ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಮುಂಗಾರು ಮಳೆ ಹದವಾಗಿ ಸುರಿದು ಕೃಷಿ ಚಟುವಟಿಕೆ ಚುರುಕಾಗಿದ್ದು, ಇದುವರೆಗೆ ಶೇ 86ರಷ್ಟು ಬಿತ್ತನೆ ಕಾರ್ಯ ನಡೆದಿದೆ. ಮೆಕ್ಕೆಜೋಳ ಬೆಳೆ ಪ್ರದೇಶ ನಿಗದಿತ ಗುರಿಗಿಂತ 18 ಸಾವಿರ ಹೆಕ್ಟೇರ್ ಹೆಚ್ಚುವರಿ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಜಿಲ್ಲೆಯಲ್ಲಿ 2.78 ಲಕ್ಷ ಹೆಕ್ಟೇರ್ ಕೃಷಿಯೋಗ್ಯ ಭೂಮಿ ಇದ್ದು, ಈ ಪೈಕಿ 63 ಸಾವಿರ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಇದೆ, ಉಳಿದ 2.16 ಲಕ್ಷ ಹೆಕ್ಟೇರ್ ಪ್ರದೇಶ ಮಳೆಯಾಶ್ರಿತವಾಗಿದೆ. ನೀರಾವರಿ ಪ್ರದೇಶದ 51 ಸಾವಿರ ಹೆಕ್ಟೇರ್‌ನಲ್ಲಿ ಹಾಗೂ ಮಳೆಯಾಶ್ರಿತ ಪ್ರದೇಶದ 1.88 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ.
‘ಈ ಬಾರಿ ಮೆಕ್ಕೆಜೋಳ ಬಿತ್ತನೆ ಗುರಿ 1.91 ಲಕ್ಷ ಹೆಕ್ಟೇರ್ ಇತ್ತು, ಸದ್ಯ 2.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ನಡೆದಿದೆ. ಶೇಂಗಾ, ರಾಗಿ ಮತ್ತು ಇತರ ಕೆಲವು ಬೆಳೆಗಳ ಬಿತ್ತನೆ ಮಾತ್ರ ಬಾಕಿ ಇದೆ, ಈ ತಿಂಗಳ ಅಂತ್ಯದ ವೇಳೆಗೆ ಮುಂಗಾರು ಮಳೆ ಇನ್ನಷ್ಟು ಸುರಿಯುವ ನಿರೀಕ್ಷೆ ಇರುವ ಕಾರಣ ಗುರಿ ಮೀರಿ ಈ ಬಾರಿ ಬಿತ್ತನೆ ಸಾಧ್ಯವಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಿ.ಟಿ.ಮಂಜುನಾಥ್ ತಿಳಿಸಿದರು.
ಜಿಲ್ಲೆಯಲ್ಲಿ ಜೋಳ ಕೃಷಿ ಅಷ್ಟಾಗಿ ಇಲ್ಲ, ಹೀಗಿದ್ದರೂ 5,373 ಹೆಕ್ಟೇರ್ ಗುರಿ ಇದ್ದು, ಇದುವರೆಗೆ 3,549 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ. ಭತ್ತಕ್ಕೆ 14,400 ಹೆಕ್ಟೇರ್ ಗುರಿ ಇದ್ದು, ಇದುವರೆಗೆ 4,401 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ. ರಾಗಿ ಬೆಳೆ ಗುರಿ 15,600 ಹೆಕ್ಟೇರ್ ಇದ್ದು, ಸದ್ಯ 916 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಆಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ರೋಗ ನಿಯಂತ್ರಣ
ಹೊಸಪೇಟೆ ತಾಲ್ಲೂಕಿನ ಹೊಸೂರು ಮಾಗಣೆಯಲ್ಲಿ ಸುಮಾರು 40 ಹೆಕ್ಟೇರ್ ಪ್ರದೇಶದಲ್ಲಿ ಸ್ಟೆಮ್ ಬೋರರ್ ಬಾಧೆ ಕಾಣಿಸಿತ್ತು ಅದು ಈಗ ನಿಯಂತ್ರಣಕ್ಕೆ ಬಂದಿದೆ. ಮರಿಯಮ್ಮನಹಳ್ಳಿ ಭಾಗದಲ್ಲಿ ಸ್ವಲ್ಪ ಮಳೆ ಕೊರತೆ (19 ಮಿ.ಮೀ.) ಇದೆ ಮುಂದಿನ ದಿನಗಳಲ್ಲಿ ಮಳೆ ಉತ್ತಮವಾಗಿ ಸುರಿಯುವ ನಿರೀಕ್ಷೆ ಇರುವ ಕಾರಣ ಕೃಷಿಕರಿಗೆ ಸದ್ಯ ಯಾವ ಆತಂಕವೂ ಇಲ್ಲ ಸಂಡೂರು ಭಾಗದ ರೈತರು ಹೊಸಪೇಟೆ ಕಡೆಯಿಂದ ರಸಗೊಬ್ಬರ ಕೊಂಡೊಯ್ಯುವ ಕಾರಣ ಸ್ವಲ್ಪ ಅಭಾವ ಕಾಣಿಸಿದ್ದರೂ ಸದ್ಯ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮನೋಹರ ಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.