
ಕೂಡ್ಲಿಗಿ: ತಾಲ್ಲೂಕಿನಲ್ಲಿ ಅನಧಿಕೃತವಾಗಿ ಸ್ಥಾಪನೆ ಮಾಡುತ್ತಿರುವ ಪವನ ಮತ್ತು ಸೌರ ವಿದ್ಯುತ್ ಘಟಕಗಳನ್ನು ತೆರವು ಮಾಡಿಸಿ, ರೈತರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ಮಹೇಶ ದೇವರಮೆನೆ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ರೈತ ಸಂಘದಿಂದ ಹಮ್ಮಿಕೊಂಡಿದ್ದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಜನ್ಮ ದಿನಾಚರಣೆ ಹಾಗೂ ತಾಲ್ಲೂಕಿನಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪವನ ಮತ್ತು ಸೋಲರ್ ವಿದ್ಯುತ್ ಘಟಕಗಳ ತೆರವುಗೊಳಿಸುವ ಕುರಿತು ರೈತರ ಚರ್ಚಾಕೂಟದಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪ್ರತಿಷ್ಠಿತ ಕಂಪನಿಗಳು ಫಲವತ್ತಾದ ಜಮೀನಿಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಿಕೊಂಡು ಅವುಗಳಲ್ಲಿ ವಿದ್ಯುತ್ ಘಟಕಗಳನ್ನು ಅಳವಡಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ರೈತರ ಮಕ್ಕಳಿಗೆ ಜಮೀನುಗಳು ಕೈ ತಪ್ಪಿ ಹೋಗಲಿವೆ. ಗುಡೇಕೋಟೆ ಹೋಬಳಿಯಯಲ್ಲಿನ ಅನೇಕ ಗ್ರಾಮಗಳ ಬಳಿ ಹಾಗೂ ಕಾದಿಟ್ಟ ಅರಣ್ಯ ಪ್ರದೇಶಗಳಲ್ಲಿ ಹಾಕಿರುವ ಪವನ್ ವಿದ್ಯುತ್ ಯಂತ್ರಗಳಿಂದ ತೀವ್ರತರವಾದ ಶಬ್ದ ಬರುತ್ತಿದ್ದು, ಅದರಿಂದ ಪ್ರಾಣಿ ಪಕ್ಷಿಗಳು ವಲಸೆ ಹೋಗುತ್ತಿವೆ. ಅದ್ದರಿಂದ ಇಂತಹ ಸ್ಥಳಗಳಲ್ಲಿ ಹಾಕಿರುವ ವಿದ್ಯುತ್ ಘಟಕಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.
ಕಾನೂನು ಬದ್ದವಾಗಿ ಸ್ಥಾಪನೆ ಮಾಡಿರುವ ವಿದ್ಯುತ್ ಘಟಗಳಿಂದ ಬರುವ ಲಾಭಾಂಶದಲ್ಲಿ ಶೇ 25ರಷ್ಟನ್ನು ಪ್ರತಿ ವರ್ಷ ಜಮೀನು ನೀಡಿದ ರೈತರ ಖಾತೆಗೆ ಹಾಕಬೇಕು ಎಂದು ಆಗ್ರಹಿಸಿದರು.
ಇನ್ನು ಕೆಲವು ಕಡೆ ರೈತರ ಜಮೀನುಗಳಿಗೆ ಹೋಗುವ ದಾರಿಯನ್ನು ಬಿಡದೆ ಸೋಲರ್ ಘಟಕಗಳನ್ನು ಹಾಕಿದ್ದು, ರೈತರು ದಾರಿ ಬಿಡಿಸಿಕೊಳ್ಳಲು ಸರ್ವೆ ಹಾಗೂ ಹದ್ದು ಬಸ್ತ್ ಮಾಡಿಸಲು ಸಹ ಸಾದ್ಗ್ಯವಾಗುತ್ತಿಲ್ಲ. ಆದ್ದರಿಂದ ರೈತರ ಜಮೀನುಗಳಿಗೆ ದಾರಿ ಬಿಟ್ಟುಕೊಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಆರ್. ಮಾಧವರೆಡ್ಡಿ, ಉಪಾಧ್ಯಕ್ಷ ದೇವರಮನೆ ಮಹೇಶ್, ಹಿರಿಯ ಕಾನೂನು ಸಲಹೆಗಾರ ಎಚ್.ಎಂ. ಪಂಡಿತರಾಧ್ಯ, ತಾಲ್ಲುಕು ಅಧ್ಯಕ್ಷ ಜರಿಮಲೆ ಡಿ. ನಾಗರಾಜ, ಜಿಲ್ಲಾ ಉಪಾಧ್ಯಕ್ಷ ಕೆ. ಯೂಸಫ್, ವಡ್ರಳ್ಳಿ ಚಿತ್ತಪ್ಪ, ತಿಮ್ಮರೆಡ್ಡಿ, ಜೆ. ಮರುಳಸಿದ್ದಪ್ಪ, ನಂದಿ ಜಂಬಣ್ಣ, ಎಂ. ಜಂಬನಗೌಡ, ಪಿ. ಮುಸ್ತಾಫ್, ಪಿ.ಎಚ್. ಖಾಸೀಂ ಸಾನ್. ತಳವಾರ ಹನುಮಂತ, ತುಂಬಿಕಕಟ್ಟೆ ಶಿವಣ್ಣ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಪಟ್ಟಣದ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದ ಬಳಿ ರೈತರು ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.