ADVERTISEMENT

‘ಸ್ವದೇಶ ದರ್ಶನ್‌’ ಯೋಜನೆ: ವಿಶ್ವಪ್ರಸಿದ್ಧ ಹಂಪಿಗೆ ಮತ್ತೊಂದು ಗರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ಜನವರಿ 2023, 19:30 IST
Last Updated 6 ಜನವರಿ 2023, 19:30 IST
ಹಂಪಿ ಕಲ್ಲಿನ ರಥ
ಹಂಪಿ ಕಲ್ಲಿನ ರಥ   

ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿಯ ಮುಡಿಗೆ ಮತ್ತೊಂದು ಗರಿ ಬಂದಿದೆ.

ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ‘ಸ್ವದೇಶ ದರ್ಶನ್‌–2’ ಯೋಜನೆಗೆ ರಾಜ್ಯದ ಎರಡು ಸ್ಥಳಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಹಂಪಿ ಕೂಡ ಸೇರಿದೆ. ಸಾಂಸ್ಕೃತಿಕ ನಗರಿ ಮೈಸೂರಿಗೂ ಇದರಲ್ಲಿ ಜಾಗ ಸಿಕ್ಕಿದೆ.

ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ ದರ್ಶನ್‌ ಯೋಜನೆಯ ಅಡಿಯಲ್ಲಿ ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 36 ಪ್ರಸಿದ್ಧ ಹಾಗೂ ಮಹತ್ವದ ಸ್ಥಳಗಳನ್ನು ಈ ಯೋಜನೆಗೆ ಆಯ್ಕೆ ಮಾಡಿದೆ. ಗುರುವಾರ 36 ಸ್ಥಳಗಳ ಪಟ್ಟಿ ಬಿಡುಗಡೆಗೊಳಿಸಿದೆ. ಇದರೊಂದಿಗೆ ಯೋಜನೆಯಡಿ ಹಂಪಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ನೆರವಾಗಲಿದೆ.

ADVERTISEMENT

ಹಂಪಿಗೆ ನಿತ್ಯ ದೇಶ–ವಿದೇಶಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ, ಪ್ರವಾಸಿಗರಿಗೆ ಕನಿಷ್ಠ ಸೌಕರ್ಯಗಳಿಲ್ಲ. ಅದನ್ನು ನೀಗಿಸಬೇಕೆಂಬ ಕೂಗು ಅನೇಕ ವರ್ಷಗಳಿಂದ ಇದೆ. ಆದರೆ, ಅದು ರಾಜಕೀಯ ಭರವಸೆಯಾಗಿಯೇ ಉಳಿದಿದೆ. ‘ಸ್ವದೇಶ ದರ್ಶನ್‌’ ಯೋಜನೆಯ ಅಡಿಯಲ್ಲಾದರೂ ಹಂಪಿಯ ಚಹರೆ ಬದಲಾಗುವುದೇ ನೋಡಬೇಕು?

ಈ ಕುರಿತು ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಸ್ಪೆಷಲ್‌ ಡೆಸ್ಟಿನೇಶನ್‌’ನಲ್ಲಿ ಹಂಪಿ ಸೇರಿಸಲು ಈ ಹಿಂದೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಆಗ ಯೋಜನೆಯನ್ನೇ ರದ್ದುಪಡಿಸಲಾಗಿತ್ತು. ಅನಂತರ ಸ್ವದೇಶ ದರ್ಶನ್‌ ಅಡಿ ಪರಿಗಣಿಸಲು ಕೋರಲಾಗಿತ್ತು. ಈಗ ಅದರಲ್ಲಿ ಸೇರ್ಪಡೆ ಮಾಡಿರುವುದಕ್ಕೆ ಬಹಳ ಖುಷಿಯಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಯೋಜನೆಯ ಪ್ರಕಾರ, ಹಂಪಿಯಲ್ಲಿ ಸಾರ್ವಜನಿಕರಿಗೆ ಬೇಕಾದ ಕುಡಿಯುವ ನೀರು, ಶೌಚಾಲಯ, ನಡಿಗೆ ಪಥ, ಸ್ವಚ್ಛತೆ, ಬೆಳಕು, ತಂಗಲು ವ್ಯವಸ್ಥೆ ಸೇರಿದಂತೆ ಇತರೆ ಸೌಕರ್ಯಗಳನ್ನು ಕಲ್ಪಿಸಲು ಸಹಾಯವಾಗುತ್ತದೆ. ಆದರೆ, ಸೇತುವೆ ಸೇರಿದಂತೆ ಇತರೆ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.