ADVERTISEMENT

ಕನ್ನಡ ಮತ್ತು ಸಂಸ್ಕೃತ ಒಂದೇ ನಾಣ್ಯದ ಎರಡು ಮುಖ: ಕೆ.ಇ.ದೇವನಾಥನ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 16:10 IST
Last Updated 26 ನವೆಂಬರ್ 2021, 16:10 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಕೆ.ಇ.ದೇವನಾಥನ್, ಸಿರಿಗೇರಿ ತರಬಾಳು ಜಗದ್ಗುರು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಕುಲಪತಿ ಪ್ರೊ. ಸ.ಚಿ. ರಮೇಶ ಉದ್ಘಾಟಿಸಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಕೆ.ಇ.ದೇವನಾಥನ್, ಸಿರಿಗೇರಿ ತರಬಾಳು ಜಗದ್ಗುರು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಕುಲಪತಿ ಪ್ರೊ. ಸ.ಚಿ. ರಮೇಶ ಉದ್ಘಾಟಿಸಿದರು   

ಹೊಸಪೇಟೆ(ವಿಜಯನಗರ): ‘ನಾಡಗೀತೆಯಲ್ಲಿ ಅನೇಕ ಸಂಸ್ಕೃತ ಪದಗಳಿವೆ. ಕನ್ನಡ ಮತ್ತು ಸಂಸ್ಕೃತ ಭಾಷೆಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ’ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಕೆ.ಇ.ದೇವನಾಥನ್ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಪುರಂದರದಾಸ ಅಧ್ಯಯನ ಪೀಠ, ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಭಾಷಾ ಸಾಹಿತ್ಯ ವಿಭಾಗದ ಸಹಯೋಗದಲ್ಲಿ ಶುಕ್ರವಾರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ-ಸಂಸ್ಕೃತ ಭಾಷಾ ಸಾಹಿತ್ಯ ಸಂಬಂಧಗಳು’ ವಿಷಯ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಸಂಸ್ಕೃತ ಭಾಷೆ ಹಲವು ಭಾಷೆಗಳ ತಾಯಿ. ಅನಾದಿ ಕಾಲದಿಂದಲೂ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಸಾಹಿತ್ಯ, ಸಂಸ್ಕೃತಿಯ ಅವಿನಾಭಾವ ಸಂಬಂಧ ಇದೆ’ ಎಂದು ಹೇಳಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಸಿರಿಗೇರಿ ತರಬಾಳು ಜಗದ್ಗುರು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಪ್ರಾರಂಭದಿಂದಲೂ ಕನ್ನಡ ಮತ್ತು ಸಂಸ್ಕೃತ ಭಾಷೆಗಳದ್ದು ತಾಯಿ– ಮಗಳ ಸಂಬಂಧವಾಗಿದೆ. ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆ ಯುವಜನತೆ ಬಾಯಲ್ಲಿ ಹರಿದ ಬಟ್ಟೆಯಂತಾಗಿದೆ. ಕನ್ನಡ ಭಾಷೆಯಲ್ಲಿ ಪದಗಳಿದ್ದರೂ ಅನ್ಯಭಾಷೆ ಪದಗಳ ವ್ಯಾಮೋಹ ಹೆಚ್ಚಿದೆ’ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ.ರಮೇಶ ಮಾತನಾಡಿ, ‘ಕನ್ನಡದ ಮೇಲೆ ಸಂಸ್ಕೃತ ಭಾಷೆಯು ಅಪಾರ ಪ್ರಭಾವವನ್ನು ಬೀರಿದೆ. ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಉಳಿಸುವಲ್ಲಿ ಕನ್ನಡ ವಿಶ್ವವಿದ್ಯಾಲಯ ಸದಾ ಸಿದ್ಧವಿರುತ್ತದೆ’ ಎಂದರು.

ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ, ಕಾರ್ಯಕ್ರಮದ ಸಂಚಾಲಕ ಮಾಧವ ಪೆರಾಜೆ, ಭಾಷಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಸುಚೇತಾ ನವರತ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.