ADVERTISEMENT

ಹೊಸಪೇಟೆ: ಅರ್ಚಕ ಕೃಷ್ಣ ಭಟ್ ನಿಧನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 6:12 IST
Last Updated 25 ಏಪ್ರಿಲ್ 2021, 6:12 IST
ಹಂಪಿ ಬಡವಿಲಿಂಗ ಎದುರು ಅರ್ಚಕ ಕೃಷ್ಣ ಭಟ್
ಹಂಪಿ ಬಡವಿಲಿಂಗ ಎದುರು ಅರ್ಚಕ ಕೃಷ್ಣ ಭಟ್   

ಹೊಸಪೇಟೆ (ವಿಜಯನಗರ): ಅರ್ಚಕ ಕೃಷ್ಣ ಭಟ್ (87) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ಬೆಳಿಗ್ಗೆ ಹಂಪಿಯ‌ ಅವರ ಮನೆಯಲ್ಲಿ ನಿಧನ ಹೊಂದಿದರು.

ಮೃತರಿಗೆ ಮೂವರು ಗಂಡು, ಒಬ್ಬ ಹೆಣ್ಣು ಮಗಳಿದ್ದಾರೆ. ಭಾನುವಾರ ಮಧ್ಯಾಹ್ನ‌ ಹಂಪಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಕೃಷ್ಣ ಭಟ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಾಸರವಳ್ಳಿಯವರು. 1979ರಲ್ಲಿ ಹಂಪಿಗೆ ಬಂದು ನೆಲೆಸಿದರು.‌ ಅಂದಿನಿಂದ ಸತತವಾಗಿ 2020ನೇ ಸಾಲಿನ ನವೆಂಬರ್ ವರೆಗೆ ಒಂದು ದಿನವೂ ತಪ್ಪಿಸದೇ ಹಂಪಿ ಬಡವಿಲಿಂಗಕ್ಕೆ ಪೂಜೆ ನೆರವೇರಿಸಿದ್ದಾರೆ. ನಡೆಯಲಿಕ್ಕಾಗದೇ ಹಾಸಿಗೆ ಹಿಡಿದ ಕಾರಣ ಅವರ ಮಗ ರಾಘವ ಭಟ್ ಅವರು ಪೂಜೆ ಮುಂದುವರೆಸಿದ್ದಾರೆ.

ಹಂಪಿಯಲ್ಲಿನ ಬಡವಿಲಿಂಗ, ಏಕಶಿಲೆಯಲ್ಲಿ ಕೆತ್ತನೆ ಮಾಡಿರುವುದರಿಂದ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಕೃಷ್ಣ ಭಟ್ ಅವರು ಬಡವಿಲಿಂಗಕ್ಕೆ ಪೂಜೆ ಮಾಡುವುದನ್ನು ಕಣ್ತುಂಬಿಕೊಳ್ಳಲು, ಅದರ ಛಾಯಾಚಿತ್ರ ಸೆರೆ ಹಿಡಿಯಲು ದೂರದ ಸ್ಥಳಗಳಿಂದ ಜನ ಬರುತ್ತಿದ್ದರು.

ADVERTISEMENT
ಕೃಷ್ಣ ಭಟ್ ಅವರು ಪೂಜೆ ಸಲ್ಲಿಸುತ್ತಿರುವ ಸಂಗ್ರಹ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.