ADVERTISEMENT

ಕನ್ನಡ ವಿಶ್ವವಿದ್ಯಾಲಯ ಅನುದಾನಕ್ಕೆ ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯ

10 ರಂದು ವಿವಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2024, 10:10 IST
Last Updated 1 ಡಿಸೆಂಬರ್ 2024, 10:10 IST
<div class="paragraphs"><p>ಭೀಮಾಶಂಕರ ಪಾಟೀಲ್</p></div>

ಭೀಮಾಶಂಕರ ಪಾಟೀಲ್

   

ಹೊಸಪೇಟೆ (ವಿಜಯನಗರ): ಭಾಷೆಗಾಗಿಯೇ ಇರುವ ದೇಶದ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅನುದಾನ ನೀಡದೆ ಸತಾಯಿಸುತ್ತಿರುವುದನ್ನು ವಿರೋಧಿಸಿ  ಕ್ಯಾಂಪಸ್‌ನಲ್ಲಿ ಡಿ.10ರಂದು ಪ್ರತಿಭಟನೆ ನಡೆಸಲು ಕರ್ನಾಟಕ ನವನಿರ್ಮಾಣ ಸೇನೆ ನಿರ್ಧರಿಸಿದೆ.

ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ್ ಭಾನುವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ, ಈ ಹಿಂದೆ ಅಕ್ರಮ ಆಗಿದೆ ಎಂಬ ಕಾರಣ ನೀಡಿ ಅನುದಾನ ನೀಡದೆ ಇರುವುದು ಸರಿಯಲ್ಲ, ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ, ಆದರೆ ಏನೂ ತಪ್ಪು ಮಾಡದ ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಸರ್ಕಾರ ಚೆಲ್ಲಾಟ ಆಡಬಾರದು ಎಂದರು.

ADVERTISEMENT

‘ಜಿಲ್ಲೆ ಹಾಗೂ ಸುತ್ತಮುತ್ತಲಿಂದ ಜಿಲ್ಲೆಗಳಿಂದ ಸುಮಾರು 700 ಮಂದಿ ಹಾಗೂ ಇತರ ಜಿಲ್ಲೆಗಳು, ಕಾಸರಗೋಡಿನಿಂದಲೂ ಪ್ರತಿಭಟನೆಗೆ ಜನರು ಬರಲಿದ್ದಾರೆ. ಸುಮಾರು ಒಂದು ಸಾವಿರ ಮಂದಿ ಸೇರಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಒಂದಿಬ್ಬರು ಸಿನಿಮಾ ನಟ, ನಟಿಯರನ್ನು ಕರೆಸುವ ವಿಚಾರವೂ ಇದೆ. ಸರ್ಕಾರ ತಕ್ಷಣ ವಿಶ್ವವಿದ್ಯಾಲಯದ ರಕ್ಷಣೆಗೆ ಮುಂದಾಗಲೇಬೇಕು’ ಎಂದರು.

‘ಕೇವಲ 25 ಸಾವಿರದಷ್ಟು ಮಂದಿ ಮಾತ್ರ ಮಾತನಾಡುವ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸರ್ಕಾರ ₹350 ಕೋಟಿ ಅನುದಾನ ನೀಡುತ್ತದೆ, ಆದರೆ ಏಳು ಕೋಟಿ ಮಂದಿಯ ಅಸ್ಮಿತೆಯ ಸಂಕೇತವಾದ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅನುದಾನ ನೀಡದೆ ಅತಿಥಿ ಉಪನ್ಯಾಸಕರಿಗೆ, ತಾತ್ಕಾಲಿಕ ಸಿಬ್ಬಂದಿಗೆ ಸಂಬಳ ಕೊಡಲು ಸಾಧ್ಯವಾಗದ ಸ್ಥಿತಿ ಇದೆ. ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಸರ್ಕಾರ ಕಿವುಡಾಗಿದೆ. ಜಾತಿಯ ಆಧಾರದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳನ್ನು ನೋಡಿ, ತಮ್ಮ ಮೂಗಿನ ನೇರಕ್ಕೆ ಅನುದಾನ ನೀಡುವ ಧೋರಣೆಯನ್ನು ಸರ್ಕಾರ ತಳೆದಂತಿದೆ.  ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇಂತಹದ್ದಕ್ಕೆ ಆಸ್ಪದವೇ ಇರಬಾರದು’ ಎಂದು ಭೀಮಾಶಂಕರ ಪಾಟೀಲ್ ಹೇಳಿದರು.

ಕನ್ನಡಕ್ಕಾಗಿ ಭಿಕ್ಷೆ ಬೇಡುತ್ತೇವೆ: ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅನುದಾನ ನೀಡದಿದ್ದರೆ ಒಬ್ಬೊಬ್ಬ ಕನ್ನಡಿಗನಿಂದ ಒಂದೊಂದು ರೂಪಾಯಿ ಭಿಕ್ಷೆ ಸಂಪಾದಿಸಿ ದುಡ್ಡು ಒಟ್ಟುಗೂಡಿಸುವುದು ಸಹಿತ ಹಲವು ಯೋಜನೆಗಳನ್ನು ಸೇನೆ ರೂಪಿಸಿಕೊಂಡಿದೆ ಎಂದರು.

‘ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂಬ ಕಾರಣದಿಂದಲೇ ಈ ಕನ್ನಡ ವಿಶ್ವವಿದ್ಯಾಲಯ 1991ರಲ್ಲಿ  ಸ್ಥಾಪನೆಗೊಂಡಿತ್ತು, ದಶಕದ ಹಿಂದೆಯೇ ಶಾಸ್ತ್ರೀಯ ಸ್ಥಾನಮಾನವೂ ದೊರೆಯಿತು, ಆದರೆ ಶಾಸ್ತ್ರೀಯ ಅಧ್ಯಯನ ಕೇಂದ್ರ ಮೈಸೂರಿನಲ್ಲಿ ಸ್ಥಾಪನೆಗೊಂಡಿತು, ಅದನ್ನು ಹಂಪಿ ವಿಶ್ವವಿದ್ಯಾಲಯದ ಆವರಣದಲ್ಲೇ ಸ್ಥಾಪಿಸಬೇಕಿತ್ತು. ತಮಿಳು ಭಾಷೆ ಮೂರು ಬಾರಿ ಕೇಂದ್ರದಿಂದ ಅನುದಾನ ಪಡೆದುಕೊಂಡು ಶಾಸ್ತ್ರೀಯ ಅಧ್ಯಯನ ಕೈಗೊಂಡರೆ, ಕನ್ನಡ ಭಾಷೆಗೆ ಬಂದ ಮೊದಲ ಕಂತನ್ನೇ ಸಮರ್ಪಕವಾಗಿ ಬಳಸಿಕೊಳ್ಳಲಾಗಿಲ್ಲ. ಇದೆಲ್ಲ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ. ಸದ್ಯ ಕನ್ನಡ ವಿಶ್ವವಿದ್ಯಾಲಯವನ್ನು ಆರ್ಥಿಕ ಸಂಕಷ್ಟದಿಂದ ಮೇಲೆತ್ತುವಂತೆ ಮಾಡುವುದು, ಅಗತ್ಯದ ಬೋಧಕರ ನೇಮಕಾತಿಗೆ ಒತ್ತಾಯಿಸುವುದೇ ಸೇನೆಯ ಉದ್ದೇಶ’ ಎಂದು ಭೀಮಾಶಂಕರ ಪಾಟೀಲ್‌ ವಿವರಿಸಿದರು.

ಕರ್ನಾಟಕ ನವನಿರ್ಮಾಣ ಸೇನೆ ಮುಖಂಡರಾದ ವಿಜಯಕುಮಾರ್, ಕಲ್ಲೇಶ್‌ ಪಾಟೀಲ್‌, ಕೀರ್ತಿ ಕುಮಾರ್‌, ತಿಪ್ಪೇಸ್ವಾಮಿ, ಶಂಭುಲಿಂಗ, ಹರ್ಷ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.