ADVERTISEMENT

ಬಿಜೆಪಿ ಬಿಡಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಆನಂದ್ ಸಿಂಗ್

120 ಎಕರೆ ಸರ್ಕಾರಿ ಜಾಗ ಕೊಟ್ಟರೆ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾಗಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 11:30 IST
Last Updated 1 ಅಕ್ಟೋಬರ್ 2023, 11:30 IST
<div class="paragraphs"><p>ಆನಂದ್ ಸಿಂಗ್</p></div>

ಆನಂದ್ ಸಿಂಗ್

   

ಹೊಸಪೇಟೆ (ವಿಜಯನಗರ): ‘ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ನಾನು ಮೂರು ವರ್ಷಗಳ ಹಿಂದೆಯೇ ಹೇಳಿದ್ದೆ. ಅದರಂತೆ ನಡೆದುಕೊಂಡಿದ್ದೇನೆ. ಮುಂದೆಯೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬಿಜೆಪಿಯಲ್ಲೇ ಇರುತ್ತೇನೆ, ಅಗತ್ಯ ಇದ್ದವರ ಪ್ರಚಾರದಲ್ಲೂ ಪಾಲ್ಗೊಳ್ಳುತ್ತೇನೆ’ ಎಂದು ಮಾಜಿ ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ತಮ್ಮ ಪುತ್ರ ಸಿದ್ಧಾರ್ಥ ಸಿಂಗ್ ಅವರು ಸೋತ ಬಳಿಕ ಇದುವರೆಗೆ ಮಾಧ್ಯಮದವರಿಂದ ದೂರವೇ ಉಳಿದಿದ್ದ ಆನಂದ್ ಸಿಂಗ್ ಅವರು ಭಾನುವಾರ ಕಮಲಾಪುರದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.

ADVERTISEMENT

‘ಹೊಸಪೇಟೆ ಸುತ್ತಮುತ್ತಲಿನ ಕಬ್ಬು ಬೆಳೆಗಾರರ ಹಿತಾಸಕ್ತಿಯಿಂದ ಸಕ್ಕರೆ ಕಾರ್ಖಾನೆ ಅಗತ್ಯ. ಹೊರಗಿನವರ ಬದಲಿಗೆ ಸ್ಥಳೀಯರಿಗೆ ಕಾರ್ಖಾನೆ ಸ್ಥಾಪನೆಗೆ ಅವಕಾಶ ನೀಡುವುದಾಗಿ ಶಾಸಕ ಎಚ್‌.ಆರ್‌.ಗವಿಯಪ್ಪ ಹೇಳಿದ್ದಾರೆ. ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಯಾರೂ ಮುಂದೆ ಬಾರದಿದ್ದರೆ ನಾನೇ ಅದನ್ನು ಸ್ಥಾಪಿಸುತ್ತೇನೆ. ಆದರೆ ನನಗೆ ಕನಿಷ್ಠ 120 ಎಕರೆ ಸರ್ಕಾರಿ ಜಾಗ ನೀಡಬೇಕು’ ಎಂದು ಆನಂದ್ ಸಿಂಗ್ ಹೇಳಿದರು.

ಈ ಹಿಂದೆ ಜಿಂದಾಲ್‌, ಕಲ್ಯಾಣಿ, ಬಿಎಂಎಂ, ಗ್ರಾಮಿಣಿ, ಮಿತ್ತಲ್‌ ಮೊದಲಾದ ಕಂಪನಿಗಳಿಗೆ ರೈತರ ಜಮೀನನ್ನೇ ಸರ್ಕಾರ ಜುಜುಬಿ ದುಡ್ಡಿಗೆ ತೆಗೆಸಿಕೊಟ್ಟಿತು. ಅದಕ್ಕೆ ಪ್ರತಿಯಾಗಿ ಕಂಪನಿಗಳು ಏನು ಕೊಟ್ಟವು? ಸ್ಥಳೀಯರಿಗೆ ಅಲ್ಲಿ  ಕೂಲಿ ಕೆಲಸ ಬಿಟ್ಟರೆ ಉನ್ನತ ದರ್ಜೆಯ ಉದ್ಯೋಗವೇ ಇಲ್ಲ. ನನಗೆ ಸರ್ಕಾರಿ ನಿವೇಶನ ಕೊಡಲಿ, ನಾನು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುತ್ತೇನೆ. ಖಾಸಗಿ ನಿವೇಶನ ಖರೀದಿಸಿ, ಸಕ್ಕರೆ ಕಾರ್ಖಾನೆಯನ್ನಂತೂ ನಾನು ಸ್ಥಾಪಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.