ADVERTISEMENT

Terror Attack: ಬಳ್ಳಾರಿ ವಿವಿ ಸಿಂಡಿಕೇಟ್‌ ಸಮಿತಿ ಮಾಜಿ ಸದಸ್ಯರ ಕುಟುಂಬ ಪಾರು

ಹರಪನಹಳ್ಳಿಯ ಟಿ.ಎಂ.ರಾಜಶೇಖರ‌ ಕುಟುಂಬ ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 6:27 IST
Last Updated 23 ಏಪ್ರಿಲ್ 2025, 6:27 IST
   

ಹರಪನಹಳ್ಳಿ (ವಿಜಯನಗರ ಜಿಲ್ಲೆ): ಕಾಶ್ಮೀರದ ಪಹಲ್ಗಾಮ್‌ನಲ್ಲಿ ಗುಂಡಿನ ದಾಳಿಯಿಂದ ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲದಯ ಸಿಂಡಿಕೇಟ್‌  ಸಮಿತಿ ಮಾಜಿ ಸದಸ್ಯ ಟಿ.ಎಂ.ರಾಜಶೇಖರ ಅವರು ಮತ್ತು ಅವರ ಕುಟುಂಬದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಏಪ್ರಿಲ್ 18ರಂದು ಕಾಶ್ಮೀರಕ್ಕೆ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದ ಇಲ್ಲಿಯ ಟಿಎಂಎಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಟಿ.ಎಂ.ರಾಜಶೇಖರ, ಪತ್ನಿ ಉಮಾದೇವಿ, ಪುತ್ರಿ ಡಾ.ಗೌರಿಕಾ, ಅಳಿಯ ದೊಡ್ಡಬಸಯ್ಯ ಅವರು ‘ಭೂಮಿಯ ಸ್ವರ್ಗ’ವೆಂದೇ ಕರೆಯಲಾಗುವ ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿರುವ ಪಹಲ್ಗಾಮ್‌ನ ಪ್ರಕೃತಿ ಸೌಂದರ್ಯ ಸವಿದಿದ್ದರು.

ರಾಜಶೇಖರ ಹೊರತುಪಡಿಸಿ ಕುಟುಂಬ ಸದಸ್ಯರು ಮಂಗಳವಾರ ಮಧ್ಯಾಹ್ನ 2.18ಕ್ಕೆ ಬೈಸರನ್‌ನಲ್ಲಿ ಸಫರಾನ್ ಖರೀದಿಸಲು ಪಕ್ಕದ ಅಂಗಡಿಗೆ ಬಳಿ ಬಂದಿದ್ದರು. ಆಗ ದಿಢೀರ್‌ ನುಗ್ಗಿದ ಐವರು ಉಗ್ರರು ಐದಾರು ಅಡಿ ಅಂತರದಲ್ಲಿ ಗುಂಡಿನ ದಾಳಿ ನಡೆಸುತ್ತಿರುವುದನ್ನು ಕಂಡು, ಅಲ್ಲಿಂದ ತಪ್ಪಿಸಿಕೊಂಡು ಕೆಳಗಡೆ ಇಳಿದು ಜೀವ ರಕ್ಷಿಸಿಕೊಂಡಿದ್ದಾರೆ.

ADVERTISEMENT

ಸೇನಾ ತುಕಡಿ ನಿಯೋಜಿಸಿರಲಿಲ್ಲ: ‘ಶ್ರೀನಗರದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳವು ಅತ್ಯಂತ ಸುಂದರ ಪ್ರವಾಸಿ ತಾಣವಾಗಿದ್ದು, ದೇಶ ವಿದೇಶಗಳಿಂದ ನಿತ್ಯ ಸಾವಿರಾರು ಜನ ಪ್ರವಾಸಿಗರು ಬರುತ್ತಿದ್ದರು. ಕೇಂದ್ರ ಸರ್ಕಾರ ಇಲ್ಲಿ ಸೇನಾ ತುಕಡಿಗಳನ್ನು ನಿಯೋಜಿಸಿಲ್ಲ. ಈ ಸ್ಥಳದಲ್ಲಿ ಯಾವುದೇ ಮೊಬೈಲ್ ನೆಟ್ವರ್ಕ್ ಇಲ್ಲ ಹಾಗೂ ಇತಿಹಾಸದಲ್ಲಿ ಯಾವುತ್ತೂ ಕೂಡ ಈ ಸ್ಥಳದಲ್ಲಿ ಉಗ್ರಗಾಮಿಗಳು ದಾಳಿ ನಡೆದಿರಲಿಲ್ಲ’ ಎಂದು ರಾಜಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಘಟನೆ ಸಂಭವಿಸಿ ಎಲ್ಲರ ಕಣ್ಣ ಮುಂದೆ ಹತ್ತಾರು ಮಂದಿ ಉಗ್ರರಿಂದ ಹತ್ಯೆಯಾದ ಒಂದು ತಾಸಿನ ನಂತರ ಈ ಸ್ಥಳಕ್ಕೆ ಭಾರತೀಯ ಸೈನ್ಯ ಬಂದಿದೆ. ಅಲ್ಲಿರುವ ಪ್ರವಾಸಿಗರು ಜೀವವನ್ನು ಕೈನಲ್ಲಿ ಹಿಡಿದು ಕುಟುಂಬದ ಸದಸ್ಯರನ್ನು ದೂರ ಮಾಡಿ ರೋದಿಸುತ್ತಾ ಇದ್ದರೂ ಯಾರು ಅವರನ್ನು ಕೇಳುವವರಿರಲಿಲ್ಲ. ಉಗ್ರರಿಂದ ತಪ್ಪಿಸಿಕೊಳ್ಳಲು ಜೀವ ಭಯದಿಂದ ಓಟವನ್ನು ಕಿತ್ತವರ ಕಾಲಿಗೆ ಸಿಕ್ಕ ಚಿಕ್ಕ ಮಕ್ಕಳು, ಮಹಿಳೆಯರು ಗಾಯಗಳಿಂದ ನರಳಾಡುತ್ತಿದ್ದರು. ತಮ್ಮ ಕುಟುಂಬದವರ ಜೀವ ರಕ್ಷಣೆಯ ಯತ್ನದಲ್ಲಿ ಉಳಿದವರನ್ನು ಸಂತೈಸುವ ಸ್ಥಿತಿಯಲ್ಲಿ  ಯಾರೂ ಇರಲಿಲ್ಲ’ ಎಂದು ಅವರು ಭಯಾನಕ ಸನ್ನಿವೇಶವನ್ನು ವಿವರಿಸಿದರು.

ಬರಬೇಡಿ: ‘ಸದ್ಯ ಪಹಲ್ಗಾಮ್‌ಗೆ ಕರ್ನಾಟಕದ ಯಾವ ಪ್ರವಾಸಿಗರೂ ಬರಬೇಡಿ, ಈ ಸ್ಥಳವು ನೋಡಲು ಸ್ವರ್ಗದಂತೆ ಇರುವುದು ಅಕ್ಷರಶಃ ಸತ್ಯವಾದರೂ ಉಗ್ರರು ಯಾವ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸುತ್ತಾರೆ ಎನ್ನುವುದು ಅರಿವಿಗೆ ಬರುವುದಿಲ್ಲ. ಪೂರ್ವಜರು ಮಾಡಿದ ಪುಣ್ಯದ ಫಲದಿಂದ ನನ್ನ ಕುಟುಂಬವು ಮರು ಜೀವ ಪಡೆದು ಇಂದು ಸುರಕ್ಷಿತ ಸ್ಥಳಕ್ಕೆ ಬಂದು ತಲುಪಿದ್ದೇವೆ’ ಎಂದು ರಾಜಶೇಖರ್ ಹೇಳಿದರು.

ದುಬಾರಿ ದರ: ‘ಗುರುವಾರ ಕಾಶ್ಮೀರದಿಂದ ಕರ್ನಾಟಕಕ್ಕೆ ತೆರಳಲು ವಿಮಾನದ ಟಿಕೆಟ್ ಬುಕ್ ಆಗಿದೆ, ಉಗ್ರರ ದಾಳಿಯಿಂದ ವಿಮಾನ ಟಿಕೆಟ್ ದರವನ್ನು ₹30 ಸಾವಿರದಿಂದ ₹40 ಸಾವಿರದವರೆಗೆ ಏರಿಕೆ ಮಾಡಲಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.