ADVERTISEMENT

ಮಾಗಣೆ ರಸ್ತೆಗಳಿಗೆ ₹48 ಕೋಟಿ ಮಂಜೂರು: ಶಾಸಕ ಎಚ್‌.ಆರ್. ಗವಿಯಪ್ಪ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 5:22 IST
Last Updated 14 ನವೆಂಬರ್ 2025, 5:22 IST
ಹೊಸಪೇಟೆಯಲ್ಲಿ ಗುರುವಾರ ನಡೆದ ಬಾಳೆ ಕೃಷಿ ಕುರಿತ ತಾಂತ್ರಿಕ ಸಂವಾದ ಕಾರ್ಯಕ್ರಮವನ್ನು ಶಾಸಕ ಎಚ್‌.ಆರ್‌.ಗವಿಯಪ್ಪ ಉದ್ಘಾಟಿಸಿದರು
ಹೊಸಪೇಟೆಯಲ್ಲಿ ಗುರುವಾರ ನಡೆದ ಬಾಳೆ ಕೃಷಿ ಕುರಿತ ತಾಂತ್ರಿಕ ಸಂವಾದ ಕಾರ್ಯಕ್ರಮವನ್ನು ಶಾಸಕ ಎಚ್‌.ಆರ್‌.ಗವಿಯಪ್ಪ ಉದ್ಘಾಟಿಸಿದರು   

ಹೊಸಪೇಟೆ (ವಿಜಯನಗರ): ‘ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರೈತರ ಹೊಲ, ಗದ್ದೆಗಳಿಗೆ ತೆರಳುವ ಮಾಗಣೆ ರಸ್ತೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಅವರು ₹1 ಸಾವಿರ ಕೋಟಿ ಮಂಜೂರು  ಮಾಡಿದ್ದು, ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಇದರಲ್ಲಿ ₹40 ಕೋಟಿ ಸಿಕ್ಕಿದೆ. ಹೆಚ್ಚುವರಿ ₹8 ಕೋಟಿಯನ್ನು ಒಳಮಾಗಣೆ ರಸ್ತೆಗಾಗಿ ಮಂಜೂರು ಮಾಡಿದ್ದಾರೆ’ ಎಂದು ಶಾಸಕ ಎಚ್‌.ಆರ್. ಗವಿಯಪ್ಪ ಹೇಳಿದರು.

ಗುರುವಾರ ಇಲ್ಲಿನ ರೋಟರಿ ಭವನದಲ್ಲಿ ವಿಜ್ಞಾನಿಗಳ ಉಪಸ್ಥಿತಿಯಲ್ಲಿ ನಡೆದ ಬಾಳೆ ಬೆಳೆಯ ತಾಂತ್ರಿಕ ಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಈ ₹40 ಕೋಟಿ ಅನುದಾನದಲ್ಲಿ 34 ಕಿ.ಮೀ. ಮಾಗಣೆ ರಸ್ತೆ ಹಾಗೂ ₹8 ಕೋಟಿ ಅನುದಾನದಲ್ಲಿ 10 ಕಿ.ಮೀ. ಒಳಮಾಗಣೆ ರಸ್ತೆ ಅಭಿವೃದ್ಧಿಪಡಿಸಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಏತ ನೀರಾವರಿ ಮೂಲಕ ಒಣಭೂಮಿಗೆ ನೀರು ಹರಿಸುವುದಕ್ಕೆ ₹15 ಕೋಟಿ ಮೊತ್ತದ ಕಾಮಗಾರಿಗಳಿಗೆ ಮಂಜೂರಾತಿ ಸಿಕ್ಕಿದೆ. ಸೀತಾರಾಮ ತಾಂಡಾ, ಪಿ.ಕೆ.ಹಳ್ಳಿ, ಗಾದಿಗನೂರು ಸಹಿತ ಕೆಲವೆಡೆ ಈ ಯೋಜನೆಗಳು ಬರಲಿವೆ. ಬಳಿಕ ಹೆಚ್ಚುವರಿಯಾಗಿ ₹10 ಕೋಟಿ ಲಭಿಸಲಿದೆ’ ಎಂದರು.

ADVERTISEMENT

ಬಸವಣ್ಣ ಕಾಲುವೆಗೆ ₹65 ಕೋಟಿ: ‘ಟಿ.ಬಿ. ಡ್ಯಾಂನಿಂದ ಅನಂತಶಯನಗುಡಿ ತನಕ ಬಸವಣ್ಣ ಕಾಲುವೆಗೆ ನಗರದ ಕಲುಷಿತ ನೀರು ಸೇರುವುದನ್ನು ತಡೆಯಲು ಎರಡೂ ಕಡೆಗಳಲ್ಲಿ ಚರಂಡಿ ನಿರ್ಮಿಸುವ ಯೋಜನೆಗೆ ಡಿ.ಕೆ. ಶಿವಕುಮಾರ್ ಅವರು ಸಮ್ಮತಿ ಸೂಚಿಸಿದ್ದಾರೆ. ಆರು ತಿಂಗಳ ಬಳಿಕ ಇದಕ್ಕೆ ಒಪ್ಪಿಗೆ ಸಿಕ್ಕಿದ್ದು, ₹65 ಕೋಟಿ ಮಂಜೂರಾಗಿದೆ. ಶೀಘ್ರ ಟೆಂಡರ್ ಕರೆಯಲಾಗುವುದು. ಈ ಕಾಮಗಾರಿ ನಡೆದ ಬಳಿಕ ಮಲಿನ ನೀರು ಬಸವ ಕಾಲುವೆಗೆ ಸೇರದೆ ಕೃಷಿಕರಿಗೆ ಜಮೀನುಗಳಿಗೆ ಶುದ್ಧ ನೀರು ಲಭಿಸಲಿದೆ’ ಎಂದು ಶಾಸಕ ಗವಿಯಪ್ಪ ಹೇಳಿದರು.

ಬಾಳೆಯತ್ತ ಕೊನೆಗೂ ಗಮನ: ‘ಈ ಭಾಗದಲ್ಲಿ ಬಾಳೆ ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ, ಆದರೆ ಇದುವರೆಗೆ ಇಂತಹ ತಾಂತ್ರಿಕ ಕಾರ್ಯಾಗಾರಗಳು ಇಲ್ಲಿ ನಡೆದಿಲ್ಲ. ಇದೇ ಕಾರಣಕ್ಕೆ ಬೆಂಗಳೂರಿಗೆ ಹೋಗುವ ನನ್ನ ಕಾರ್ಯಕ್ರಮವನ್ನು ಸ್ವಲ್ಪ ಮುಂದೂಡಿ ಇಲ್ಲಿಗೆ ಬಂದಿದ್ದೇನೆ. ಇದು ನಿಜಕ್ಕೂ ಅತ್ಯಂತ ಉಪಯುಕ್ತ ಕಾರ್ಯಕ್ರಮ. ಬಾಳೆ ತೋಟಗಳಿರುವ ಕಡೆಗಳಲ್ಲಿ ಇಂತಹ ಕಾರ್ಯಕ್ರಮ ನಡೆಸಿದ್ದರೆ ಇನ್ನಷ್ಟು ಪ್ರಯೋಜನ ಆಗುತ್ತಿತ್ತು’ ಎಂದು ಶಾಸಕರು ಹೇಳಿದರು.

‘ಗಾದಿಗನೂರು, ಪಿ.ಕೆ.ಹಳ್ಳಿ ಮೊದಲಾದ ಕಡೆಗಳಲ್ಲಿ ಮಳೆಗಾಲದಲ್ಲಿ ಮಾತ್ರ ಬಾಳೆ ಬೆಳೆಯಲಾಗುತ್ತಿದೆ. ಉಳಿದ ತಿಂಗಳಲ್ಲಿ ನೀರಿನ ಕೊರತೆಯಿಂದ ಕೃಷಿ ಸಾಧ್ಯವಾಗುತ್ತಿಲ್ಲ. ಇಂತಲ್ಲಿಗೆ ಸಣ್ಣ ನೀರಾವರಿಗೆ ವ್ಯವಸ್ಥೆ ಕಲ್ಪಿಸಿದರೆ ವರ್ಷ ಪೂರ್ತಿ ಬಾಳೆ ಕೃಷಿ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿದೆ’ ಎಂದರು.

ಮುನಿರಾಬಾದ್ ತೋಟಗಾರಿಕೆ ಇಲಾಖೆಯ ವಿಜ್ಞಾನಿ ಶಾಂತಪ್ಪ ತಿರ್ಕಣ್ಣನವರ್, ವಿಜ್ಞಾನಿಗಳಾದ ಕಾಂತರಾಜ್, ರಘುನಾಥ್ ಆರ್., ಸಣ್ಣ ಪಂಪಣ್ಣ, ಚೇತನ್ ಟಿ., ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಪಿ.ಜಿ. ಚಿದಾನಂದಪ್ಪ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ವಿ.ಸುಧೀರ್, ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಸ್. ದಾದಾಪೀರ್ ಇದ್ದರು.

ಆನಂದ್ ಸಿಂಗ್ ಕೆಲಸಕ್ಕೆ ಮೆಚ್ಚುಗೆ

‘ಕ್ಷೇತ್ರದ 20ಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯನ್ನು ₹243 ಕೋಟಿ ವೆಚ್ಚದಲ್ಲಿ ಕೈಗೊಳ್ಳುವ ಮೂಲಕ ಮಾಜಿ ಸಚಿವ ಆನಂದ್ ಸಿಂಗ್ ಉತ್ತಮ ಕೆಲಸ ಮಾಡಿದ್ದಾರೆ. ಇಂದು ಈ ಕೆರೆಗಳಿಗೆ ನೀರು ಹರಿಯುತ್ತಿದೆ ಅಂತರ್ಜಲ ವೃದ್ಧಿಯಾಗುತ್ತಿದೆ. ಇದು ನಿಜಕ್ಕೂ ರೈತರಿಗಾಗಿ ಮಾಡಿದ ಉತ್ತಮ ಕೆಲಸವಾಗಿದೆ’ ಎಂದು ಶ್ಲಾಘಿಸಿದ ಶಾಸಕ ಗವಿಯಪ್ಪ ಶ್ಲಾಘಿಸಿದರು. ‘ತುಂಗಭದ್ರಾ ಜಲಾಶಯದಿಂದ ನೇರವಾಗಿ ಕ್ಷೇತ್ರದ ರೈತರಿಗೆ ನೀರು ಹರಿಸುವ ಯೋಜನೆ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಕೃಷಿಕರು ತಮ್ಮ ಅಗತ್ಯಗಳನ್ನು ತಿಳಿಸಿದರೆ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ವಿವರವಾದ ಯೋಜನಾ ವರದಿ ಸಿದ್ಧಪಡಿಸುವುದು ಸಾಧ್ಯವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.