ADVERTISEMENT

Budget 2025 | ಹಂಪಿ ಕನ್ನಡ ವಿ.ವಿ: ₹1.91 ಕೋಟಿಗಿಂತ ಮೇಲೇಳದ ಅನುದಾನ

ಬಜೆಟ್‌ ಕಂಡು ಕನ್ನಡ ವಿವಿ ಕಂಗಾಲು–ಸಚಿವ, ಶಾಸಕರ ನಿಷ್ಕ್ರಿಯತೆಗೆ ಬೇಸರ

ಎಂ.ಜಿ.ಬಾಲಕೃಷ್ಣ
Published 9 ಮಾರ್ಚ್ 2025, 7:10 IST
Last Updated 9 ಮಾರ್ಚ್ 2025, 7:10 IST
ಪ್ರೊ.ಡಿ.ವಿ.ಪರಮಶಿವಮೂರ್ತಿ
ಪ್ರೊ.ಡಿ.ವಿ.ಪರಮಶಿವಮೂರ್ತಿ   

ಹೊಸಪೇಟೆ (ವಿಜಯನಗರ): ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಕಾರ್ಯಗಳಿಗೆ ಕಳೆದ ವರ್ಷದಷ್ಟೇ ಅಂದರೆ ₹1.91 ಕೋಟಿ ಒದಗಿಸಲಾಗಿದೆ. ಇದನ್ನು ಕಂಡು ಕುಲಪತಿ ಸಹಿತ ಇಡೀ ಆಡಳಿತ ಸಿಬ್ಬಂದಿ ಕಂಗಾಲಾಗಿಬಿಟ್ಟಿದ್ದಾರೆ.

ಕಾಯಂ ಸಿಬ್ಬಂದಿಯ ಸಂಬಳ, ನಿವೃತ್ತರ ಪಿಂಚಣಿಗೆಗೆ ಕ್ರಮವಾಗಿ ₹27.57 ಕೋಟಿ ಮತ್ತು ₹14 ಕೋಟಿ ಒದಗಿಸಲಾಗಿದೆ. ಪರಿಶಿಷ್ಟ ಜಾತಿ ಉಪಯೋಜನೆಗೆ (ಎಸ್‌ಸಿಎಸ್‌ಪಿ) ₹6.02 ಲಕ್ಷ, ಗಿರಿಜನ ಉಪಯೋಜನೆಗೆ (ಟಿಎಸ್‌ಪಿ) ₹2.48 ಲಕ್ಷ ಮಾತ್ರ ಒದಗಿಸಲಾಗಿದೆ. ಒಟ್ಟಾರೆ ವಿಶ್ವವಿದ್ಯಾಲಯಕ್ಕೆ ನೀಡಿದ ಅನುದಾನ ₹43.57 ಕೋಟಿ ಎಂಬ ಮಾಹಿತಿ ‘ಪ್ರಜಾವಾಣಿ’ಗೆ ಲಭಿಸಿದೆ.

‘ಸಾಮಾನ್ಯ ಸಹಾಯಾನುದಾನದಲ್ಲೇ ತಾತ್ಕಾಲಿಕ ಸಿಬ್ಬಂದಿ, ಗುತ್ತಿಗೆ ಸಿಬ್ಬಂದಿಗೆ ವೇತನ, ವಿದ್ಯುತ್ ಬಿಲ್‌ ಸಹಿತ ಇತರ ವೆಚ್ಚಗಳನ್ನು ಭರಿಸಬೇಕು ವೇತನ, ಈ ಅನುದಾನವನ್ನು ₹6 ಕೋಟಿಗೆ ಹೆಚ್ಚಿಸಿದರಷ್ಟೇ ವಿಶ್ವವಿದ್ಯಾಲಯವನ್ನು ಸುಗಮವಾಗಿ ಮುನ್ನಡೆಸಲು ಸಾಧ್ಯ ಎಂಬುದನ್ನು ಸರ್ಕಾರಕ್ಕೆ ಮೊದಲಾಗಿ ತಿಳಿಸಿದ್ದೆವು. ಆದರೆ ಅದರ ಅರ್ದದಷ್ಟೂ ಸಹ ಕೊಟ್ಟಿಲ್ಲ. ಕಳೆದ ವರ್ಷ ಎಷ್ಟು ನೀಡಿದ್ದರೋ ಅಷ್ಟೇ ಅನುದಾನ ನೀಡಿದ್ದಾರೆ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ತಿಳಿಸಿದರು.

ADVERTISEMENT

ಹೆಚ್ಚಿನ ವಿಶ್ವವಿದ್ಯಾಲಯಗಳಿಗೆ ಒದಗಿಸಲಾದ  ಅನುದಾನದ ಪಟ್ಟಿಯಲ್ಲಿ ಸಂಬಳ, ಪಿಂಚಣಿಯ ಮಾಹಿತಿಯನ್ನಷ್ಟೇ ನೀಡಲಾಗಿದ್ದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ₹163 ಕೋಟಿ ನೀಡಲಾಗಿದೆ. ಪಟ್ಟಿಯಲ್ಲಿ ಸಾಮಾನ್ಯ ಸಹಾಯಾನುದಾನ ಒಳಗೊಂಡ ವಿಶ್ವವಿದ್ಯಾಲಯಗಳಲ್ಲಿ ಹಂಪಿಯ  ಕನ್ನಡ ವಿಶ್ವವಿದ್ಯಾಲಯ ಮತ್ತು ತುಮಕೂರು ವಿಶ್ವವಿದ್ಯಾಲಯ ಇದೆ. ಈ ಪೈಕಿ ತುಮಕೂರು ವಿಶ್ವವಿದ್ಯಾಲಯಕ್ಕೆ ₹5 ಕೋಟಿ ನೀಡಲಾಗಿದೆ. ಈ ಮೂಲಕ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರದ ತಾರತಮ್ಯ ಮುಂದುವರಿದಿರುವುದು ಗೊತ್ತಾಗುತ್ತದೆ ಎಂದು ಹೇಳಲಾಗಿದೆ.

ಸಿಂಡಿಕೇಟ್ ಸದಸ್ಯರೊಂದಿಗೆ ಚರ್ಚಿಸಿ ಅವರೊಂದಿಗೆ ಏಪ್ರಿಲ್‌ ಬಳಿಕ ಮುಖ್ಯಮಂತ್ರಿ ಅವರನ್ನು ಕಂಡು ಪೂರಕ ಬಜೆಟ್‌ನಲ್ಲಿ ಅನುದಾನ ಒದಗಿಸಲು ವಿನಂತಿಸಲಾಗುವುದು
ಪ್ರೊ.ಡಿ.ವಿ.ಪರಮಶಿವಮೂರ್ತಿ ಕುಲಪತಿ ಹಂಪಿ ಕನ್ನಡ ವಿಶ್ವವಿದ್ಯಾಲಯ
ಸಚಿವರು ಶಾಸಕರು ನಿಷ್ಕ್ರಿಯ?
ಬಳ್ಳಾರಿ ಮತ್ತು ವಿಜಯನಗರ ಎರಡೂ ಜಿಲ್ಲೆಗಳ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌ ಅವರು ತಮ್ಮ ಅಲ್ಪಸಂಖ್ಯಾತ ಇಲಾಖೆಗೆ ಬಜೆಟ್‌ನಲ್ಲಿ ಹಣ ಕೊಡಿಸಲು ಸಫಲರಾಗಿದ್ದಾರೆ. ಆದರೆ ತಮ್ಮ ವ್ಯಾಪ್ತಿಗೆ ಬರುವ ಕನ್ನಡ ವಿಶ್ವವಿದ್ಯಾಲಯದ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಶಾಸಕ ಎಚ್‌.ಆರ್.ಗವಿಯಪ್ಪ ಅವರಿಗೂ ಸಮಸ್ಯೆಯ ಮನವರಿಕೆ ಮಾಡಲಾಗಿತ್ತು ಅವರು ಸಹ ಸರ್ಕಾರದ ಮೇಲೆ ಒತ್ತಡ ಹಾಕಿಲ್ಲದಿರುವುದು ಈ ಬಜೆಟ್‌ನಿಂದ ಮನವರಿಕೆಯಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.