ADVERTISEMENT

ಹೊಸಪೇಟೆ | ಮಾಜಿ ದೇವದಾಸಿಯರ ಸಮೀಕ್ಷೆ: ವರದಿ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 5:24 IST
Last Updated 25 ಫೆಬ್ರುವರಿ 2026, 5:24 IST
ಎಂ.ಭಾಗ್ಯಲಕ್ಷ್ಮಿ
ಎಂ.ಭಾಗ್ಯಲಕ್ಷ್ಮಿ   

ಹೊಸಪೇಟೆ (ವಿಜಯನಗರ): ಮಾಜಿ ದೇವದಾಸಿಯರ ಸ್ಥಿತಿಗತಿ ತಿಳಿಯಲು ಸರ್ಕಾರ ನಡೆಸಿದ ಸಮೀಕ್ಷೆ ಅಪೂರ್ಣವಾಗಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ, ಆದರೆ ಈ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಾಲ್ಲೂಕಿನ ವಿವಿಧ ಸಂಘಟನೆಗಳು ಒಕ್ಕೊರಲಿನಿಂದ ತಿಳಿಸಿವೆ. ಜಿಲ್ಲಾಧಿಕಾರಿ ಅವರ ಸಮ್ಮುಖದಲ್ಲೇ ಅಹವಾಲು ಮಂಡಿಸಲು ಅವುಗಳು ನಿರ್ಧರಿಸಿವೆ.

‘ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಇದೀಗ ತಾಲ್ಲೂಕು ಸಮಿತಿ ಸಭೆ ಕರೆದಿದ್ದಾರೆ. ಸಭೆಗೆ ನಮಗೆ ಆಹ್ವಾನವೇ ಇರಲಿಲ್ಲ. ಕೊನೆಗೆ ಒತ್ತಾಯಕ್ಕೆ ನಮ್ಮನ್ನು ಕರೆಸಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಅದೆಷ್ಟೋ ಮನೆಗಳಿಗೆ ಭೇಟಿ ನೀಡಿಲ್ಲ, ಮಾಹಿತಿ ಕೊಟ್ಟರೂ ಸೇರಿಸಿಲ್ಲ. ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಮಾಜಿ ದೇವದಾಸಿಯರ ಕುಟುಂಬಗಳಿದ್ದರೂ ಸದ್ಯ ತೋರಿಸಿರುವುದು 3 ಸಾವಿರದಷ್ಟು ಮಾತ್ರ. ಉಳಿದವರು ಎಲ್ಲಿಗೆ ಹೋದರು, ಏನಾದರು ಎಂದು ಕೇಳಿದ್ದೇವೆ’ ಎಂದು ದೇವದಾಸಿಯರ ಜೀವನ ಮಟ್ಟ ಸುಧಾರಿಸಲು  24 ವರ್ಷಗಳಿಂದ ಕೆಲಸ ಮಾಡುತ್ತಿರುವ ಸಖಿ ಟ್ರಸ್ಟ್‌ನ ಸಂಸ್ಥಾಪಕ ನಿರ್ದೇಶಕಿ ಎಂ.ಭಾಗ್ಯಲಕ್ಷ್ಮಿ ತಿಳಿಸಿದರು.

‘ಡಿಸೆಂಬರ್‌ 31ಕ್ಕೆ ಕೊನೆಗೊಂಡ ಸಮೀಕ್ಷೆ ಅವಧಿಯಲ್ಲಿ ಕೇವಲ ಎರಡು ಸಭೆಗಳಷ್ಟೇ ನಡೆದಿದ್ದವು. ಅದು ಸಹ ನಾಮಕಾವಸ್ಥೆಗೆ ಮಾತ್ರ ನಡೆದಿದೆ. ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆಗೊಳ್ಳುವ ಹಂತದಲ್ಲಿದೆ ಎಂದು ಬಿಂಬಿಸುವುದಷ್ಟೇ ಅಧಿಕಾರಿಗಳ ಗುರಿಯಾಗಿತ್ತು. ಹೀಗಾಗಿ ಸರಿಯಾದ ವರದಿಯನ್ನೇ ಸಿದ್ಧಪಡಿಸಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಇದು ಮಧ್ಯಂತರ ವರದಿ, ಪೂರ್ಣ ವರದಿ ಸಲ್ಲಿಕೆ ಆಮೇಲೆ ಎಂದು ಅಧಿಕಾರಿಗಳು ಈಗ ಹೇಳುತ್ತಿದ್ದಾರೆ. ಇನ್ನು ಮುಂದೆ ಜಂಟಿ ಸಮೀಕ್ಷೆ ಆದರಷ್ಟೇ ಮಜಿ ದೇವದಾಸಿಯರು ಮತ್ತು ಅವರ ಎರಡು ತಲೆಮಾರುಗಳ ಜನರಿಗೆ ನ್ಯಾಯ ಸಿಗಲು ಸಾಧ್ಯ’ ಎಂದು ಅವರು ತಿಳಿಸಿದರು.

ಸಖಿ ಟ್ರಸ್ಟ್ ಮತ್ತು ಇತರ ಕೆಲವು ಸಂಘಟನೆಗಳ ಅಹವಾಲು ಆಲಿಸಿದ ಬಳಿಕ, ಜಿಲ್ಲಾಧಿಕಾರಿಗಳಿಂದಲೇ ಈ ಸಮಸ್ಯೆಗೆ ಪರಿಹಾರ ಸಿಗಬಹುದಷ್ಟೇ, ಡಿ.ಸಿ ಅವರ ಮುಂದೆಯೇ ವಿಚಾರ ಪ್ರಸ್ತಾಪಿಸಿ ಎಂದು ತಿಳಿಸಲಾಯಿತು ಎಂದು ತಹಶೀಲ್ದಾರ್ ಕಚೇರಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.