ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಾರಿಗನೂರಿನಲ್ಲಿ ಶನಿವಾರ ಸಂಜೆ ಚೆಕ್‌ಡ್ಯಾಂನಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕಾರಿಗನೂರು ಹೊರವಲಯದ ಗುಡ್ಡದ ತಿಮ್ಮಪ್ಪನ ದೇಗುಲ ಬಳಿಯ ಚೆಕ್‌ಡ್ಯಾಂನಲ್ಲಿ 10ರಿಂದ 15 ಅಡಿಯಷ್ಟು ಆಳದ ನೀರಲ್ಲಿ ಈ ಘಟನೆ ನಡೆದಿದೆ. ಹನುಮಂತ (14) ಮತ್ತು ಅರವಿಂದ (14) ಮೃತ ಬಾಲಕರು. ಇವರಿಬ್ಬರೂ ಕಾರಿಗನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಣಿಬಾಧಿತ ಆರ್‌ಬಿಎಸ್‌ಎಸ್‌ಎನ್ ಕ್ಯಾಂಪ್‌ನ ನಿವಾಸಿಗಳಾದ ಈ ಇಬ್ಬರು ಮಕ್ಕಳ ಪಾಲಕರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಮನೆಯಲ್ಲಿ ಅನಾರೋಗ್ಯ, ಬಡತನ ಕಿತ್ತು ತಿನ್ನುತ್ತಿದೆ. ಇದೀಗ ಮಕ್ಕಳ ಸಾವು ಅವರಿಗೆ ಬರ ಸಿಡಿಲಿನಂತೆ ಬಂದೆರೆಗಿದೆ. ಸಂಜೆ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.