ADVERTISEMENT

ಇಟ್ಟಿಗಿ–ಕೊಟ್ಟೂರು ರಸ್ತೆ ತುಂಬ ಜಲ್ಲಿಕಲ್ಲು

ದುರಸ್ತಿ ಕಾಮಗಾರಿ ಅರೆಬರೆ– ಪಾದಯಾತ್ರಿಗಳನ್ನು ಕಾಪಾಡು ಕೊಟ್ಟೂರೇಶ …

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 3:14 IST
Last Updated 9 ಫೆಬ್ರುವರಿ 2026, 3:14 IST
ಹೂವಿನಹಡಗಲಿ ತಾಲ್ಲೂಕಿನ ಇಟ್ಟಿಗಿ-ಕೊಟ್ಟೂರು ರಸ್ತೆಯಲ್ಲಿ ಹರಡಿರುವ ಜಲ್ಲಿಕಲ್ಲುಗಳು
ಹೂವಿನಹಡಗಲಿ ತಾಲ್ಲೂಕಿನ ಇಟ್ಟಿಗಿ-ಕೊಟ್ಟೂರು ರಸ್ತೆಯಲ್ಲಿ ಹರಡಿರುವ ಜಲ್ಲಿಕಲ್ಲುಗಳು   

ಹೂವಿನಹಡಗಲಿ: ತಾಲ್ಲೂಕಿನ ಇಟ್ಟಿಗಿ-ಕೊಟ್ಟೂರು ರಸ್ತೆ ಮಾರ್ಗ ದುರಸ್ತಿ ಕಾಮಗಾರಿ ಅರೆಬರೆಯಾಗಿರುವುದರಿಂದ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ರಸ್ತೆಯಲ್ಲಿ ಎದ್ದಿರುವ ಜಲ್ಲಿ ಕಲ್ಲುಗಳು, ತಗ್ಗು ಗುಂಡಿಗಳು ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿವೆ.

ನಾಡಿನ ಐತಿಹಾಸಿಕ ಧಾರ್ಮಿಕ ಸುಕ್ಷೇತ್ರ ಕೊಟ್ಟೂರಿನಲ್ಲಿ ಫೆ.12ರಂದು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಜರುಗಲಿದೆ. ಹೂವಿನಹಡಗಲಿ ತಾಲ್ಲೂಕು ಸೇರಿದಂತೆ ಕೊಪ್ಪಳ, ಗದಗ ಜಿಲ್ಲೆಯ ಅಪಾರ ಭಕ್ತರು ಈ ಮಾರ್ಗ ಮೂಲಕ ಪಾದಯಾತ್ರೆಯಲ್ಲಿ ತೆರಳುತ್ತಾರೆ. ಹೊಳಗುಂದಿ ಉತ್ತಂಗಿ ಮಧ್ಯೆ ಹಾಗೂ ಇಟ್ಟಿಗಿಯಿಂದ ಅಲಬೂರು ಗ್ರಾಮದ ವರೆಗೆ ರಸ್ತೆಯ ಆಯ್ದ ಭಾಗವನ್ನು ಎರಡು ತಿಂಗಳ ಹಿಂದೆ ಅಗೆದು ಹಾಗೇ ಬಿಟ್ಟಿರುವುದರಿಂದ ಪಾದಯಾತ್ರಿಗಳ ನಡಿಗೆಗೆ ಅಡಚಣೆ ಉಂಟಾಗಿದೆ.

‘ಜಲ್ಲಿಕಲ್ಲು ಎದ್ದಿರುವ ಹದಗೆಟ್ಟ ಈ ರಸ್ತೆಯಲ್ಲಿ ಬರಿಗಾಲಲ್ಲಿ ನಡೆಯುವ ಪಾದಯಾತ್ರಿಗಳನ್ನು ಸ್ವಾಮಿ ಕೊಟ್ಟೂರೇಶ್ವರನೇ ಕಾಪಾಡಬೇಕು’ ಎಂದು ಇಟ್ಟಿಗಿ ಗ್ರಾಮಸ್ಥರು ಮರುಕಪಡುತ್ತಿದ್ದಾರೆ.

ADVERTISEMENT

ಅರಭಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿಯ ಮಾರ್ಗ ಆಗಿರುವುದರಿಂದ ನಿತ್ಯ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಉತ್ತಂಗಿಯಿಂದ ಇಟ್ಟಿಗಿವರೆಗೆ ಕಳೆದ ವರ್ಷ ಉತ್ತಮವಾಗಿ ರಸ್ತೆ ನಿರ್ಮಿಸಲಾಗಿದೆ. ಇಟ್ಟಿಗಿ-ಅಲಬೂರುವರೆಗೆ ಆಯ್ದ ಭಾಗಗಳಲ್ಲಿ ಗುಂಡಿಗಳು ಬಿದ್ದಿವೆ. ದುರಸ್ತಿಯ ಸಲುವಾಗಿ ಎರಡು ತಿಂಗಳ ಹಿಂದೆ ರಸ್ತೆಯನ್ನು ಅಗೆದು ಕೈ ಬಿಡಲಾಗಿದೆ. ‘ರಸ್ತೆಯಲ್ಲಿ ಜಲ್ಲಿಕಲ್ಲು ಎದ್ದಿರುವುದರಿಂದ ಈ ಮಾರ್ಗದಲ್ಲಿ ವಾಹನ ಓಡಿಸುವುದು ಕಷ್ಟಕರವಾಗಿದೆ. ಕೆಲ ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ’ ಎಂದು ನಾಗರಿಕರು ದೂರಿದ್ದಾರೆ.

‘ಕೊಟ್ಟೂರು ಮುಖ್ಯ ರಸ್ತೆಯ ರಿಪೇರಿ ಕೆಲಸ ಸ್ಥಗಿತಗೊಂಡಿರುವುದರಿಂದ ಈ ಮಾರ್ಗದಲ್ಲಿ ಓಡಾಡುವವರು ಯಾತನೆ ಅನುಭವಿಸುತ್ತಿದ್ದಾರೆ. ಕೊಟ್ಟೂರೇಶ್ವರ ಸ್ವಾಮಿಯ ಅಪಾರ ಭಕ್ತರು ಈ ಮಾರ್ಗ ಮೂಲಕ ಸುಕ್ಷೇತ್ರಕ್ಕೆ ಪಾದಯಾತ್ರೆ ಹೋಗುತ್ತಾರೆ. ರಸ್ತೆಯನ್ನು ಅಗೆದು, ಜಲ್ಲಿಕಲ್ಲು ಹರಡಿ ಹೋದವರು ಇತ್ತ ಕಡೆ ಸುಳಿದಿಲ್ಲ. ಜಾತ್ರೆ ಒಳಗಾಗಿ ದುರಸ್ತಿ ಕೆಲಸ ಮುಗಿಸಿದ್ದರೆ ಭಕ್ತರಿಗೆ ಅನುಕೂಲ ಆಗುತಿತ್ತು’ ಎಂದು ಇಟ್ಟಿಗಿ ಗ್ರಾಮದ ರಾಜಶೇಖರ್ ಹೇಳಿದರು.

‘ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ರಸ್ತೆ ರಿಪೇರಿ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಹೂವಿನಹಡಗಲಿ ತಾಲ್ಲೂಕಿನ ಇಟ್ಟಿಗಿ-ಕೊಟ್ಟೂರು ರಸ್ತೆಯಲ್ಲಿ ಹರಡಿರುವ ಜಲ್ಲಿಕಲ್ಲುಗಳು

ಫೆ.12ರಂದು ಕೊಟ್ಟೂರು ರಥೋತ್ಸವ ಲಕ್ಷಾಂತರ ಭಕ್ತರಿಂದ ಇದೇ  ರಸ್ತೆಯಲ್ಲಿ ಪಾದಯಾತ್ರೆ ಅಷ್ಟರೊಳಗೆ ದುರಸ್ತಿ ಆಗಲಿ ಎಂಬ  ಒತ್ತಾಯ

ವೈಯಕ್ತಿಕ ಸಮಸ್ಯೆಯಿಂದ ಗುತ್ತಿಗೆದಾರರು ದುರಸ್ತಿ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಅನ್ಯ ಕಾರಣ ಹೇಳದೇ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದ್ದೇವೆ

–ರಾಜಪ್ಪ ಎಇಇ ಪಿಡಬ್ಲೂಡಿ ಉಪ ವಿಭಾಗ ಹೂವಿನಹಡಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.