ADVERTISEMENT

ನಾನು ಅಪರಾಧ ಮಾಡಿಲ್ಲ, ರಾಜೀನಾಮೆ ಕೊಡಲ್ಲ: ಆನಂದ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 12:58 IST
Last Updated 3 ಸೆಪ್ಟೆಂಬರ್ 2022, 12:58 IST
ಆನಂದ್‌ ಸಿಂಗ್‌
ಆನಂದ್‌ ಸಿಂಗ್‌   

ಹೊಸಪೇಟೆ (ವಿಜಯನಗರ): ‘ನಾನು ಯಾವುದೇ ರೀತಿಯ ಅಪರಾಧ ಮಾಡಿಲ್ಲ, ರಾಜೀನಾಮೆ ಕೊಡುವುದಿಲ್ಲ’ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್‌ ಸಿಂಗ್‌ ಹೇಳಿದರು.

ನನ್ನ ವಿರುದ್ಧ ಬೆದರಿಕೆ, ಜಾತಿ ನಿಂದನೆ ಆರೋಪ ಮಾಡಿದ್ದಾರೆ. ಅದನ್ನು ಸಾಕ್ಷ್ಯಗಳ ಸಮೇತ ಋಜುವಾತು ಪಡಿಸಲಿ. ಈ ಕುರಿತು ಮುಖ್ಯಮಂತ್ರಿ ಕೂಡ ನನ್ನೊಂದಿಗೆ ಮಾತನಾಡಿದ್ದಾರೆ. ಇರುವ ಸಂಗತಿಯನ್ನು ಅವರಿಗೂ ವಿವರಿಸಿರುವೆ. ಇಷ್ಟರಲ್ಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ನನ್ನ ವಿರುದ್ಧ ಇದುವರೆಗೆ ಮಾಡಿರುವುದೆಲ್ಲ ಆರೋಪಗಳಷ್ಟೇ. ಪತ್ರಿಕೆಗಳಲ್ಲಿ ಬಂದಿದ್ದನ್ನು ತೋರಿಸಿ ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪನವರು ಆರೋಪಿಸಿದ್ದಾರೆ. ಒಂದುವೇಳೆ ಆನಂದ್‌ ಸಿಂಗ್‌ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದರೆ ಜಿಲ್ಲಾಧಿಕಾರಿ, ಕಂದಾಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರದವರು ದಾಖಲೆ ಸಮೇತ ಕೊಡಲಿ. ಒಂದುವೇಳೆ ನನ್ನ ಮನೆ ಸರ್ಕಾರಿ ಜಾಗದಲ್ಲಿದ್ದರೆ ಅವರೇ ನಿಂತು ಮಾರ್ಕಿಂಗ್‌ ಮಾಡಿಸಲಿ. ನಾನೇ ಎದುರು ನಿಂತು ತೆಗೆಸುತ್ತೇನೆ ಎಂದರು.

ADVERTISEMENT

ಉಗ್ರಪ್ಪನವರು ಹಿರಿಯರು. ಅವರು ವೃತ್ತಿಯಲ್ಲಿ ವಕೀಲರು. ದಾಖಲೆ ಸಮೇತ ನ್ಯಾಯಾಲಯದಲ್ಲಿ ಮಾತನಾಡಬೇಕು. ನಡೆದಿರುವ ಕಥೆಗಳನ್ನು ಉದಾಹರಣೆ ಕೊಡಬಹುದು. ಅವರು ದಾಖಲೆಗಳ ಸಮೇತ ಮಾತನಾಡಿಲ್ಲ. ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ನನ್ನ ವಿರುದ್ಧದ ಆರೋಪಗಳ ಪಟ್ಟಿ ಹಿಡಿದುಕೊಂಡು ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಉಲ್ಲೇಖಿಸಿ ಮಾತನಾಡಿದ್ದಾರೆ ಎಂದು ಹೇಳಿದರು.

ನನ್ನ ರಜಪೂತ ಸಮಾಜ ಕೂಡ ಸಣ್ಣದು. ನಾವು ಕೂಡ ಅಲ್ಪಸಂಖ್ಯಾತರೇ. ನಮ್ಮನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಕಾನೂನಿನಲ್ಲಿ ಅವಕಾಶವಿದ್ದರೆ ನನ್ನನ್ನು ಬಂಧಿಸಬಹುದು ಎಂದು ಎಸ್ಪಿಗೆ ಹೇಳಿರುವೆ. ‘ಪೆಟ್ರೋಲ್‌ ಸುರಿದು ಸುಟ್ಟುಹಾಕುತ್ತೇನೆ’ ಎಂದು ಸಾಮಾನ್ಯ ವ್ಯಕ್ತಿಯೂ ಮಾತಾಡುವುದಿಲ್ಲ. ನಾನು ಜವಾಬ್ದಾರಿ ಸ್ಥಾನದಲ್ಲಿರುವವನು. ಅದನ್ನು ಹೇಗೆ ಮಾತಾಡುವೆ? ಕೈ ಕೈ ಮಿಲಾಯಿಸಿದರೂ ಆ ರೀತಿ ಹೇಳಲ್ಲ ಎಂದು ಹೇಳಿದರು.

ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಅನೇಕರು ಸರ್ಕಾರಿ ಜಾಗಗಳಲ್ಲಿ ವಾಸಿಸುತ್ತಿದ್ದಾರೆ. ಆರೋಪ ಮಾಡುತ್ತಿರುವವರಿಗೆ ಅದು ಕಾಣುತ್ತಿಲ್ಲವೇ? ಬಳ್ಳಾರಿ ಅಖಂಡ ಜಿಲ್ಲೆಯಿದ್ದಾಗ ಉಗ್ರಪ್ಪನವರು ಜಿಲ್ಲಾಧಿಕಾರಿಗೆ ಪತ್ರ ಬರೆದು, ಪಾರ್ಕ್‌ ಜಾಗದಲ್ಲಿ ನಮ್ಮವರೇ ಇದ್ದಾರೆ ಎಂದು ಹೇಳಿದ್ದರು. ಈಗ ಬೇರೆಯವರು ಬೆಂಕಿ ಹಚ್ಚಿದ ನಂತರ ಅದರ ಮೇಲೆ ಕಾಂಗ್ರೆಸ್ಸಿಗರು ರೊಟ್ಟಿ ಕಾಯಿಸಿಕೊಳ್ಳುತ್ತಿದ್ದಾರೆ. ಕೊನೆಗೆ ರೊಟ್ಟಿ ತಿನ್ನುವವರು ಯಾರು ಎನ್ನುವುದು ನೋಡಬೇಕು ಎಂದು ಮಾರ್ಮಿಕವಾಗಿ ನುಡಿದರು.

ಭೂಗಳ್ಳರಿಂದ ನನ್ನ ಮೇಲೆ ದಾಳಿ

ಇದು ಚುನಾವಣೆಗೆ ಸಂಬಂಧಿಸಿದ ವಿಷಯವೇ ಅಲ್ಲ. ರಾಜಕೀಯ ಪಿತೂರಿಯೂ ಅಲ್ಲ. ಭೂಗಳ್ಳರಿಂದ ನನ್ನ ಮೇಲೆ ನಡೆದಿರುವ ದಾಳಿ. ನನ್ನನ್ನು ತಡೆಯಲು ಭೂಗಳ್ಳರು ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ನನ್ನ ವಿರುದ್ಧ ಠಾಣೆಗೆ ದೂರು ಕೊಟ್ಟಿರುವ ವ್ಯಕ್ತಿ ವಾಸವಿರುವ ಜಾಗ ಆತನಿಗೆ ಸೇರಿದ್ದಲ್ಲ. ಮಡಿವಾಳ ಸಮಾಜದ್ದು. ನನ್ನ ವಿರುದ್ಧ ದೂರು ಕೊಟ್ಟರೆ ಆ ಜಾಗಕ್ಕೆ ಆನಂದ್‌ ಸಿಂಗ್‌ ಕೈ ಹಾಕುವುದಿಲ್ಲ ಎಂದು ಹಾಗೆ ಮಾಡಿದ್ದಾರೆ. ಅವರ ಮನೆ ಬಳಿ ಜನ ನಿಂತಾಗ ನಾನು ಹೋಗಿ ಬಗೆಹರಿಸಿಕೊಳ್ಳಲು ಹೇಳಿದ್ದೆ. ಆದರೆ, ನನ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.