ADVERTISEMENT

ಎಎಪಿ, ಹೊಸರಂಗಕ್ಕೆ ಜನರ ಒಲವು: ಟಿ.ಎನ್‌. ಪ್ರಕಾಶ್‌ ಕಮ್ಮರಡಿ 

ಸಮಾಜವಾದಿ ವೇದಿಕೆಯ ಸ್ವತಂತ್ರ ಅಧ್ಯಯನ ವರದಿಯಿಂದ ಬಹಿರಂಗ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 9:51 IST
Last Updated 4 ಮಾರ್ಚ್ 2023, 9:51 IST
ಸಮಾಜವಾದಿ ವೇದಿಕೆಯ ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಅವರು ‘ಮುಕ್ತ ಮತದಾನ, ಸಮರ್ಥ ಸರ್ಕಾರ’ ಸ್ವತಂತ್ರ ಅಧ್ಯಯನ ವರದಿ ಬಿಡುಗಡೆಗೊಳಿಸಿದರು.
ಸಮಾಜವಾದಿ ವೇದಿಕೆಯ ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಅವರು ‘ಮುಕ್ತ ಮತದಾನ, ಸಮರ್ಥ ಸರ್ಕಾರ’ ಸ್ವತಂತ್ರ ಅಧ್ಯಯನ ವರದಿ ಬಿಡುಗಡೆಗೊಳಿಸಿದರು.   

ಹೊಸಪೇಟೆ (ವಿಜಯನಗರ): ‘ರಾಜ್ಯದಲ್ಲಿ ಅಧಿಕಾರ ನಡೆಸಿರುವ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬಗ್ಗೆ ಜನ ಭರವಸೆ ಕಳೆದುಕೊಂಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ‘ಆಮ್‌ ಆದ್ಮಿ’ ಪಕ್ಷ (ಎಎಪಿ), ಹೊಸರಂಗದ ಬಗ್ಗೆ ಹೆಚ್ಚಿನ ಜನ ಒಲವು ತೋರಿಸಿದ್ದಾರೆ’ ಎಂದು ಸಮಾಜವಾದಿ ವೇದಿಕೆಯ ಟಿ.ಎನ್‌. ಪ್ರಕಾಶ್‌ ಕಮ್ಮರಡಿ ತಿಳಿಸಿದರು.

ವೇದಿಕೆಯು ನವದೆಹಲಿಯ ಜನತಾಂತ್ರಿಕ ಸಮಾಜವಾದ ಸಂಘಟನೆಯ ಸಹಭಾಗಿತ್ವದಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಸಾವಿರ ಸ್ವಯಂ ಸೇವಕರ ನೆರವಿನೊಂದಿಗೆ ಅಷ್ಟೇ ಜನರ ಅಭಿಪ್ರಾಯ ಸಂಗ್ರಹಿಸಿದ್ದು, ಅದರಿಂದ ಈ ವಿಚಾರ ಗೊತ್ತಾಗಿದೆ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು. ಇದೇ ವೇಳೆ ಅವರು ‘ಮುಕ್ತ ಮತದಾನ, ಸಮರ್ಥ ಸರ್ಕಾರ’ ಸ್ವತಂತ್ರ ಅಧ್ಯಯನ ವರದಿ ಬಿಡುಗಡೆಗೊಳಿಸಿದರು.

2022ರ ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ಜನರಿಗೆ 45 ಪ್ರಶ್ನೆಗಳನ್ನು ಕೇಳಿ ಅವರ ಅಭಿಪ್ರಾಯ ದಾಖಲಿಸಲಾಗಿದೆ. ರಾಜ್ಯದ ಎಲ್ಲ ವರ್ಗ, ವಯೋಮಾನದವರ ಅಭಿಪ್ರಾಯ ಪಡೆಯಲಾಗಿದೆ. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಭ್ರಷ್ಟಾಚಾರರಹಿತ ಆಡಳಿತ ಕೊಡಲು ಸಾಧ್ಯವಿಲ್ಲ. ಎಎಪಿ ಅಥವಾ ಹೊಸರಂಗದಿಂದ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅದರಲ್ಲೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮುಗಲಭೆ, ಭ್ರಷ್ಟಾಚಾರದಿಂದ ಜನ ಬೇಸತ್ತು ಹೋಗಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ ಎಂದು ತಿಳಿಸಿದರು.

ಮುಂದಿನ ಮುಖ್ಯಮಂತ್ರಿ ಯಾರಾಗಬೇಕು, ಸಮನ್ವಯ ನಾಯಕರು ಯಾರೆಂದು ಕೇಳಿದ ಪ್ರಶ್ನೆಗೆ ಹೆಚ್ಚಿನ ಜನ ಸಿದ್ದರಾಮಯ್ಯ ಅವರ ಹೆಸರು ಹೇಳಿದ್ದಾರೆ. ನಂತರದ ಸ್ಥಾನದಲ್ಲಿ ಬಸವರಾಜ ಬೊಮ್ಮಾಯಿ, ಬಿ.ಎಸ್‌. ಯಡಿಯೂರಪ್ಪ, ಎಚ್‌.ಡಿ. ಕುಮಾರಸ್ವಾಮಿ ಇದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಸ್ವಚ್ಛ ಆಡಳಿತ, ಕೋಮು ಸೌಹಾರ್ದತೆ ಕಾಪಾಡುವ ಸರ್ಕಾರ ಇರಬೇಕೆಂದು ಹೆಚ್ಚಿನವರು ತಿಳಿಸಿದ್ದಾರೆ. ಜನರ ಭಾವನೆಗಳೇನು? ಅವರಿಗೆ ಎಂತಹ ಆಡಳಿತ ಬೇಕು ಎನ್ನುವ ಸಮಗ್ರ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಇತರೆ ಪಕ್ಷಗಳ ಮುಖಂಡರಿಗೆ ಸಲ್ಲಿಸಲಾಗಿದೆ. ಇವರಲ್ಲಿ ಅಧಿಕಾರಕ್ಕೆ ಬಂದವರು ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ ಎಂದರು.

ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಆರ್ಥಿಕ ತಜ್ಞ ಜಿ.ವಿ. ಸುಂದರ್‌, ವೇದಿಕೆಯ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಕೊತಬಾಳ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಪ್ಪಳ ಜಿಲ್ಲಾ ಅಧ್ಯಕ್ಷ ಭೀಮಸೇನ ಕಲಕೇರಿ ಹಾಜರಿದ್ದರು.

‘ದಿಕ್ಕು ತಪ್ಪಿಸುತ್ತಿರುವ ಎಲೆಕ್ಟ್ರಾನಿಕ್‌ ಮಾಧ್ಯಮಗಳು’
‘ಸರ್ಕಾರದ ನೀತಿ ನಿರ್ಧಾರಗಳ ವಿಚಾರಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್‌ ಮಾಧ್ಯಮಗಳು ಜನರ ದಿಕ್ಕು ತಪ್ಪಿಸುತ್ತಿವೆ. ಈಗಲೂ ಜನರಿಗೆ ದಿನಪತ್ರಿಕೆಗಳ ಮೇಲೆ ಹೆಚ್ಚಿನ ವಿಶ್ವಾಸ ಇದೆ ಎನ್ನುವುದು ಸಮೀಕ್ಷೆಯಿಂದ ಗೊತ್ತಾಗಿದೆ’ ಎಂದು ಟಿ.ಎನ್‌. ಪ್ರಕಾಶ್‌ ಕಮ್ಮರೆಡ್ಡಿ ತಿಳಿಸಿದರು.

ಬೆಲೆ ಏರಿಕೆ, ಹಣದುಬ್ಬರದಿಂದ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ ಎಂದು ಶೇ 91ರಷ್ಟು ಜನ ತಿಳಿಸಿದ್ದಾರೆ. ಆದರೆ, ಈ ವಿಚಾರಗಳು ಚುನಾವಣೆ ಸಂದರ್ಭದಲ್ಲಿ ಮುಖ್ಯ ವಿಷಯವಾಗುವುದಿಲ್ಲ. ಮತೀಯವಾದ, ಸುಳ್ಳು ಸುದ್ದಿಗಳೇ ಹೆಚ್ಚಾಗಿ ವಿಜೃಂಭಿಸುತ್ತವೆ ಎಂದೂ ಜನ ಅಭಿಪ್ರಾಯಪಟ್ಟಿದ್ದಾರೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT