ADVERTISEMENT

ಹೂವಿನಹಡಗಲಿ: ತೆಪ್ಪಗಳಲ್ಲಿ ಮರಳು ಅಕ್ರಮ ಸಾಗಣೆ

ಹಿರೇಬನ್ನಿಮಟ್ಟಿ, ಬ್ಯಾಲಹುಣ್ಸಿ, ನಂದಿಗಾವಿ ಬಳಿ ತೆಪ್ಪಗಳ ಭರಾಟೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 16:11 IST
Last Updated 26 ಜನವರಿ 2025, 16:11 IST
ಹೂವಿನಹಡಗಲಿ ತಾಲ್ಲೂಕು ಹಿರೇಬನ್ನಿಮಟ್ಟಿ ಗ್ರಾಮಸ್ಥರು ಭಾನುವಾರ ಮರಳು ತೆಪ್ಪಗಳನ್ನು ವಶಪಡಿಸಿಕೊಂಡಿರುವುದು
ಹೂವಿನಹಡಗಲಿ ತಾಲ್ಲೂಕು ಹಿರೇಬನ್ನಿಮಟ್ಟಿ ಗ್ರಾಮಸ್ಥರು ಭಾನುವಾರ ಮರಳು ತೆಪ್ಪಗಳನ್ನು ವಶಪಡಿಸಿಕೊಂಡಿರುವುದು   

ಹೂವಿನಹಡಗಲಿ: ತಾಲ್ಲೂಕು ವ್ಯಾಪ್ತಿಯ ತುಂಗಭದ್ರಾ ನದಿ ಪಾತ್ರದಲ್ಲಿನ ಮರಳನ್ನು ಹಾವೇರಿ ಜಿಲ್ಲೆಯ ದಂಧೆಕೋರರು ಅಕ್ರಮವಾಗಿ ದೋಚುತ್ತಿದ್ದಾರೆ. ಮರಳನ್ನು ತೆಪ್ಪಗಳಲ್ಲಿ ತುಂಬಿ ಹರಿಯುವ ನದಿಯಲ್ಲೇ ಆ ಕಡೆ ದಡಕ್ಕೆ ಸಾಗಿಸಲಾಗುತ್ತದೆ.

ತೆಪ್ಪಗಳಲ್ಲಿ ಮರಳು ಸಾಗಣೆ ಮಾಡುವವರ ವಿರುದ್ಧ ತಾಲ್ಲೂಕಿನ ಹಿರೇಬನ್ನಿಮಟ್ಟಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ತೆಪ್ಪಗಳನ್ನು ಭಾನುವಾರ ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.

ತುಂಗಭದ್ರಾ ನದಿಯ ಎಡ ದಂಡೆ ಹಾವೇರಿ ಭಾಗದ ದಂಧೆಕೋರರು ತಾಲ್ಲೂಕಿನ ಹಿರೇಬನ್ನಿಮಟ್ಟಿ, ಬ್ಯಾಲಹುಣ್ಸಿ, ನಂದಿಗಾವಿ, ಮೈಲಾರ ಭಾಗದ ನದಿ ತೀರಕ್ಕೆ ಲಗ್ಗೆ ಇಟ್ಟಿದ್ದಾರೆ. ಪ್ರತಿದಿನ ನೂರಾರು ತೆಪ್ಪಗಳಲ್ಲಿ ಮರಳನ್ನು ತುಂಬಿ ಈ ದಡದಿಂದ ಹಾವೇರಿ ತಾಲ್ಲೂಕಿನ ಹುರುಳಿಹಾಳ, ಗಳಗನಾಥ, ತೆರದಹಳ್ಳಿ, ಮೇವುಂಡಿ ತೀರಕ್ಕೆ ಸಾಗಿಸಲಾಗುತ್ತಿದೆ. ಅಲ್ಲಿಂದ ಲಾರಿಗಳಿಗೆ ತುಂಬಿಸಿ ನಗರ ಪ್ರದೇಶಗಳಿಗೆ ಸಾಗಣೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT

ಹೂವಿನಹಡಗಲಿ ಭಾಗದ ಮರಳು ಬ್ಲಾಕ್‌ಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಈ ಭಾಗದಲ್ಲಿ ಉತ್ಕೃಷ್ಟ ಮರಳು ಲಭ್ಯವಿರುವುದರಿಂದ ಎಡ ದಂಡೆಯ ದಂಧೆಕೋರರು ತಾಲ್ಲೂಕಿನ ಆಯಕಟ್ಟಿನ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಮರಳು ತುಂಬುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ನಿರಂತರವಾಗಿ ಮರಳು ತೆಪ್ಪಗಳು ನದಿಯಲ್ಲಿ ಓಡಾಡುತ್ತಿವೆ. ಈ ದಂಧೆ ಎಗ್ಗಿಲ್ಲದೇ ನಡೆದಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕೆಲ ದಿನಗಳ ಹಿಂದೆ ಅಧಿಕಾರಿಗಳು ಎರಡೂ ದಡಗಳಲ್ಲಿ ಜಂಟಿ ದಾಳಿ ನಡೆಸಿದಾಗ ಕೆಲ ದಿನ ಮಟ್ಟಿಗೆ ಮಾತ್ರ ತೆಪ್ಪಗಳ ಸಾಗಣೆ ನಿಯಂತ್ರಣವಾಗಿತ್ತು. ಈಗ ಮತ್ತೆ ತುಂಗಭದ್ರೆಯಲ್ಲಿ ತೆಪ್ಪಗಳ ಭರಾಟೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.

ಎಡ ದಂಡೆಯವರು ಮರಳನ್ನು ತೆಪ್ಪಗಳಲ್ಲಿ ಸಾಗಿಸುವ ಮಾಹಿತಿ ಬಂದಿದೆ. ನದಿ ಪಾತ್ರದಲ್ಲಿ ನಿಗಾ ಇರಿಸಲು ಹಿರೇಹಡಗಲಿ ಪೊಲೀಸರಿಗೆ ತಿಳಿಸಲಾಗಿದ್ದು ಅಕ್ರಮ ತಡೆಗೆ ಕ್ರಮ ವಹಿಸುತ್ತೇವೆ
ಜಿ. ಸಂತೋಷಕುಮಾರ್, ತಹಶೀಲ್ದಾರ್ ಹೂವಿನಹಡಗಲಿ

ಹಿರೇಬನ್ನಿಮಟ್ಟಿ ಗ್ರಾಮಸ್ಥರ ಆಕ್ರೋಶ

ಕಳೆದ ವರ್ಷ ಜಾನುವಾರು ಮೈ ತೊಳೆಯಲು ನದಿಗೆ ಇಳಿದಿದ್ದ ಇಬ್ಬರು ಗುಂಡಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ‘ನೀವೇನು ನದಿಯಲ್ಲಿ ಗುಂಡಿ ತೋಡಿ ಮರಳು ಕೊಂಡೊಯ್ಯುತ್ತೀರಿ. ಸಾವು ನೋವು ಅನುಭವಿಸುವವರು ನಾವು’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಈ ದಂಧೆ ಮಾಫಿಯಾ ಸ್ವರೂಪ ಪಡೆದಿದೆ. ಎರಡೂ ದಂಡೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಮರಳು ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಹಿರೇಬನ್ನಿಮಟ್ಟಿಯ ದುರುಗಪ್ಪ ನೀಲಪ್ಪ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.