ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಮೈಕ್ರೊ ಯೋಜನೆಯಡಿ ವಿಜಯನಗರ ಕ್ಷೇತ್ರಕ್ಕೆ ₹100 ಕೋಟಿ ಅನುದಾನ ಹಂಚುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ.
ಸಚಿವರು ಈ ಸಂಬಂಧ ಆ.5ರಂದು ಬರೆದ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ‘ನಗರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯವನ್ನು 25ರಿಂದ 400ಕ್ಕೆ ಹೆಚ್ಚಿಸಲು ಹಾಗೂ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಈ ಅನುದಾನ ವಿನಿಯೋಗಿಸಲಾಗುತ್ತದೆ’ ಎಂದು ತಿಳಿದುಬಂದಿದೆ.
ಈ ಎರಡು ಉದ್ದೇಶಗಳಿಗಾಗಿ ₹100 ಕೋಟಿ ನೀಡಲೇಬೇಕು ಎಂದು ಶಾಸಕ ಎಚ್.ಆರ್. ಗವಿಯಪ್ಪ ಪಟ್ಟು ಹಿಡಿದಿದ್ದರು. ಆ.14ರಂದು ನಡೆದ ಕೆಡಿಪಿ ಸಭೆಯಲ್ಲಿ ಸಚಿವರು ನೂತನ ಆಸ್ಪತ್ರೆಯ ಸಾಮರ್ಥ್ಯವನ್ನು 400ಕ್ಕೆ ಹೆಚ್ಚಿಸಲಾಗುವುದು ಎಂದು ಪ್ರಕಟಿಸಿದ್ದರು.
‘ನೂತನ ಜಿಲ್ಲಾ ಕೇಂದ್ರವಾದ ಹೊಸಪೇಟೆ ನಗರ ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಹಲವು ಕಾಮಗಾರಿಗಳು ಆಗಲೇಬೇಕಾಗಿದೆ. ಮೈಕ್ರೊ ಯೋಜನೆಯಡಿ ಕ್ಷೇತ್ರಕ್ಕೆ ಕೇವಲ ಶೇ 7.75ರಷ್ಟು ಅನುದಾನ ಹಂಚಿಕೆ ಮಾಡಲಾಗಿದ್ದು, ಇದನ್ನು ಹೆಚ್ಚಿಸಬೇಕು ಎಂಬ ತಮ್ಮ ಕೋರಿಕೆ ಮನ್ನಿಸಿದ್ದಾರೆ’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.