
ಹೂವಿನಹಡಗಲಿ: ತಾಲ್ಲೂಕಿನ ನಂದಿಹಳ್ಳಿ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ಡಾಂಬರು ಪದರ ಕಿತ್ತು ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದಿದ್ದು, ಜಲ್ಲಿ ಕಲ್ಲುಗಳು ಎದ್ದಿರುವುದರಿಂದ ವಾಹನ ಚಾಲನೆ ಕಷ್ಟಕರವಾಗಿದೆ.
ಸೋಗಿ ಮುಖ್ಯ ರಸ್ತೆಯಿಂದ ನಂದಿಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 2.30 ಕಿ.ಮೀ. ರಸ್ತೆಯನ್ನು 2019ರಲ್ಲಿ ₹1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಮೂರೇ ತಿಂಗಳಲ್ಲಿ ರಸ್ತೆ ಕಿತ್ತು ಹೋಗಿದ್ದರಿಂದ 2020ರಲ್ಲಿ ಗುತ್ತಿಗೆದಾರನಿಂದ ಮೊತ್ತೊಮ್ಮೆ ದುರಸ್ತಿ ಮಾಡಿಸಲಾಯಿತು. ಕಾಮಗಾರಿ ಕಳಪೆಯಾಗಿದ್ದರಿಂದ ಕೆಲವೇ ದಿನಗಳಲ್ಲಿ ರಸ್ತೆ ತನ್ನ ಚಹರೆ ಕಳೆದುಕೊಂಡು ಕಚ್ಚಾ ದಾರಿಗಿಂತ ಕಡೆಯಾಗಿದೆ.
‘ರಸ್ತೆ ತುಂಬಾ ಗುಂಡಿಗಳು ಬಿದ್ದಿವೆ. ಜಲ್ಲಿ ಕಲ್ಲುಗಳು ಎದ್ದಿರುವುದರಿಂದ ಬಸ್ ಓಡಿಸಲು ಸಾರಿಗೆ ಘಟಕದವರು ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ವಾಹನಗಳ ಓಡಾಟ ವಿರಳವಾಗಿದೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಗ್ರಾಮದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.
ರಸ್ತೆಯಲ್ಲಿನ ಆಳವಾದ ಗುಂಡಿಗಳನ್ನು ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಯಾದರೆ, ಬೇಸಿಗೆಯಲ್ಲಿ ದೂಳು ಮುಗಿಲೆತ್ತರಕ್ಕೆ ಚಿಮ್ಮುತ್ತದೆ. ಅನಿವಾರ್ಯವೆಂಬಂತೆ ಈ ಮಾರ್ಗದಲ್ಲಿ ಸಂಚರಿಸಿ ಹೈರಾಣಾಗಿರುವ ಗ್ರಾಮಸ್ಥರು ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಶಪಿಸುತ್ತಿದ್ದಾರೆ.
ನಂದಿಹಳ್ಳಿ ಸಂಪರ್ಕ ರಸ್ತೆಯನ್ನು ಕೂಡಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕ್ರಿಯಾ ಯೋಜನೆಯನ್ನು ತಾಂತ್ರಿಕ ಅನುಮೋದನೆಗೆ ಕಳಿಸಲಾಗಿದೆ. ನಂದಿಹಳ್ಳಿ ರಸ್ತೆ ನಿರ್ಮಾಣ ಕೆಲಸ ಮುಂದಿನ ತಿಂಗಳು ಪ್ರಾರಂಭವಾಗುವ ನಿರೀಕ್ಷೆ ಇದೆಕುಬೇಂದ್ರನಾಯ್ಕ ಪ್ರಭಾರ ಎಇಇ ಪಿಆರ್‌ಇ ಉಪ ವಿಭಾಗ ಹಡಗಲಿ
ನಂದಿಹಳ್ಳಿ ರಸ್ತೆ ಹದಗೆಟ್ಟು ಹೋಗಿದೆ. ಹಿಂದಿನ ಈಗಿನ ಶಾಸಕರು ಭೂಮಿಪೂಜೆ ಮಾಡಿದ್ದಾರೆ ಹೊರತು ಕೆಲಸ ಪ್ರಾರಂಭಿಸಿಲ್ಲಕಮತರ ಕೊಟ್ರೇಶ ನಂದಿಹಳ್ಳಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.