ADVERTISEMENT

ಮೈಲಾರಲಿಂಗೇಶ್ವರ ಕ್ಷೇತ್ರದಲ್ಲಿ ಕಾರ್ಣಿಕೋತ್ಸವ:‘ಸಂಪಾಯಿತಲಾ ಪರಾಕ್‌’ಎಂದ ದೈವವಾಣಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 13:25 IST
Last Updated 4 ಫೆಬ್ರುವರಿ 2026, 13:25 IST
   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕೋತ್ಸವ ನಡೆದಿದ್ದು, ‘ಸಂಪಾಯಿತಲೇ ಪರಾಕ್‌’ ಎಂಬ ದೈವವಾಣಿ ಮೊಳಗಿದೆ. ಇದನ್ನು ಆಲಿಸಿದ ಭಕ್ತರು ನಾಡಿಗೆ ಸುಭಿಕ್ಷವಾಗುತ್ತದೆ ಎಂಬ ತೃಪ್ತಿಯ ಭಾವ ವ್ಯಕ್ತಪಡಿಸಿದ್ದಾರೆ.

ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಐದು ಲಕ್ಷಕ್ಕೂ ಅಧಿಕ ಭಕ್ತರು ಏಳು ಕೋಟಿ.. ಏಳು ಕೋಟಿಗೋ ಚಹಾಂಗ್ ಮಲೋ.’ ಎಂದು ಘೋಷಣೆ ಕೂಗುತ್ತಿದ್ದಂತೆಯೇ ಬಿಲ್ಲನ್ನೇರಿದ ಗೊರವಯ್ಯ ರಾಮಣ್ಣ ’ಸದ್ದಲೆ’ ಎಂದು ಹೇಳಿ ಅರೆಕ್ಷಣ ಆಕಾಶ ದಿಟ್ಟಿಸಿ ನೋಡಿದರು. ‘ಸಂಪಾಯಿತಲೇ ಪರಾಕ್‌’ ಎಂದು ಹೇಳಿ ಬಿಲ್ಲಿನಿಂದ ಕೆಳಗೆ ಜಿಗಿದರು. ಸುತ್ತಲೂ ನೆರೆದಿದ್ದ ಗೊರವ ಸಮೂಹದವರು ಅವರನ್ನು ಕಂಬಳಿಯಲ್ಲಿ ಹಿಡಿದರು.

2020 ಮತ್ತು 2024ರಲ್ಲಿ ಸಹ ಕಾರ್ಣಿಕೋತ್ಸವದಲ್ಲಿ ಇದೇ ದೈವವಾಣಿ ಮೊಳಗಿತ್ತು. 2023ರಲ್ಲಿ ಬರಗಾಲದಿಂದ ಕಂಗೆಟ್ಟಿದ್ದ ನಾಡಿಗೆ ಈ ದೈವವಾಣಿ ಅತ್ಯಂತ ಹಿತವಾಗಿ ಕೇಳಿಸಿತ್ತು. ಇದೀಗ ಮತ್ತೆ ಅದೇ ದೈವವಾಣಿ ಮೊಳಗಿದಂತಾಗಿದೆ. ಕಾರ್ಣಿಕದಲ್ಲಿ ನುಡಿದಂತೆ ಆ ವರ್ಷ ನಾಡಿನಲ್ಲಿ ಉತ್ತಮವಾಗಿ ಮಳೆ ಸುರಿದಿತ್ತು. ‘ಈ ವರ್ಷದ ಕಾರಣಿಕ ನುಡಿಯು ಶುಭ ಸೂಚಕವಾಗಿದೆ. ಮಳೆ, ಬೆಳೆ ಸಮೃದ್ಧವಾಗಿ ನಾಡು ಸುಭಿಕ್ಷೆಯಾಗಲಿದೆ’ ಎಂದು ಭಕ್ತರು ಕಾರಣಿಕ ನುಡಿಯನ್ನು ವ್ಯಾಖ್ಯಾನಿಸಿದರು.

ADVERTISEMENT

ಕಾರ್ಣಿಕ ನುಡಿಗೆ ಮೊದಲು ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶ್ವಾರೂಢರಾಗಿ ಡೆಂಕನಮರಡಿಗೆ ಆಗಮಿಸಿ ಕಾರಣಿಕ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು. ಈ ಹಿಂದೆ ವಿಜಯನಗರದ ಅರಸರು ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ್ದ ಮೂರ್ತಿಗಳ ಉತ್ಸವದೊಂದಿಗೆ ಗೊರವಯ್ಯ ರಾಮಣ್ಣ ಅವರನ್ನು ಸಿಂಹಾಸನ ಕಟ್ಟೆಯಿಂದ ಕಾರಣಿಕ ಸ್ಥಳಕ್ಕೆ ಗೊರವ ಸಮೂಹ ಭವ್ಯ ಮೆರವಣಿಗೆಯಲ್ಲಿ ಕರೆತಂದಿತು. ಈ ವೇಳೆ  'ಏಳು ಕೋಟಿ ಏಳು ಕೋಟಿಗೋ...  ಚಹಾಂಗ ಮಲೋ' ಎಂಬ ಸ್ವಾಮಿಯ ಉದ್ಘೋಷ ಮುಗಿಲು ಮುಟ್ಟಿತು.

ಸಂಜೆ 5.30ಕ್ಕೆ ಕಾರ್ಣಿಕ ನುಡಿ ನಿಗದಿಯಾಗಿತ್ತು. ಮಧ್ಯಾಹ್ನ ಎರಡು ಗಂಟೆಯಿಂದಲೇ ಜನ ವಿವಿಧ ಕಡೆಗಳಿಂದ ಡೆಂಕನಮರಡಿಯತ್ತ ಧಾವಿಸಿ ಬರುತ್ತಿದ್ದರು. ಬಿರು ಬಿಸಿಲನ್ನೂ ಲೆಕ್ಕಿಸದೆ ಲಕ್ಷ ಲಕ್ಷ ಜನರು ಕಾರ್ಣಿಕೋತ್ಸವ ಗದ್ದೆಯ ಸುತ್ತ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.