ADVERTISEMENT

ಹೊಸಪೇಟೆ: ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಕಳಪೆ– ಕೆ.ಬಿ. ಹಿರೇಮಠ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 10:41 IST
Last Updated 15 ಸೆಪ್ಟೆಂಬರ್ 2022, 10:41 IST
ಸಾಮಾಜಿಕ ಕಾರ್ಯಕರ್ತ ಕೆ.ಬಿ. ಹಿರೇಮಠ
ಸಾಮಾಜಿಕ ಕಾರ್ಯಕರ್ತ ಕೆ.ಬಿ. ಹಿರೇಮಠ   

ಹೊಸಪೇಟೆ (ವಿಜಯನಗರ): ‘ನಗರದ ಮುನ್ಸಿಪಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿ ಕಳಪೆಯಾಗಿದ್ದು, ಅದು ಯಾವುದೇ ರೀತಿಯ ಆಟವಾಡುವುದಕ್ಕೆ ಯೋಗ್ಯವಾಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಬಿ. ಹಿರೇಮಠ ಆರೋಪಿಸಿದರು.

ಕ್ರೀಡಾಂಗಣದ ಮಧ್ಯ ಭಾಗದಲ್ಲಿ 405 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಿಸಲಾಗಿದೆ. ಕ್ರೀಡಾಂಗಣದ ನಡುವಿನಲ್ಲಿ ಧ್ವಜಸ್ತಂಭವಿದ್ದರೆ ಯಾವ ಆಟವಾಡಲು ಆಗುತ್ತದೆಯೇ? ತುಂಗಭದ್ರಾ ಜಲಾಶಯದಿಂದ ಹೂಳು ತಂದು ಮೈದಾನದಲ್ಲಿ ಸುರಿದು ಸಮತಟ್ಟುಗೊಳಿಸಲಾಗಿದೆ. 80 ಸಾವಿರ ಕ್ಯುಬಿಕ್‌ ಮಣ್ಣು ತರುವುದಕ್ಕೆ ಗಣಿ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದರು.

ತರಾತುರಿಯಲ್ಲಿ 405 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಿಸುವ ಅಗತ್ಯವೇನಿತ್ತು? ತರಾತುರಿಯಲ್ಲಿ ಕೆಲಸ ಮುಗಿಸಿರುವುದಕ್ಕೆ ಧ್ವಜಸ್ತಂಭ ಒಂದು ಕಡೆ ವಾಲಿದೆ. ಆ. 15ರಂದು ಬೆಳಿಗ್ಗೆ 9ಕ್ಕೆ ಧ್ವಜಾರೋಹಣ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ರಾತ್ರೋ ರಾತ್ರಿ ಧ್ವಜಾರೋಹಣ ಮಾಡಿದ್ದಾರೆ. ನಾಲ್ಕೈದು ದಿನಗಳ ನಂತರ ಅದನ್ನು ಕೆಳಗಿಳಿಸಿದ್ದಾರೆ. ಟೆಂಡರ್‌ ಕರೆಯದೇ ಕಾಮಗಾರಿ ಕೈಗೆತ್ತಿಕೊಂಡು ಧ್ವಜಸ್ತಂಭದಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಸಲಾಗಿದ್ದು, ಅಧಿಕಾರಿಗಳು ಶಾಮಿಲಾಗಿದ್ದಾರೆ. ಈ ಕುರಿತು ಮುಖ್ಯಮಂತ್ರಿಯವರ ಕಾರ್ಯದರ್ಶಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಹಾಲಿ ಇರುವ ಕ್ರೀಡಾಂಗಣದ ಮಧ್ಯ ಭಾಗದಲ್ಲಿ ಕೂರಿಸಿರುವ ಧ್ವಜಸ್ತಂಭವನ್ನು ಒಂದು ಬದಿಗೆ ಸ್ಥಳಾಂತರ ಮಾಡಬೇಕು. ಎಲ್ಲ ರೀತಿಯ ಆಟಗಳನ್ನು ಆಡುವುದಕ್ಕೆ ಅನುಕೂಲ ಕಲ್ಪಿಸಬೇಕು. ಯಾರ ಗಮನಕ್ಕೂ ತರದೇ ಬ್ಯಾಸ್ಕೆಟ್‌ಬಾಲ್‌ ಅಂಗಳ ಒಡೆದು ಹಾಕಲಾಗಿದೆ. ಅಂಥ ಗುಣಮಟ್ಟದ ಕಾಮಗಾರಿ ಈಗ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ರಾಷ್ಟ್ರೀಯ ಹೆದ್ದಾರಿ 50ರ ಬಳಿ ₹35 ಕೋಟಿಯಲ್ಲಿ 35 ಎಕರೆಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ. ಆದರೆ, ಅದನ್ನು ₹35 ಕೋಟಿಯಲ್ಲಿ ನಿರ್ಮಿಸಲು ಆಗುವುದಿಲ್ಲ. ನೂರಾರು ಕೋಟಿ ರೂಪಾಯಿ ಬೇಕು. ಅದರ ನಿರ್ಮಾಣಕ್ಕೆ ಕನಿಷ್ಠ ಏನಿಲ್ಲವೆಂದರೂ ಹತ್ತು ವರ್ಷಗಳಾದರೂ ಬೇಕಾಗಬಹುದು. ಅದುವರೆಗೆ ಕ್ರೀಡಾಪಟುಗಳು ಎಲ್ಲಿ ಸಿದ್ಧತೆ ಮಾಡಬೇಕು. ಎಲ್ಲಿ ಆಟವಾಡಬೇಕು ಎಂದು ಪ್ರಶ್ನಿಸಿದರು.ಕ್ರೀಡಾಪಟು ರಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.