗರ): ಕಬ್ಬಿನ ಹೊಲ, ಭತ್ತದ ಗದ್ದೆಗಳಲ್ಲಿ ಫಲವತ್ತತೆ ಹೆಚ್ಚಿಸುವ ಸಲುವಾಗಿ ಸೆಣಬು ಬೆಳೆಯುವ ಪದ್ಧತಿ ಹಲವು ವರ್ಷಗಳಿಂದ ನಡೆಯುತ್ತ ಬಂದಿದ್ದು, ಈ ವರ್ಷ ಸರ್ಕಾರ ಅದಕ್ಕೆ ಸಬ್ಸಿಡಿ ನೀಡದೆ ಇರುವುದನ್ನು ವಿರೋಧಿಸಿ ರೈತರು ಮಂಗಳವಾರ ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

‘ಸೆಣಬು ಬೆಳೆ ಹಸಿರೆಲೆ ಗೊಬ್ಬರವಾಗಿ ರೈತರ ಪಾಲಿಗೆ ವರದಾನವಾಗಿತ್ತು. ಆದರೆ ಈ ಬಾರಿ ಸರ್ಕಾರ ನಯಾ ಪೈಸೆ ಸಬ್ಸಿಡಿ ಕೊಟ್ಟಿಲ್ಲ. ಹೀಗಾಗಿ ಮಣ್ಣು ಹದಮಾಡಿ ಕಾಯುತ್ತಿರುವ ರೈತರು ಕಂಗಾಲಾಗಿದ್ದಾರೆ. ರೈತರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸದೆ ಬೇರೆ ದಾರಿ ಇಲ್ಲದಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ್ ಬಣ) ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಹೇಳಿದರು.

ADVERTISEMENT

ಸ್ಥಳಕ್ಕೆ ಬಂದ ಜಂಟಿ ಕೃಷಿ ನಿರ್ದೇಶಕ ಡಿ.ಟಿ.ಮಂಜುನಾಥ್‌ ಅವರು ಸರ್ಕಾರದಿಂದ ಈ ಬಾರಿ ರಾಜ್ಯದ ಎಲ್ಲಿಯೂ ಹಸಿರೆಲೆ ಗೊಬ್ಬರಕ್ಕಾಗಿ ಸಬ್ಸಿಡಿ ನೀಡಿಲ್ಲದಿರುವುದನ್ನು ರೈತರ ಗಮನಕ್ಕೆ ತಂದರು. ಈಗಾಗಲೇ ಮೂರ್ನಾಲ್ಕು ಬಾರಿ ಸರ್ಕಾರಕ್ಕೆ ಪತ್ರ ಬರೆದು ವಿನಂತಿಸಲಾಗಿದೆ ಎಂದರು. ಹೀಗಿದ್ದರೂ ಮತ್ತೊಮ್ಮೆ ಜಿಲ್ಲಾಧಿಕಾರಿ ಅವರ ಮೂಲಕ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

‘ಜೆ.ಡಿ. ಅವರ ಭರವಸೆಯ ಮೇರೆಗೆ ನಾವು ಇಂದಿನ ಪ್ರತಿಭಟನೆ ಹಿಂದೆಗೆದುಕೊಂಡಿದ್ದೇವೆ. ವಾರದೊಳಗೆ ನಮ್ಮ ಬೇಡಿಕೆ ಈಡೇರದಿದ್ದರೆ ಜೆ.ಡಿ ಅವರ ಕಚೇರಿಗೇ ಬೀಗ ಹಾಕಿ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಸಣ್ಣಕ್ಕಿ ರುದ್ರಪ್ಪ ಎಚ್ಚರಿಸಿದರು.

ರೈತ ಮುಖಂಡರಾದ ಜಾಕೀರ್ ಹುಸೇನ್, ಸುರೇಸ್, ಬಂಡೆ ಶ್ರೀನಿವಾಸ್, ಚಿನ್ನದೊರೆ, ಅಂಕ್ಲೇಶ್‌ ಇತರರು ಇದ್ದರು.

––––

2 ಸಾವಿರ ಕ್ರಿಂಟಲ್ ಬೇಕು

‘ಜಿಲ್ಲೆಗೆ ಪ್ರತಿ ವರ್ಷ ಸುಮಾರು 2 ಸಾವಿರ ಕ್ವಿಂಟಲ್ ಹಸಿರೆಲೆ ಗೊಬ್ಬರ ಬೀಜಕ್ಕೆ ಬೇಡಿಕೆ ಇದೆ. ಪ್ರತಿ ವರ್ಷ ಅದು ಸಬ್ಸಿಡಿ ರೂಪದಲ್ಲಿ ಸಿಗುತ್ತಿತ್ತು. ಕೆ.ಜಿಗೆ ಸುಮಾರು ₹124 ಇದ್ದು, ಇದರಲ್ಲಿ ₹93 ರಷ್ಟು ಸಬ್ಸಿಡಿ ಸಿಗುತ್ತಿತ್ತು, ಉಳಿದ ಮೊತ್ತವನ್ನು ರೈತರು ಭರಿಸುತ್ತಿದ್ದರು. ಈ ಬಾರಿ ರಾಜ್ಯದ ಎಲ್ಲೂ ಈ ಸಬ್ಸಿಡಿಯಲ್ಲಿ ಸೆಣಬಿನ ಬೀಜ ಪೂರೈಸಿಲ್ಲ. ಹೀಗಾಗಿ ಹೊಸಪೇಟೆ ಭಾಗದಲ್ಲೂ ರೈತರಿಗೆ ಅದು ಸಿಗದಾಗಿದೆ. ಇಲಾಖೆಗೆ ರೈತರ ಕಷ್ಟದ ಅರಿವು ಇದೆ. ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಟಿ.ಡಿ.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.