ADVERTISEMENT

ಹೊಸಪೇಟೆ | ರಾತ್ರಿ ಏಕಾಏಕಿ ನಾಮಫಲಕ ತೆರವು: ಸಚಿವ ಆನಂದ್‌ ಸಿಂಗ್‌ ಕಚೇರಿ ಬಂದ್

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 17:02 IST
Last Updated 10 ಆಗಸ್ಟ್ 2021, 17:02 IST
ಹೊಸಪೇಟೆಯ ರಾಣಿಪೇಟೆಯಲ್ಲಿನ ಸಚಿವ ಆನಂದ್‌ ಸಿಂಗ್‌ ಅವರ ಕಚೇರಿ ಮೇಲಿನ ನಾಮಫಲಕ ತೆರವುಗೊಳಿಸಿರುವುದು
ಹೊಸಪೇಟೆಯ ರಾಣಿಪೇಟೆಯಲ್ಲಿನ ಸಚಿವ ಆನಂದ್‌ ಸಿಂಗ್‌ ಅವರ ಕಚೇರಿ ಮೇಲಿನ ನಾಮಫಲಕ ತೆರವುಗೊಳಿಸಿರುವುದು   

ಹೊಸಪೇಟೆ (ವಿಜಯನಗರ): ನಗರದ ರಾಣಿಪೇಟೆಯಲ್ಲಿನ ಸಚಿವ ಆನಂದ್‌ ಸಿಂಗ್‌ ಅವರ ಕಚೇರಿಯನ್ನು ಮಂಗಳವಾರ ರಾತ್ರಿ ದಿಢೀರ್‌ ಬಂದ್‌ ಮಾಡಿ, ಅದರ ನಾಮಫಲಕ ತೆರವುಗೊಳಿಸಲಾಗಿದೆ.

ಬುಧವಾರದಿಂದ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸದಿರಲು ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ. ಇಲ್ಲಿನ ಪಟೇಲ್‌ ನಗರದಲ್ಲಿನ ವೇಣುಗೋಪಾಲ ದೇವಸ್ಥಾನದಲ್ಲಿ ದೇವರ ಮೂರ್ತಿಗಳ ಪ್ರತಿಷ್ಠಾಪನೆ ನಿಮಿತ್ತ ಎರಡು ದಿನಗಳಿಂದ ಹಗಲಿರುಳು ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಆನಂದ್‌ ಸಿಂಗ್‌ ಹಾಗೂ ಅವರ ಕುಟುಂಬದವರು ಪಾಲ್ಗೊಂಡಿದ್ದಾರೆ.

ಕಚೇರಿ ಬಂದ್‌ ಮಾಡಿರುವ ಕುರಿತು ಆನಂದ್‌ ಸಿಂಗ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಈ ಬಗ್ಗೆ ನಾನೇನೂ ಪ್ರತಿಕ್ರಿಯಿಸಲಾರೆ. ಏನು ಹೇಳಬೇಕಿತ್ತೋ ಅದನ್ನು ಮುಖ್ಯಮಂತ್ರಿಯವರಿಗೆ ಹೇಳಿರುವೆ’ ಎಂದಷ್ಟೇ ಹೇಳಿದ್ದಾರೆ.

‘ಯಾವುದೇ ಕಾರಣಕ್ಕೂ ನನ್ನ ನಿಲುವಿನಿಂದ ಹಿಂದೆ ಸರಿಯಲಾರೆ. ಅಗತ್ಯಬಿದ್ದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವೆ. ಮುಂದೆನಾಗುತ್ತೋ ನೋಡಿಯೋ ಬಿಡುತ್ತೇನೆ’ ಎಂದು ಆನಂದ್‌ ಸಿಂಗ್‌ ಅವರು ಅವರ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಬೇಡಿಕೆ ಈಡೇರದಿದ್ದರೆ ಆ. 15ರಂದು ಧ್ವಜಾರೋಹಣ ಕೂಡ ಮಾಡದಿರಲು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.

ಆನಂದ್‌ ಸಿಂಗ್‌ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ, ಜೀವಿಶಾಸ್ತ್ರ ಖಾತೆ ನೀಡಲಾಗಿದೆ. ಆ ಖಾತೆ ಬದಲಿಸಬೇಕೆನ್ನುವುದು ಅವರ ಬೇಡಿಕೆ. ಬೇಡಿಕೆ ಈಡೇರುವವರೆಗೆ ಯಾವುದೇ ಕಾರಣಕ್ಕೂ ಖಾತೆಗಳ ಜವಾಬ್ದಾರಿ ವಹಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ.

ಕ್ರೇನ್‌ನಿಂದ ಕಚೇರಿಯ ನಾಮಫಲಕ ತೆರವುಗೊಳಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.